ಸಾರಾಂಶ
- ಸರ್ಕಾರಿ ಮಳಿಗೆಗಳು, ಕಾಪೌಂಡ್ ತೆರವಿಗೆ ಸೂಚನೆ । ಪ್ರತಿಭಟನೆ ಸ್ಥಗಿತ
- - -ಕನ್ನಡಪ್ರಭ ವಾರ್ತೆ ಜಗಳೂರು
ನನ್ನ ಆಡಳಿತಾವಧಿಯಲ್ಲಿ ಪರಿಹಾರ ಕೊಟ್ಟು ಪಟ್ಟಣದ ಮುಖ್ಯ ರಸ್ತೆಯಿಂದ ಎರಡೂ ಕಡೆ 69 ಅಡಿಗಳವರೆಗೆ ವಿಸ್ತರಣೆ ಮಾಡಿಯೇ ತೀರುವೆ. ತಕ್ಷಣವೇ ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ರಸ್ತೆವರೆಗೆ ಬರುವ ಸರ್ಕಾರಿ ಮಳಿಗೆಗಳು, ಕಾಪೌಂಡ್‌ಗಳನ್ನು ನಾಳೆಯಿಂದಲೇ ತೆರುವುಗೊಳಿಸಬೇಕು ಎಂದು ಪಟ್ಟಣ ಪಂಚಾಯಿತಿ, ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಸೂಚನೆ ನೀಡಿದರು.ಪಟ್ಟಣದ ತಾಲೂಕು ಕಚೇರಿ ಮುಂಭಾಗ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಮುಖ್ಯ ರಸ್ತೆ 69 ಅಡಿಗಳವರೆಗೆ ವಿಸ್ತರಣೆಗೆ ಆಗ್ರಹಿಸಿ ರಸ್ತೆ ಅಗಲೀಕರಣ ಹೋರಾಟ ಸಮಿತಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಜಿಲ್ಲಾಧಿಕಾರಿ ಜತೆ ಆಗಮಿಸಿ ಅವರು ಮಾತನಾಡಿದರು. ಮುಖ್ಯ ರಸ್ತೆಯಲ್ಲಿರುವ ಆಸ್ತಿಗಳ ಮಾಲೀಕರು ತಮ್ಮ ಜಾಗ ಬಿಟ್ಟು ಸರ್ಕಾರಿ ಜಾಗ ಒತ್ತುವರಿ ಮಾಡಿದ್ದರೆ 3 ನೋಟಿಸ್ ಕೊಟ್ಟು ತೆರುವುಗೊಳಿಸಬೇಕು ಎಂದರು.
ಸರ್ಕಾರಿ ಕಟ್ಟಡಗಳನ್ನು ನಿಯಮಾನುಸಾರ 69 ಅಡಿವರೆಗೆ ವಾರದೊಳಗೆ ತೆರವುಗೊಳಿಸಲು ವರ್ತಕರ ಸಂಘದವರು ಪರಿಹಾರಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರತಿಯೊಬ್ಬರ ಅರ್ಜಿ ವಜಾಗೊಂಡರೆ ಸರಿ, ಇಲ್ಲವಾದರೆ ನಾನೇ ಪರಿಹಾರ ಕೊಟ್ಟು ಕಟ್ಟಡಗಳ ತೆರವುಗೊಳಿಸಿ, ರಸ್ತೆ ಅಗಲೀಕರಣ ಮಾಡುವೆ. ಹೋರಾಟಗಾರರರು, ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಮನವಿ ಮಾಡಿದರು.ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಮುಖ್ಯ ರಸ್ತೆ ವಿಸ್ತರಣೆ ಕಾರ್ಯಕ್ಕೆ ಶಾಸಕ ಸ್ಥಾನ ಮುಡಿಪಾಗಿಟ್ಟು ಕೈ ಹಾಕಿರುವೆ. ವರ್ತಕರನ್ನು ಕರೆದು ವಿಶ್ವಾಸಕ್ಕೆ ಪಡೆದಾಗ ಅವರ ಬೇಡಿಕೆಯಂತೆ 69 ಅಡಿಗಳವರೆಗೆ ರಸ್ತೆ ಅಗಲೀಕರಣದಲ್ಲಿ ವಿನಾಯಿತಿ ನೀಡಿದೆ. ಆದರೂ ಹೈಕೋರ್ಟ್ ಮೊರೆ ಹೋಗಿದ್ದು ನೋವು ತಂದಿದೆ. ಇನ್ನು ಮುಂದೆ ವಿಳಂಬವಾಗದೇ ಹೋರಾಟಗಾರರಿಗೆ ಬೆನ್ನೆಲುಬಾಗಿ ನಿಂತು, ಅಧಿಕಾರಿಗಳಿಂದ ಶೀಘ್ರ ಕಟ್ಟಡ ತೆರವು ಕಾಮಗಾರಿ ಪ್ರಕ್ರಿಯೆ ಆರಂಭಿಸುವೆ ಎಂದರು.
