114 ಹಳ್ಳಿಗಳನ್ನೂ ಅಭಿವೃದ್ಧಿಪಡಿಸುವುದೇ ನನ್ನ ಗುರಿ

| Published : Jul 28 2025, 01:41 AM IST

114 ಹಳ್ಳಿಗಳನ್ನೂ ಅಭಿವೃದ್ಧಿಪಡಿಸುವುದೇ ನನ್ನ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಮಠದ ಕಟ್ಟಡ ನಿರ್ಮಾಣ ಭರವಸೆ ಈಡೇರಿಸುತ್ತಿದ್ದು, ಮುಂದಿನ ಶ್ರಾವಣದ ವೇಳೆ ಸುಸಜ್ಜಿತ ಮಠ ನಿರ್ಮಾಣವಾಗಲಿದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುವ 114 ಹಳ್ಳಿಗಳನ್ನೂ ಅಭಿವೃದ್ಧಿಪಡಿಸುವುದೇ ನನ್ನ ಗುರಿಯಾಗಿದೆ. ಸತತ ಎರಡು ಬಾರಿ ಆಶೀರ್ವಾದ ಮಾಡಿರುವ ಕ್ಷೇತ್ರದ ಜನರ ಸೇವೆಗೆ ನಿರಂತರ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬಡಸ್ ಕೆ.ಚ್ ಗ್ರಾಮದ ಶ್ರೀ ಮಡಿವಾಳೇಶ್ವರ ಮಠದ ನೂತನ ಕಟ್ಟಡದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ ಮಡಿವಾಳೇಶ್ವರ ಮಠದ ನಿರ್ಮಾಣಕ್ಕೆ ಇಂದು ಗುದ್ದಲಿ ಪೂಜೆ ಮಾಡಲಾಗಿದೆ. ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಮಠದ ಕಟ್ಟಡ ನಿರ್ಮಾಣ ಭರವಸೆ ಈಡೇರಿಸುತ್ತಿದ್ದು, ಮುಂದಿನ ಶ್ರಾವಣದ ವೇಳೆ ಸುಸಜ್ಜಿತ ಮಠ ನಿರ್ಮಾಣವಾಗಲಿದೆ ಎಂದರು.

ಮಠದ ಕಟ್ಟಡ ನಿರ್ಮಾಣಕ್ಕೆ ₹1.25 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದು, ಇನ್ನೂ ₹25 ಲಕ್ಷ ನೀಡಲಾಗುವುದು. ಮಠವನ್ನು ತೃಪ್ತಿಕರ ವಾಗುವಂತೆ ಕಟ್ಟಬೇಕು. ಆದಷ್ಟು ಬೇಗ ಮಠ ನಿರ್ಮಾಣವಾಗಿ, ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಲಿ. ಇದೊಂದು ಜ್ಞಾನಾರ್ಜನೆಯ ಕೇಂದ್ರವಾಗಿ, ಮುಂದಿನ ಪೀಳಿಗೆಗೆ ಮಾರ್ಗದರ್ಶನ ಕೇಂದ್ರವಾಗಿ ಬೆಳೆಯಲಿ ಎಂದರು. ನಮ್ಮ ಮುಂದಿನ ಕಾರ್ಯಗಳೆಲ್ಲವೂ ಸುಸೂತ್ರವಾಗಿ ನಡೆಯಲಿ. ಯಾವುದೇ ಸಮಸ್ಯೆ ಬಾರದಿರಲಿ. ನಿರಂತರ ಅಭಿವೃದ್ಧಿಯಾಗಲಿ ಎನ್ನುವ ಕಾರಣಕ್ಕೆ ಎಲ್ಲ ಒಳ್ಳೆಯ ಕಾರ್ಯಗಳಿಗೆ ಭೂಮಿ ಪೂಜೆಯನ್ನು ನೆರವೇರಿಸುತ್ತೇವೆ. ಹಾಗೆಯೇ ಇಂದು ಭೂಮಿ ಪೂಜೆಯ ಮೂಲಕ ಮಠ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.

ಗ್ರಾಮಸ್ಥರು ನನಗೆ ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದರಂತೆಯೇ ಅವರ ಬೇಡಿಕೆಗೆ ಸ್ಪಂದಿಸಿ ಶ್ರೀ ಮಡಿವಾಳೇಶ್ವರ ಮಠದ ನಿರ್ಮಾಣಕ್ಕೆ ಕೈಜೋಡಿಸಿದ್ದೇನೆ. ಈ ಗ್ರಾಮಸ್ಥರು ಮಾಡಿದ ಸಹಾಯವನ್ನು ಎಂದಿಗೂ ನಾನು ಮರೆಯುವುದಿಲ್ಲ. ಜನರ ಆಶೀರ್ವಾದದಿಂದಲೇ 7 ಕೋಟಿ ಜನಸಂಖ್ಯೆಯ ಕರ್ನಾಟಕ ರಾಜ್ಯದ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಮಂತ್ರಿಯಾಗಿರುವೆ. ಕ್ಷೇತ್ರದ ಜನತೆಯ ಆಶೀರ್ವಾದಿಂದ ದೊಡ್ಡ ಅಪಘಾತ ಆಗಿದ್ದರೂ ಬದುಕಿ ಬಂದಿರುವೆ. ಜನರ ಪ್ರೀತಿ ವಿಶ್ವಾಸ, ಪ್ರಾರ್ಥನೆಯೇ ಇದಕ್ಕೆ ಕಾರಣ. ನನ್ನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ನನಗಿದೆ. ನಮ್ಮ ಗ್ರಾಮೀಣ ಕ್ಷೇತ್ರದಲ್ಲಿ ಮಠಗಳು ಹಾಗೂ ದೇವಸ್ಥಾನಗಳ ನಿರ್ಮಾಣ, ಅವುಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡುತ್ತ ಬಂದಿದ್ದೇನೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಡಸ್ ಮಡಿವಾಳೇಶ್ವರ ಮಠದ ಗ್ರಾಮದ ಶ್ರೀ ಪ್ರಶಾಂತ ದೇವರು, ಬಿಜಾಪುರದ ಶ್ರೀ ಪ್ರಭುದೇವರು, ಸಿ.ಸಿ.ಪಾಟೀಲ್, ಗ್ರಾಪಂ ಅಧ್ಯಕ್ಷರಾದ ಶೋಭಾ ಕುರಬರ್, ಮನ್ಸೂರ್ ಅಲಿ ಅತ್ತಾರ್, ಸುರೇಶ್ ಇಟಗಿ, ರವಿ ಮೇಳೆದ್, ಬಸವಂತ್ ನಾಯಿಕ್, ಭರಮಣ್ಣ ಶೀಗಿಹಳ್ಳಿ, ಫಕೀರ್ ಶೀಗಿಹಳ್ಳಿ, ಸಿದ್ದು ಸಂಪಗಾವ, ಇನಾಯತ್ ಅತ್ತಾರ್, ಪರ್ವತಗೌಡ ಪಾಟೀಲ, ಗೌಸ್ ಸಿಂಪಿ, ಬಸವರಾಜ ಕಲಾರಕೊಪ್ಪ, ಭೀಮಶಿ ಹಾದಿಮನಿ, ರಾಮನಗೌಡ ಮದಲಭಾವಿ, ಸಂತೋಷ ಬಂದವ್ವಗೋಳ, ಸುನೀಲ್, ನಾಗಪ್ಪ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.