ಸಾರಾಂಶ
69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿತು. ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿತು. ವಿವಿಧ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕನ್ನಡ ನಾಡಿನಲ್ಲಿರುವಂತಹ ಭಾಷಾ ಶ್ರೀಮಂತಿಕೆ ಜಗತ್ತಿನ ಯಾವುದೇ ಭಾಷೆಯಲ್ಲಿ ಇಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರರವರು ಅಭಿಪ್ರಾಯಿಸಿದರು.ಜ್ಞಾನ ಕಾವೇರಿ ಕ್ಯಾಂಪಸ್, ಚಿಕ್ಕ ಅಳುವಾರ ಇಲ್ಲಿ, 69 ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಹುಟ್ಟಿರುವ ಹೆಮ್ಮೆ ನಮ್ಮದು. ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುವ ನಮ್ಮ ಕರ್ನಾಟಕ ರಾಜ್ಯವು ಪ್ರಾಕೃತಿಕವಾಗಿ ಮತ್ತು ವೈಜ್ಞಾನಿಕವಾಗಿ ಪ್ರಾದೇಶಿಕವಾರು ಜಿಲ್ಲೆಗಳನ್ನು ವಿಂಗಡಣೆಗೊಂಡಿದ್ದು, ಇಲ್ಲಿನ ಭಾಷೆ, ಮಣ್ಣು ಮತ್ತು ಜೀವರಾಶಿಗಳಿಂದ ಸಂಪತ್ಭರಿತವಾಗಿರುವುದನ್ನು ಕಾಣಬಹುದು.
ಕರ್ನಾಟಕದಲ್ಲಿ ಕನ್ನಡ ತಾಯಿ ಮಕ್ಕಳಾಗಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಬೆಳೆಸಬೇಕು ಮತ್ತು ಉಳಿಸಬೇಕು. ಆದರೆ ಇಂದಿಗೂ ಅದೆಷ್ಟೋ ಮಕ್ಕಳಿಗೆ ಸರಿಯಾಗಿ ಕನ್ನಡವನ್ನು ಮಾತನಾಡುವುದಕ್ಕೆ ಬರುವುದಿಲ್ಲ. ಬದಲಿಗೆ ಇಂಗ್ಲೀಷ್ ಭಾಷೆಯನ್ನು ಮಾತನಾಡುವುದೇ ಬಹಳ ದೊಡ್ಡ ಗೌರವ ಎಂಬ ಕಲ್ಪನೆಯಲ್ಲಿರುವುದು ಕಂಡುಬರುತ್ತದೆ. ಕನ್ನಡ ಭಾಷೆಯನ್ನು ಹೊರತುಪಡಿಸಿ ಮತ್ತಿನ್ನಾವುದೇ ಭಾಷೆಗಳನ್ನು ಕಲಿಯಬಾರದು ಎಂಬ ಯಾವುದೇ ನಿರ್ಬಂಧವಿಲ್ಲ. ಆದರೂ ಕನ್ನಡ ತಾಯಿಯ ಮಕ್ಕಳಾಗಿ ಕನ್ನಡವನ್ನು ಮಾತನಾಡದಿದ್ದರೆ ಹೇಗೆ? ಸುವರ್ಣ ಕರ್ನಾಟಕ ಸಂಭ್ರಮದಲ್ಲಿರುವ ನಾವು, ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಕರ್ನಾಟಕ, ಕನ್ನಡ, ಕನ್ನಡಿಗರ ಬಗೆಗಿನ ಕಾಳಜಿಯನ್ನು ತೋರಬಾರದು. ವರ್ಷದ 365 ದಿನಗಳು ಕೂಡ ಕನ್ನಡ ನಾಡು-ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಮಹತ್ವದ ಬಗೆಗಿನ ವಿಚಾರವನ್ನು ಎಲ್ಲೆಡೆ ಪಸರಿಸುವಂತಹ ಕೆಲಸಗಳನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿ ದೀಪ್ತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.