ದಾವಣಗೆರೆ ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ ಮಾತನಾಡಿ, ಕೆಲ ಕಾನೂನು ತೊಡಕುಗಳು ಇತ್ಯರ್ಥಕ್ಕೆ ವಿಳಂಬವಾಗಿದ್ದವು. ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆಯಂತೆ 69 ಅಡಿಗಳ ವಿಸ್ತರಣೆಗೆ ಅಧಿಕಾರಿಗಳಿಗೆ ಸೂಚಿಸುವೆ ಎಂದರು.ಇದೇ ವೇಳೆ ಹೋರಾಟ ಸಮಿತಿ ಗೌರವ ಅಧ್ಯಕ್ಷ ಆರ್.ಓಬಳೇಶ್, ಅಧ್ಯಕ್ಷ ಸಣ್ಣ ಓಬಯ್ಯ, ಮರೇನಹಳ್ಳಿ ಬಸವರಾಜ್ ಅವರು ಬೇಡಿಕೆಗಳನ್ನು ಪ್ರಸ್ತಾಪಿಸಿ, ಚರ್ಚಿಸಿದರು. ರಸ್ತೆ ಅಗಲೀಕರಣ ಪ್ರಕ್ರಿಯೆ ವಿಳಂಬ ಸಲ್ಲದು. ಜಿಲ್ಲಾಧಿಕಾರಿ ಕೂಡಲೇ ಅಗತ್ಯ ಕ್ರಮ ಕೈಗೊಂಡು, ಕೆವಿಟ್ ಸಲ್ಲಿಸಿ, ಹೈಕೋರ್ಟ್‌ನಲ್ಲಿನ ಅರ್ಜಿ ವಜಾಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ಧರಣಿ ಹಿಂಪಡೆಯಲಾಯಿತು.
ಈ ಸಂದರ್ಭ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ , ಹೋರಾಟ ಸಮಿತಿ ಗೌರವ ಅಧ್ಯಕ್ಷ ಆರ್. ಓಬಳೇಶ್ ,ವಕೀಲ ಸಂಘದ ತಾಲೂಕು ಅಧ್ಯಕ್ಷ ಟಿ.ಮರೇನಹಳ್ಳಿ ಬಸವರಾಜ್ , ಕುಮಾರ್, ಮಲ್ಲಿಕಾರ್ಜುನ್, ಲೋಕೇಶ್, ತಿಪ್ಪೇಸ್ವಾಮಿ, ಚೌಡಮ್ಮ, ಲೋಕೇಶ್, ವ್ಯಾಸಗೊಂಡನ ಹಳ್ಳಿ ರಾಜಪ್ಪ , ಮಹಾಲಿಂಗಪ್ಪ, ಸತೀಶ್, ಸಿದ್ದಮ್ಮನಹಳ್ಳಿ ಬಸವರಾಜ್, ಧನ್ಯಕುಮಾರ್ ಎಚ್.ಎಂ ಹೊಳೆ, ಮಾದಿ ಹಳ್ಳಿ ಮಂಜಪ್ಪ, ತಿಪ್ಪೇಸ್ವಾಮಿ, ಕುಬೇಂದ್ರಪ್ಪ,ಪೂಜಾರ ಸಿದ್ದಪ್ಪ, ಅನಂತರಾಜ್ ಸೇರಿದಂತೆ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಅಧಿಕಾರಿಗಳು ಮತ್ತಿತರರು ಹಾಜರಿದ್ದರು.- - -
-03ಜೆ.ಜಿ.ಎಲ್.1:ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ ಆಗಮಿಸಿ ಮನವಿ ಸ್ವೀಕರಿಸಿದರು.