ಕನಗನಮರಡಿ ಕೃಷಿ ಸಂಘದ ಕಚೇರಿ ಹಳೇ ಕಟ್ಟಡವಾಗಿದೆ. ಕಿರಿದಾಗಿರುವುದರಿಂದ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸಕಟ್ಟಡ ನಿರ್ಮಾಣ ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಗ್ರಾಮಗಳಲ್ಲಿರುವ ಗೊಬ್ಬರ ಶಾಖೆ ಆಧುನಿಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಷೇರುದಾರ ರೈತರ ಸಹಕಾರದಿಂದ ತಾಲೂಕಿನ ಕನಗನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2025-26ನೇ ಸಾಲಿನಲ್ಲಿ 7.30 ಲಕ್ಷ ರು. ನಿವ್ವಳ ಲಾಭ ಬಂದಿದೆ ಎಂದು ಕಾರ್ಯದರ್ಶಿ ಸಿ.ಅರುಣ್ ಕುಮಾರ್ ತಿಳಿಸಿದರು.

ಗ್ರಾಮದ ಸಂಘದ ಆವರಣದಲ್ಲಿ ಅಧ್ಯಕ್ಷ ಎನ್.ಪಿ.ದಿನೇಶ್ ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಈಗಿರುವ ಸಂಘದ ಕಚೇರಿ ಹಳೇ ಕಟ್ಟಡವಾಗಿದ್ದು, ಕಿರಿದಾದ ಕಾರಣ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.

ಸಂಘದ ಹೊಸಕಟ್ಟಡ ನಿರ್ಮಾಣಕ್ಕೆ ಆಡಳಿತ ಮಂಡಳಿ ತೀರ್ಮಾನಿಸಿದೆ. ಗೊಬ್ಬರ ಶಾಖೆ ಆಧುನಿಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಚೇರಿ ಹಿಂಭಾಗವಿರುವ ಖಾಲಿ ಜಾಗವನ್ನು ಸಹ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ವಶಕ್ಕೆ ಪಡೆದು ಅಲ್ಲಿ ಅಭಿವೃದ್ಧಿ ಕಾರ್ಯ ಮಾಡುವಂತೆ ಮಾಜಿ ಅಧ್ಯಕ್ಷ ಹೆಚ್ .ಜೆ.ರಾಮಕೃಷ್ಣ, ನಿರ್ದೇಶಕ ಬೊಮ್ಮರಾಜು ಸಭೆಗೆ ತಿಳಿಸಿದರು.

ರೈತರಿಗೆ ಸಮರ್ಪಕವಾಗಿ ಯೂರಿಯೂ ಪೂರೈಕೆ ಮಾಡುವ ಮೂಲಕ ರೈತರು ಕೃಷಿ ಮಾಡಲು ಅನುಕೂಲ ಮಾಡಿಕೊಡುವಂತೆ ಷೇರುದಾರರು ಒತ್ತಾಯಿಸಿದರು. ಚಿಕ್ಕಮರಳಿ ಗ್ರಾಮದ ಸೊಸೈಟಿ ಮಳೆ ಬಂದರೆ ನೀರು ಸೂರುತ್ತದೆ. ಇದನ್ನು ಸರಿಪಡಿಸುವ ಜತೆಗೆ ಮೃತಪಟ್ಟ ಸಂಘದ ಸದಸ್ಯ ರೈತರಿಗೆ ಮರಣ ಪರಿಹಾರ ಹಣ ನೀಡುವಂತೆ ಒತ್ತಾಯಿಸಿದರು.

ಕಾಂಪ್ಲೆಕ್ಸ್ ರಸಗೊಬ್ಬರದ ಬೆಲೆ‌ ದುಬಾರಿಯಾಗಿದೆ. ಇದರಿಂದ ರೈತರು ಬೇಸಾಯ ಮಾಡಲು ಕಷ್ಟವಾಗುತ್ತಿದೆ. ಯೂರಿಯಾ ನೀಡಿದರೆ ಅನುಕೂಲವಾಗುತ್ತದೆ. ಆದರೆ, ತಿಂಗಳಿಗೆ ಒಂದೇ ಯೂರಿಯಾ ವಿತರಣೆ ನೀತಿ ಸರಿಯಲ್ಲ. ಹಾಗಾಗಿ ಆಡಳಿತ ಮಂಡಳಿ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಷೇರುದಾರರ ಮಕ್ಕಳಾದ ವಿದ್ಯಾಶ್ರೀ, ಹರ್ಷಿತ ಕೆ.ಪಿ, ಶ್ರೀರಕ್ಷ, ಪಾವನಿ ಅವರನ್ನು ಸನ್ಮಾನಿಸಿ ಅಭಿನಂಧಿಸಲಾಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ಎನ್.ಪಿ.ದಿನೇಶ್, ಉಪಾಧ್ಯಕ್ಷೆ ಶೋಭಾ, ಮಾಜಿ ಅಧ್ಯಕ್ಷ, ನಿರ್ದೇಶಕರಾದ ಎಚ್.ಪಿ.ಸಿ.ಮಹದೇವು, ಈರೇಗೌಡ, ಸಿ.ಕೆ.ಲೋಕೇಶ್, ಕುಳ್ಳಯ್ಯ, ಶಿವಶಂಕರ್, ಬೊಮ್ಮರಾಜು, ಎಸ್.ಕೆ.ಉಷಾ, ಬೊಮ್ಮೇಗೌಡ, ಬ್ಯಾಂಕ್ ಮೇಲ್ವಿಚಾರಕ ಸುರೇಶ್ ಎಸ್.ಕೆ., ಸಂಘದ ಇಒ ಅರುಣ್ ಕುಮಾರ್ ಸಿ., ಮಾರಾಟ ಗುಮಾಸ್ತರಾದ ನಾಗರಾಜು ಎನ್.ಆರ್., ಸಿ.ಆರ್.ಸಂತೋಷ್ ಕುಮಾರ್, ಕೆ.ಪವಿತ್ರ ಇದ್ದರು.