ಗ್ರಾಮೀಣ ಜನರಿಗೆ 6ನೇ ಗ್ಯಾರಂಟಿ ‘ಗೃಹ ಆರೋಗ್ಯ’

| Published : Nov 13 2025, 12:45 AM IST

ಸಾರಾಂಶ

ಗ್ರಾಮೀಣ ಭಾಗದ 30 ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧಿ ವಿತರಿಸುವ ‘ಗೃಹ ಆರೋಗ್ಯ’ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯಾದ್ಯಂತ ರಕ್ತದೊತ್ತಡ, ಮಧುಮೇಹಕ್ಕೆ 5 ಲಕ್ಷಕ್ಕೂ ಹೆಚ್ಚು ಜನ ಉಚಿತ ಔಷಧ ಪಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರಾಮೀಣ ಭಾಗದ 30 ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧಿ ವಿತರಿಸುವ ‘ಗೃಹ ಆರೋಗ್ಯ’ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯಾದ್ಯಂತ ರಕ್ತದೊತ್ತಡ, ಮಧುಮೇಹಕ್ಕೆ 5 ಲಕ್ಷಕ್ಕೂ ಹೆಚ್ಚು ಜನ ಉಚಿತ ಔಷಧ ಪಡೆಯುತ್ತಿದ್ದಾರೆ.

ಆ ಮೂಲಕ ಹೃದಯಾಘಾತ, ಕಿಡ್ನಿ ವೈಫಲ್ಯ, ಸ್ಟ್ರೋಕ್‌ನಂತಹ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಗಳಿಗೆ ಮೂಲದಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ‘ಗೃಹ ಆರೋಗ್ಯ’ ರಾಜ್ಯ ಸರ್ಕಾರದ ಆರನೇ ಗ್ಯಾರಂಟಿಯಾಗಿ ಬದಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ದೂರದೃಷ್ಟಿಯಿಂದ ‘ಗೃಹ ಆರೋಗ್ಯ’ ಯೋಜನೆಗೆ ಕೋಲಾರದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು.

ಬಳಿಕ ರಾಜ್ಯಾದ್ಯಂತ ವಿಸ್ತರಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು ಯೋಜನೆಗೆ ಸ್ವಲ್ಪ ಬದಲಾವಣೆ ತಂದಿದ್ದರು. ರಕ್ತದೊತ್ತಡ, ಡಯಾಬಿಟಿಸ್ ಜೊತೆಗೆ ಕ್ಯಾನ್ಸರ್, ಮಾನಸಿಕ ಕಾಯಿಲೆಗಳು, ಸೇರಿದಂತೆ 14 ಬಗೆಯ ಕಾಯಿಲೆಗಳ ತಪಾಸಣೆ ನಡೆಸಲು ಸೂಚಿಸಿದ್ದರು.

ಇದರಂತೆ ಇದೀಗ ರಾಜ್ಯಾದ್ಯಂತ ಸದ್ದಿಲ್ಲದೇ ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳುತ್ತಿದೆ. ಯೋಜನೆಯಡಿ 326703 ರಕ್ತದೊತ್ತಡ ಕಾಯಿಲೆ ಹೊಂದಿರುವ ಜನ ಉಚಿತವಾಗಿ ಔಷಧಿಯನ್ನ ಪಡೆಯುತ್ತಿದ್ದಾರೆ. ಅಲ್ಲದೆ, 2,36,759 ಮಧುಮೇಹದ ರೋಗಿಗಳಿಗೆ ಉಚಿತವಾಗಿ ಔಷಧಿ ಪೂರೈಸಲಾಗುತ್ತಿದೆ.

