ಸಾರಾಂಶ
ಬ್ಯಾಡಗಿ:
ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯದ ಒಟ್ಟು 7.20 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿತ್ತು. ಜತೆಗೆ 2 ಸಾವಿರ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಕೆರೆಗೆ ಬಾಗಿನ ಅರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತಪರ ಸಂಘಟನೆಗಳ ವಿಷಯಾಧಾರಿತ ಹೋರಾಟಕ್ಕೆ ಮಣಿದ ಬಿಜೆಪಿ ಆಡಳಿತಾವಧಿಯಲ್ಲಿ ಬ್ಯಾಡಗಿ ತಾಲೂಕಿನಲ್ಲಿ ₹459 ಕೋಟಿ ವೆಚ್ಚದ ಆಣೂರು ಮತ್ತು ಬುಡಪನಹಳ್ಳಿ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಯಿತು ಎಂದು ಹೇಳಿದರು.ಆಡಳಿತಾರೂಢ ಸರ್ಕಾರಗಳು ಎಷ್ಟೇ ರೈತ ಪರವಾಗಿದ್ದೇವೆ ಎಂದರೂ ಕೆಲವೊಂದು ಸಮಸ್ಯೆ ಇರುತ್ತದೆ. ರೈತಪರ ಸಂಘಟನೆಗಳ ಬೇಡಿಕೆಗೆ ಸ್ಪಂದಿಸಬೇಕಾಗುತ್ತದೆ. ಆಣೂರ, ಬುಡಪನಹಳ್ಳಿ ನೀರಾವರಿ ಯೋಜನೆ ಸಾಕಾರಗೊಳ್ಳುವಲ್ಲಿ ರಾಜ್ಯ ರೈತ ಸಂಘದ ಕೊಡುಗೆ ಸಾಕಷ್ಟಿದೆ ಎಂದರು.
ಕೆರೆಗಳು ಜೀವ ಸಂಕುಲಗಳಿಗೆ ಅತ್ಯಾವಶ್ಯಕ. ಕೆರೆ ತುಂಬಿಸಿದರೆ 3 ವರ್ಷದ ಅನ್ನದ ಮಾರ್ಗಕ್ಕೆ ತೊಂದರೆಯಿಲ್ಲ. ಹೀಗಾಗಿ ನಮ್ಮ ಅಧಿಕಾರದ ಅವಧಿಯಲ್ಲಿ ರೈತರ ಜೀವಾಳವಾಗಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಆದ್ಯತೆ ನೀಡಲಾಯಿತು ಎಂದರು.ಜನಪ್ರತಿನಿಧಿಗಳು ಅಧಿಕಾರವಿದ್ದಾಗ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ಅನುಷ್ಠಾನಗೊಳಿಸಿದಲ್ಲಿ ಮಾತ್ರ ಸಾರ್ವಜನಿಕ ಜೀವನ ಸಾರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದೆಲ್ಲೆಡೆ ಕಾರ್ಯೋನ್ಮುಖವಾಗಿದೆ. ನಾವೇ ಅನುಷ್ಠಾನಗೊಳಿಸಿ ಉದ್ಘಾಟಿಸಿದ ಏತ ನೀರಾವರಿ ಯೋಜನೆಗಳು ಸಾರ್ವಜನಿಕರ ನೆರವಿಗೆ ಬರುತ್ತಿವೆ. ಹೀಗಾಗಿ ಅತ್ಯಂತ ಸಂತೋಷದಿಂದ ಬಾಗಿನ ಅರ್ಪಿಸುತ್ತಿದ್ದೇನೆ ಎಂದರು.
ಇಬ್ಬರು ಸಿಎಂಗಳ ಕೊಡುಗೆ:ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ತಾಲೂಕಿಗೆ ಅವಶ್ಯವಿದ್ದ ಕೆರೆ ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುದಾನ ಮೀಸಲಿಡುವ ಮೂಲಕ ಚಾಲನೆ ನೀಡಿದರೆ ಬಳಿಕ ಬಸವರಾಜ ಬೊಮ್ಮಾಯಿ ಅವರು ಕಾಮಗಾರಿ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡುವ ಮೂಲಕ ತಾಲೂಕಿನಲ್ಲಿ ನೀರಿನ ಬವಣೆ ತಪ್ಪಿಸಿದ್ದಾರೆ ಎಂದರು.
ಇದಕ್ಕೂ ಮುನ್ನ ಸಂಸದ ಬೊಮ್ಮಾಯಿ ಅವರನ್ನು ಮೆರವಣಿಗೆ ಮೂಲಕ ಗ್ರಾಮಸ್ಥರು ಕರೆ ತಂದರು. ಬಳಿಕ ಕೆರೆಗೆ ಬಾಗಿನ ಅರ್ಪಿಸಿದ ಅವರು, ಆರಾಧ್ಯದೈವ ಗುಂಡೇಲಿಂಗೇಶ್ವರ ಸ್ವಾಮಿ ಸನ್ನಿಧಿಗೆ ಪೂಜೆ ಸಲ್ಲಿಸಿದರು.ಕಾರ್ಯದರ್ಶಿ ವಿನಯಕುಮಾರ ಹಿರೇಮಠ, ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಗ್ರಾಪಂ ಅಧ್ಯಕ್ಷೆ ಲಲಿತಮ್ಮ ದೇಶಗತ್ತಿ, ಸದಸ್ಯರಾದ ಮಂಜುನಾಥ ಯತ್ನಳ್ಳಿ, ನಿಂಗನಗೌಡ ಪಾಟೀಲ, ಪರಶುರಾಮ ಚನ್ನಗಿರಿ, ಶಿವಯೋಗಿ ಹುಣಸೀಕಟ್ಟಿ, ಶಿವಬಸಪ್ಪ ಕುಳೇನೂರ, ಶಂಕ್ರಣ್ಣ ಮಾತನವರ, ಸುರೇಶ ಯತ್ನಳ್ಳಿ, ಹಾಲೇಶ ಜಾಧವ, ಸುರೇಶ ಉದ್ಯೋಗಣ್ಣನವರ, ವಿಷ್ಣುಕಾಂತ ಬೆನ್ನೂರ, ಪ್ರದೀಪ ಜಾಧವ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡರಾದ ಗಂಗಣ್ಣ ಎಲಿ, ಕಿರಣ ಗಡಿಗೋಳ, ಗುಂಡಪ್ಪ ಹೊಸಗೌಡ್ರ, ಬಸಯ್ಯ ಹಿರೇಮಠ, ಪುಟ್ಟಪ್ಪ ಜಾವಗಲ್, ಮಲ್ಲಿಕಾರ್ಜುನ ವೀರಾಪುರ, ಶಶಿಧರ ಯತ್ನಳ್ಳಿ, ಗ್ರಾಮದ ಹಿರಿಯರು, ಮುಖಂಡರು, ತಾಯಂದಿರು, ಪಾಲ್ಗೊಂಡಿದ್ದರು.