ಮುಲ್ಲಾಮಾರಿ ಜಲಾಶಯದಿಂದ 650 ಕ್ಯುಸೆಕ್ ನೀರು ನದಿಗೆ

| Published : Jul 04 2024, 01:04 AM IST

ಮುಲ್ಲಾಮಾರಿ ಜಲಾಶಯದಿಂದ 650 ಕ್ಯುಸೆಕ್ ನೀರು ನದಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಂಚೋಳಿ ತಾಲೂಕಿನಲ್ಲಿ ಕಳೆದ ಮಂಗಳವಾರ ರಾತ್ರಿ ಭಾರಿ ಬಿರುಗಾಳಿ ಸಮೇತವಾಗಿ ಸುರಿದ ಧಾರಾಕಾರವಾಗಿ ಮಳೆಯಿಂದಾಗಿ ಅನೇಕ ತಾಂಡಾ/ ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಪೂರೈಕೆ ಇಲ್ಲದೇ ಜನರು ತೊಂದರೆಪಡಬೇಕಾಯಿತು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನಲ್ಲಿ ಕಳೆದ ಮಂಗಳವಾರ ರಾತ್ರಿ ಭಾರಿ ಬಿರುಗಾಳಿ ಸಮೇತವಾಗಿ ಸುರಿದ ಧಾರಾಕಾರವಾಗಿ ಮಳೆಯಿಂದಾಗಿ ಅನೇಕ ತಾಂಡಾ/ ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಪೂರೈಕೆ ಇಲ್ಲದೇ ಜನರು ತೊಂದರೆಪಡಬೇಕಾಯಿತು. ಬಿರುಗಾಳಿಗೆ ಕನಕಪೂರ-ಹೂಡದಳ್ಳಿ ರಸ್ತೆ ಮಾರ್ಗದಲ್ಲಿ ಭಾರೀ ಗಾತ್ರದ ಹೆಮ್ಮರ ನೆಲಕ್ಕುರುಳಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ತಾಲೂಕಿನಲ್ಲಿ ಜೋರಾಗಿ ಬಿದ್ದ ಮಳೆಗೆ ಮುಲ್ಲಾಮಾರಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದರಿಂದ ನದಿಗೆ ೬೫೦ ಕ್ಯುಸೆಕ್ ನೀರು ನದಿಗೆ ಹರಿದು ಬಿಟ್ಟಿದ್ದರಿಂದ ರೈತರು ಹೊಲಗಳಿಗೆ ಹೋಗಲು ತೊಂದರೆ ಪಡಬೇಕಾಯಿತು.

ಕೆಳದಂಡೆ ಮುಲ್ಲಾಮಾರಿ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದರಿಂದ ಮಂಗಳವಾರ ರಾತ್ರಿ ೯ಗಂಟೆಗೆ ಒಂದು ಗೇಟು ಒಂದು ಫೀಟ್‌ ಮೇಲೆತ್ತಿ ನದಿಗೆ ೬೫೦ ಕ್ಯುಸೆಕ್‌ ನೀರ ಹರಿ ಬಿಡಲಾಗಿದೆ ಎಂದು ಯೋಜನೆಯ ಎಇಇ ತ್ರಿಲೋಚನ ಜಾಧವ್ ತಿಳಿಸಿದ್ದಾರೆ.

ಮುಲ್ಲಾಮಾರಿ ಜಲಾಶಯ ಅಚ್ಚುಕಟ್ಟು ಪ್ರದೇಶಗಳಾದ ಐನಾಪೂರ, ಚಿಟಗುಪ್ಪಾ, ಚೆಂಗಟಾ, ಬಸಂತಪೂರ ಗಡಿಲಿಂಗದಳ್ಳಿ, ಚಂದನಕೇರಾ, ಎಲ್ಮಡಗಿ ಇನ್ನಿತರ ಗ್ರಾಮಗಳಲ್ಲಿ ವ್ಯಾಪಕ ಮಳೆ ಆಗುತ್ತಿದ್ದು ಯಾವುದೇ ಕ್ಷಣದಲ್ಲಿ ನೀರು ನದಿಗೆ ಹರಿದು ಬಿಡಲಾಗುತ್ತಿರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸಹಾಯಕ ಅಭಿಯಂತರ (ಎಇ) ವಿನಾಯಕ ರಾಠೋಡ ಮನವಿ ಮಾಡಿಕೊಂಡಿದ್ದಾರೆ.

ಬಿರುಗಾಳಿ ಸಮೇತವಾಗಿ ಸುರಿದ ಭಾರಿ ಮಳೆಗೆ ಕನಕಪೂರ-ಹೂಡದಳ್ಳಿ ರಾಜ್ಯಹೆದ್ದಾರಿಯಲ್ಲಿ ಬೆಳೆದು ನಿಂತಿದ್ದ ಹಳೆಯ ಮರವೊಂದು ನೆಲಕ್ಕರುಳಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಯಿತು. ಚಿಂಚೋಳಿ-ಚಂದಾಪೂರ ಅವಳಿ ನಗರ ಪ್ರದೇಶದಲ್ಲಿದ್ದ ವಿದ್ಯುತ್‌ ಪರಿವರ್ತಕಗಳು ಕೆಟ್ಟಿದ್ದರಿಂದ ಮಧ್ಯರಾತ್ರಿವರೆಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ಜನರು ಕತ್ತಲಿನಲ್ಲಿಯೇ ಕಳೆಯಬೇಕಾಯಿತು.

ಐನಾಪೂರ ಕೆರೆ ಭರ್ತಿ:

ತಾಲೂಕಿನಲ್ಲಿ ಧಾರಕಾರವಾಗಿ ಸುರಿದ ಮಳೆಯಿಂದ ಸಣ್ಣ ನೀರಾವರಿ ಕೆರೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕೆರೆಗಳಲ್ಲಿ ೨-೩ ಅಡಿ ನೀರು ಸಂಗ್ರಹಣೆ ಆಗುತ್ತಿದೆ. ಐನಾಪೂರ ಗ್ರಾಮದ ಸಣ್ಣ ನೀರಾವರಿ ಕೆರೆ ಭರ್ತಿಯಾಗಿ ತುಂಬಿ ಹರಿಯುತ್ತಿದೆ ಎಂದು ಎಇಇ ಇಂದುಧರ ಮಂಗಲಗಿ ತಿಳಿಸಿದ್ದಾರೆ.