ಸಾರಾಂಶ
ಶ್ರೀ ಮಹಾಲಕ್ಷ್ಮೀ ವಿವಿಧ ಉದ್ದೇಶಗಳ ಸಹಕಾರಿ ಸಂಘ ಕಳೆದ ಆರ್ಥಿಕ ವರ್ಷದಲ್ಲಿ ₹68 ಲಕ್ಷ ನಿವ್ವಳ ಲಾಭ ಗಳಿಸಿದೆ.
ಕನ್ನಡಪ್ರಭ ವಾರ್ತೆ ಖಾನಾಪುರ
ಶಾಸಕ ವಿಠ್ಠಲ ಹಲಗೇಕರ ಅವರ ನೇತೃತ್ವದ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ವಿವಿಧ ಉದ್ದೇಶಗಳ ಸಹಕಾರಿ ಸಂಘ ಕಳೆದ ಆರ್ಥಿಕ ವರ್ಷದಲ್ಲಿ ₹68 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘವು ₹543 ಕೋಟಿ ದುಡಿಯುವ ಬಂಡವಾಳವನ್ನು ದಾಟಿ ಪ್ರಗತಿ ಪಥದತ್ತ ಸಾಗುತ್ತಿದೆಂದು ಸಂಘದ ಪ್ರಧಾನ ಕಾರ್ಯದರ್ಶಿ ತುಕಾರಾಮ ಹುಂದರೆ ತಿಳಿಸಿದರು.ಪಟ್ಟಣದ ಸಮಾದೇವಿ ಗಲ್ಲಿಯ ಸಂಘದ ಪ್ರಧಾನ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ 31ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸಂಘವು ₹376 ಕೋಟಿ ಠೇವಣಿ ಸಂಗ್ರಹಿಸಿ, ₹238 ಕೋಟಿ ಸಾಲ ವಿತರಿಸಿದೆ. ₹130 ಕೋಟಿ ಹಣವನ್ನು ವಿವಿಧೆಡೆ ಹೂಡಿದೆ. ಸಂಘದ ಸದಸ್ಯರಿಗೆ ಕಳೆದ 14 ವರ್ಷಗಳಿಂದ ಸತತವಾಗಿ ಶೇ.20ರಷ್ಟು ಲಾಭಾಂಶವನ್ನು ಮತ್ತು ಸಂಘದ ನೌಕರರಿಗೆ ಬೋನಸ್ ರೂಪದಲ್ಲಿ ಒಂದು ತಿಂಗಳ ಸಂಬಳ ಹಂಚಲಾಗುತ್ತಿದೆ ಜೊತೆಗೆ ಕಳೆದ 31 ವರ್ಷಗಳಿಂದಲೂ ಸಂಘ ಸತತವಾಗಿ ಲಾಭದಲ್ಲಿ ಮುನ್ನಡೆದಿದೆ ಎಂದರು.
ಸಂಘದ ವಾರ್ಷಿಕ ವರದಿ ಬಿಡುಗಡೆಗೊಳಿಸಿದ ಸಂಘದ ಸಂಸ್ಥಾಪಕ ಹಾಗೂ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ವಿವಿಧ ಉದ್ದೇಶಗಳನ್ನು ಗ್ರಾಮೀಣ ಭಾಗದ ಜನತೆಗೆ ನೀಡುತ್ತಿರುವ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಸಂಘದ ನೇತೃತ್ವದಲ್ಲಿ ಸಂಘದ 31 ಶಾಖೆಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕ್ರೆಡಿಟ್ ಸೊಸೈಟಿ, ಸಿಬಿಎಸ್ಇ ಶಾಲೆ, ಪಿ.ಯು ಕಾಲೇಜು, ಪದವಿ ಕಾಲೇಜು, ವಾಣಿಜ್ಯ ಮಳಿಗೆಗಳು, ಸೂಪರ್ ಮಾರ್ಕೆಟ್, ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು, ಉದ್ದಿಮೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. 2 ಸಾವಿರಕ್ಕೂ ಹೆಚ್ಚು ನೌಕರರು ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. 1.43 ಲಕ್ಷ ಜನತೆ ಸಂಘದ ಮೇಲೆ ವಿಶ್ವಾಸವಿರಿಸಿ ವ್ಯವಹರಿಸುತ್ತಿದ್ದಾರೆ. ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಆ.17ರಂದು ಪಟ್ಟಣದ ಶಾಂತಿನಿಕೇತನ ಶಾಲೆಯ ಸಭಾಗೃಹದಲ್ಲಿ ಆಯೋಜಿಸಲಾಗಿದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ವಿಠ್ಠಲ ಕರಂಬಳಕರ, ಚಾಂಗಪ್ಪ ನಿಲಜಕರ, ಯಲ್ಲಪ್ಪ ತಿರವೀರ, ಮಹಾದೇವ ಬಾಂದಿವಾಡಕರ, ನಾರಾಯಣ ಹಲಗೇಕರ, ರೇಣುಕಾ ಕೋಲಕಾರ, ರಾಜಾರಾಮ ಹಲಗೇಕರ, ಅರುಣ ಕಾಕತಕರ, ಗುಂಡು ಪಾಖರೆ ಸೇರಿದಂತೆ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.