ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿರುವ ಅಬಕಾರಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಆರೋಪಿಗಳನ್ನು ಬಂಧಿಸಿ ಆರೋಪಿತರಿಂದ ಸುಮಾರು 6 ಕೆಜಿಗಳಷ್ಟು ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.ನಗರ ಮತ್ತು ಹೊರವಲಯಗಳಲ್ಲಿ ಗಾಂಜಾ ಮಾರಾಟ ಮತ್ತು ಸೇವನೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ಬೆನ್ನತ್ತಿದ ಅಬಕಾರಿ ಅಧಿಕಾರಿಗಳು ಇತ್ತೀಚೆಗೆ ಮಿಂಚಿನ ಕಾರ್ಯಾಚರಣೆಗಳನ್ನು ನಡೆಸಿ ಪ್ರಕರಣ ದಾಖಲಿಸಿ ಆರೋಪಿಗಳಿಗೆ ಹೆಡೆಮುರಿ ಕಟ್ಟುತ್ತಿದ್ದಾರೆ. ಅಬಕಾರಿ ನಿರೀಕ್ಷಕರಾಗಿ ಇತ್ತೀಚೆಗೆ ಅರಸೀಕೆರೆಗೆ ಬಂದಿರುವ ರಮ್ಯ ಎಚ್.ಡಿ. ಮತ್ತು ತಂಡ ಹಾಗೂ ಹಾಸನ ಜಿಲ್ಲಾ ಅಬಕಾರಿ ಆಯುಕ್ತರ ಕಚೇರಿ ಹೆಚ್ಚುವರಿ ಪ್ರಭಾರ ಉಪನಿರೀಕ್ಷಕ ಜಯಕುಮಾರ್ ವಿ.ಜಿ. ನೇತೃತ್ವದಲ್ಲಿ ತಾಲೂಕಿನ ನಡೆದ ಮೂರನೆ ದಾಳಿ ಇದಾಗಿದ್ದು ಮೂರು ದಾಳಿಯಲ್ಲೂ ಬಾರಿ ಮೊತ್ತದ ಗಾಂಜಾ ವಶಪಡಿಸಿಕೊಂಡಿದ್ದು ಪ್ರಶಂಸಿಸಬೇಕಾದ ಸಂಗತಿಯಾಗಿದೆ.ಅಬಕಾರಿ ನಿರೀಕ್ಷಕಿ ರಮ್ಯಾ ಅವರು ಸಿಬಂದಿಯೊಂದಿಗೆ ಸೆ. 13ರ ಶನಿವಾರ ರಾತ್ರಿ ವೇಳೆ ರಸ್ತೆ ಕಾವಲಿನಲ್ಲಿದ್ದಾಗ ತಾಲೂಕಿನ ಬಂಡೀಹಳ್ಳಿ ಸಮೀಪ ಬೈಕ್ ಒಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾ ವಶಪಡಿಸಿಕೊಂಡಿದ್ದು ಕುಮಾರಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಬೈಕ್ ಸವಾರ ಅಭಿಲಾಷ್ ಬೈಕ್ ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾನೆ. ಬಂಧಿತಳಿಂದ ಸುಮಾರು 520 ಗ್ರಾಂ ತೂಕದ ಸುಮಾರು ಹದಿನೈದು ಸಾವಿರ ಬೆಲೆ ಬಾಳುವ ಗಾಂಜಾ, ಸಾಗಾಣಿಕೆಗೆ ಬಳಸುತ್ತಿದ್ದ ಬೈಕ್ ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಅಬಕಾರಿ ಆಯುಕ್ತರ ಕಚೇರಿ ಹೆಚ್ಚುವರಿ ಪ್ರಭಾರ ಉಪನಿರೀಕ್ಷಕ ಜಯಕುಮಾರ್ ವಿ.ಜಿ. ನೇತೃತ್ವದಲ್ಲಿ ಮತ್ತೊಂದು ದಾಳಿ ನಡೆದು ಪ್ರಕರಣ ದಾಖಲಾಗಿದ್ದು, ಲಕ್ಷ್ಮೀದೇವರಹಳ್ಳಿ ಸಮೀಪ ಸುಮಾರು 13 ಸಾವಿರ ಬೆಲೆಬಾಳುವ 429 ಗ್ರಾಂ ಗಾಂಜಾ ಹಾಗೂ ಸಾಗಾಣಿಕೆಗೆ ಬಳಸುತ್ತಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಂಡು ಇರ್ಷಾದ್ ಉಲ್ಲಾ ಖಾನ್, ರಿಜ್ವಾನ್ ಖಾನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡೂ ಪ್ರಕರಣಗಳ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಕಳೆದ ಆಗಸ್ಟ್ ತಿಂಗಳಿನಲ್ಲೂ ಕೂಡ ಜಯಕುಮಾರ್ ಮತ್ತು ತಂಡ ದಾಳಿ ನಡೆಸಿ ಸುಮಾರು 5 ಕೆಜಿ ಗಾಂಜಾ ವಶಪಡಿಸಿಕೊಂಡು ಸಯ್ಯದ್ ಜುನೇದ್, ಸಯ್ಯದ್ ರುಹಾನ್ ಹಾಗೂ ಶೇಕ್ ಹುಸೇನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದರು.
ನಗರದಲ್ಲೂ ಇಂತಹ ಪ್ರಕರಣಗಳು ಸಾಕಷ್ಟು ಇದ್ದು ರಾಜಾರೋಷವಾಗಿ ಗಾಂಜಾ ಮಾರಾಡ ನಡೆಯುತ್ತಿದ್ದು ಅಬಕಾರಿ ಇಲಾಖೆ ಜೊತೆ ಪೊಲೀಸ್ ಇಲಾಖೆಯೂ ಕೈಜೋಡಿಸಿ ಕೆಲಸ ಮಾಡುವ ಅವಶ್ಯಕತೆ ಇದೆ. ಮೈಸೂರು ವಿಭಾಗ ಅಬಕಾರಿ ಜಂಟಿ ಆಯುಕ್ತ, ಉಪಆಯುಕ್ತರು, ಉಪಾಧೀಕ್ಷಕರು ಅಬಕಾರಿ ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ನೀಡಿದ್ದಾರೆ.ಸದರಿ ದಾಳಿಯಲ್ಲಿ ಸಿಬ್ಬಂದಿ ರಂಜಿತ, ತೋಟದೇಶ, ಆರ್ ಮಲ್ಲಿಕಾರ್ಜುನ ಬಿ ಗಿಣ್ಣಿ, ಮಲ್ಲಿಕಾರ್ಜುನ ಕಲಬುರಗಿ, ಚಾಲಕ ಮತ್ತಿತರು ಹಾಜರಿದ್ದರು.