ಪ್ರತಿ ಎರಡು ತಿಂಗಳಿಗೊಮ್ಮ ಸ್ಥಳೀಯ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ರೋಗಿಗಳು ಉಚಿತವಾಗಿ ಔಷಧಿ ಪಡೆಯಲು ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಸುಮಾರು 185 ಕೋಟಿ ವೆಚ್ಚದ ''''''''ಗೃಹ ಆರೋಗ್ಯ’ ಯೋಜನೆಯಡಿ ರಕ್ತದೊತ್ತಡ, ಡಯಾಬಿಟಿಸ್ ರೋಗಿಗಳಿಗೆ ನಿರಂತರವಾಗಿ ಉಚಿತ ಔಷಧಿ ಒದಗಿಸಲು ಈಗಾಗಲೇ 115 ಕೋಟಿ ಮೌಲ್ಯದ ಔಷಧಿಗಳ ಖರೀದಿ ಪ್ರಕ್ರೀಯೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಯಿಲೆಗಳಿಗೆ ತಪಾಸಣೆಗೆ ಒಳಪಟ್ಟವರ ವಿವರ:

ತೀವ್ರ ಕಿಡ್ನಿ ಸಮಸ್ಯೆ ಹಿನ್ನೆಲೆ 8,46,399 ಮಂದಿ ತಪಾಸಣೆಗೆ ಒಳಪಟ್ಟಿದ್ದು, 7,719 ಮಂದಿಗೆ ಸಮಸ್ಯೆ ಇರುವುದಾಗಿ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ಈ ರೀತಿಯ ಪ್ರಕರಣಗಳನ್ನು ಶಂಕಿತ ಪ್ರಕರಣಗಳನ್ನಾಗಿ ಪಟ್ಟಿ ಮಾಡಲಾಗಿದೆ. ಶ್ವಾಸಕೋಶ ಸಮಸ್ಯೆಗೆ 9,48,671 ಮಂದಿಗೆ ತಪಾಸಣೆಗೆ ಒಳಪಟ್ಟಿದ್ದಾರೆ. ಲಿವರ್ ಕಾಯಿಲೆಗೆ ಸಂಬಂಧಿಸಿ 9,58,671 ಮಂದಿ ತಪಾಸಣೆಗೆ ಒಳಪಟ್ಟಿದ್ದು, 7,535 ಮಂದಿಗೆ ಸಮಸ್ಯೆ ಶಂಕಿಸಲಾಗಿದೆ.ಬಾಯಿ ಕ್ಯಾನ್ಸರ್‌ಗಾಗಿ 11,92,436 ಮಂದಿಗೆ ತಪಾಸಣೆ ನಡೆಸಿದ್ದು, 3,403 ಶಂಕಿತ ಪ್ರಕರಣ ಪಟ್ಟಿಯಾಗಿವೆ. ಗರ್ಭಕಂಠದ ಕ್ಯಾನ್ಸರ್‌ ಸಂಬಂಧ 950, ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿ 1,311, ಮಾನಸಿಕ ರೋಗಗಳ ವಿಚಾರಕ್ಕೆ ಸಂಬಂಧಿಸಿ 7,751 ಶಂಕಿತ ಪ್ರಕರಣ ವರದಿಯಾಗಿವೆ.

==

* ಗೃಹ ಆರೋಗ್ಯ ಯೋಜನೆಯ ಪ್ರಗತಿಯ ವಿವರ

ರಕ್ತದೊತ್ತಡ :

ತಪಾಸಣೆಗೆ ಒಳಪಟ್ಟ ಜನ : 19,49,730

ರಕ್ತದೊತ್ತಡಕ್ಕೆ ಉಚಿತ ಔಷಧಿ ಪಡೆಯುತ್ತಿರುವವರು: 3,26,703

ಮಧುಮೇಹ ತಪಾಸಣೆಗೆ ಒಳಪಟ್ಟವರು: 18,83,616

ಮಧುಮೇಹಕ್ಕೆ ಉಚಿತ ಔಷಧಿ ಪಡೆಯುತ್ತಿರುವವರು : 2,36,759ಅನಿಮಿಯಾ :

ತಪಾಸಣೆಗೆ ಒಳಪಟ್ಟವರು : 2,92,115

ಔಷಧಿ ಪಡೆಯುತ್ತಿರುವ ರೋಗಿಗಳು : 11,540