ಸಾರಾಂಶ
ದಾವಣಗೆರೆ : ಹಿಂಗಾರು ಹಂಗಾಮಿನ ಅಕ್ಟೋಬರ್‌ನಲ್ಲಿ ಈವರೆಗೆ ವಾಡಿಕೆಗಿಂತ ಶೇ.66ರಷ್ಟು ಅಧಿಕ ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಈವರೆಗೆ 56,993 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾದ ಬಗ್ಗೆ ವರದಿ ಇದೆ. ಮೂರು ದಿನದಲ್ಲಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಮೂರೂ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಿ, 15 ದಿನದೊಳಗೆ ನೇರ ನಗದು ವರ್ಗ(ಡಿಬಿಟಿ) ಮೂಲಕ ರೈತರಿಗೆ ಪರಿಹಾರ ನೀಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಜಗಳೂರು ತಾಲೂಕಿನ ಸಂಗೇನಹಳ್ಳಿಯಲ್ಲಿ ಶುಕ್ರವಾರ ಕೆರೆಕೋಡಿ ವೀಕ್ಷಣೆ, ಹಿರೇಮಲ್ಲನಹೊಳೆ ಗ್ರಾಮದಲ್ಲಿ ಮನೆ ಹಾನಿ, ಬೆಳೆ ಹಾನಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ 15 ದಿನಗಳೊಳಗೆ ಬೆಳೆ ಹಾನಿ ನೀಡಬೇಕು ಎಂದರು.
ಅಕ್ಟೋಬರ್‌ನಲ್ಲೇ ಅತಿ ಹೆಚ್ಚು ಮಳೆಯಾಗಿದ್ದು, ಪ್ರಾಥಮಿಕ ಅಂದಾಜು ಬೆಳೆ ನಷ್ಟಕ್ಕಿಂತಲೂ ಹೆಚ್ಚು ನಷ್ಟ ಆಗಿರುವ ನಿರೀಕ್ಷೆ ಇದೆ. ಮೂರು ದಿನದಲ್ಲಿ ಜಂಟಿ ಸಮೀಕ್ಷೆ ಮುಗಿಸಲಿದ್ದು, ಆಗ ಬೆಳೆ ನಷ್ಟದ ಬಗ್ಗೆ ನಿಖರ ಅಂಕಿ-ಅಂಶ, ಮಾಹಿತಿ ಲಭ್ಯವಾಗಲಿದೆ. ಇದೇ ವಿಚಾರಕ್ಕೆ ಮುಖ್ಯಮಂತ್ರಿ ಜತೆ ಅತಿವೃಷ್ಟಿಗೆ ತುತ್ತಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಅ.26ರಂದು ವಿಡಿಯೋ ಕಾನ್ಫರೆನ್ಸ್ ಮಾಡಿ, ಮಳೆ ಹಾನಿ ಪರಿಶೀಲನೆ ನಡೆಸಿ, ಸೂಕ್ತ ಸಲಹೆ, ಸೂಚನೆ ನೀಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ 21 ಮಂದಿ ಪ್ರಾಣ ಹಾನಿಯಾಗಿದೆ. ಇದರಲ್ಲಿ 9 ಜನ ಸಿಡಿಲು ಬಡಿದು ಮೃತಪಟ್ಟಿದ್ದರೆ, 6 ಜನ ಮನೆ ಕುಸಿತದಿಂದ ಸಾವಿಗೀಡಾಗಿದ್ದಾರೆ. 3-4 ಜನ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮುಂಗಾರು ಸೇರಿ ಈವರೆಗೆ 121 ಮಂದಿ ರಾಜ್ಯದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮುಂಗಾರು ಹಂಗಾಮಿನಲ್ಲಿ 2589 ಮತ್ತು ಹಿಂಗಾರಿನಲ್ಲಿ 121 ಮನೆಗಳು ಬಿದ್ದಿವೆ. ಸಂತ್ರಸ್ತರಿಗೆ ಪರಿಹಾರದ ಜೊತೆ ಮನೆಗಳನ್ನೂ ನಿರ್ಮಿಸಿ ಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಮನೆಗಳು ಬಿದ್ದು ಹೋಗಿದ್ದರೆ ಎಸ್‌ಡಿಆರ್‌ಎಫ್‌ನಡಿ ₹1 ಲಕ್ಷ ಪರಿಹಾರ ನೀಡಲಾಗುವುದು. ಮುಂಗಾರು ಹಂಗಾಮಿನಲ್ಲಿ 1.18 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಈಗಾಗಲೇ ಪರಿಹಾರ ನೀಡಿದ್ದು, ಕೆಲವೇ ದಿನಗಳಲ್ಲಿ ಮುಂಗಾರು ಬೆಳೆ ನಷ್ಟ ಪರಿಹಾರ ಪಾವತಿಯೂ ಪೂರ್ಣಗೊಳ್ಳಲಿದೆ. ಹಿಂಗಾರು ಬೆಳೆ ನಷ್ಟದ ಸಮೀಕ್ಷೆ ಮುಗಿಸಿದ 15 ದಿನದಲ್ಲೇ ಬೆಳೆ ನಷ್ಟಕ್ಕೀಡಾದ ರೈತರ ಖಾತೆಗೆ ಪರಿಹಾರದ ಹಣ ಜಮೆ ಮಾಡುವುದಾಗಿ ಪುನರುಚ್ಚರಿಸಿದರು.
ಜೀವಹಾನಿ, ಬೆಳೆಹಾನಿ, ಮನೆಗಳು ಬಿದ್ದು ಹೋಗಿದ್ದರೆ ತಕ್ಷಣವೇ ಪರಿಹಾರ ನೀಡಲು ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳು, ತಹಸೀಲ್ದಾರರ ಖಾತೆಗಳಲ್ಲಿ ಒಟ್ಟು ₹666 ಕೋಟಿಯಷ್ಟು ಹಣ ಲಭ್ಯವಿದೆ. ಪ್ರಕೃತಿ ವಿಕೋಪ ಎದುರಿಸಲು ಯಾವುದೇ ಅನುದಾನದ ಕೊರತೆ ಇಲ್ಲ. ಕಷ್ಟದಲ್ಲಿ ಪರಿಹಾರ ನೀಡಿದಲ್ಲಿ ಸಂತ್ರಸ್ತರು, ರೈತರಿಗೆ ಉಪಯುಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ತ್ವರಿತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.