ಆಡುವಳ್ಳಿ ಗ್ರಾಪಂಗೆ 7.50 ಕೋಟಿ ಮಂಜೂರು: ಶಾಸಕ ಟಿ.ಡಿ.ರಾಜೇಗೌಡ

| Published : Oct 17 2023, 12:45 AM IST

ಆಡುವಳ್ಳಿ ಗ್ರಾಪಂಗೆ 7.50 ಕೋಟಿ ಮಂಜೂರು: ಶಾಸಕ ಟಿ.ಡಿ.ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಆಡುವಳ್ಳಿ ಗ್ರಾಪಂಗೆ 7.50 ಕೋಟಿ ಮಂಜೂರು: ಶಾಸಕ ಟಿ.ಡಿ.ರಾಜೇಗೌಡ
ಗಡಿಗೇಶ್ವರ ಗ್ರಾಮದ ಬಷೀರ್ ಅ‍ವರ ಮನೆಯಂಗಳದಲ್ಲಿ ಜನ ಸಂಪರ್ಕ ಸಭೆ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ಜಲಜೀವನ್ ಮಿಷನ್ ಯೋಜನೆಯಡಿ ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ 7.50 ಕೋಟಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಭಾನುವಾರ ಸಂಜೆ ತಾಲೂಕಿನ ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿದ ನಂತರ ಗಡಿಗೇಶ್ವರ ಗ್ರಾಮದ ಬಷಿರ್ ಅವರ ಮನೆಯಂಗಳದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ಮಾಜಿ ಸಚಿವ ಡಿ.ಬಿ.ಚಂದ್ರೇಗೌಡರು ಸಚಿವರಾಗಿದ್ದಾಗ ಆಡುವಳ್ಳಿ ಗ್ರಾಪಂ ವ್ಯಾಪ್ತಿಯ ಕೊಳವೆ–ಆಡುವಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ರಸ್ತೆ ಅಭಿವೃದ್ಧಿಗೆ 2.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತಾದರೂ ಕಾಮಗಾರಿ ಕೈಗೊಳ್ಳಲು ಕೆಲವರು ಅಡ್ಡಿಪಡಿಸಿದ್ದರು. ಮಳೆಗಾಲ ಮುಗಿದ ಕೂಡಲೇ ಈ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ಇದಕ್ಕೆ ಹೆಚ್ಚುವರಿಯಾಗಿ ಬೇಕಾಗಿರುವ 2 ಕೋಟಿ ಅನುದಾನ ಬಿಡುಗಡೆ ಮಾಡಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಮಳೆಗಾಲದಲ್ಲಿ ಸಂಪರ್ಕ ಕಳೆದು ಕೊಳ್ಳುತ್ತಿದ್ದ ಹೊಸಗದ್ದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು 45 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ . ಎನ್.ಆರ್.ಪುರ ದಿಂದ ಬಾಳೆಹೊನ್ನೂರು ರಸ್ತೆಯಲ್ಲಿ ಬರುವ ಶಿಥಿಲಾವಸ್ಥೆಗೆ ತಲುಪಿದ್ದ 3 ಸೇತುವೆಗಳನ್ನು ಅಭಿವೃದ್ಧಿ ಪಡಿಸ ಲಾಗಿದೆ. ಈ ಗ್ರಾಪಂ ವ್ಯಾಪ್ತಿಯ 4 ಗ್ರಾಮಗಳ ರಸ್ತೆಗೆ ತಲಾ 10 ಲಕ್ಷ ಅನುದಾನ ನೀಡಲಾಗಿದೆ. ಆಡುವಳ್ಳಿ ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡಲು ಈ ಹಿಂದೆಯೇ 5 ಎಕರೆ ಜಾಗ ಮಂಜೂರಾಗಿತ್ತು. ಇದನ್ನು ಹಂಚಿಕೆ ಮಾಡಲು ಬಿಟ್ಟಿರಲಿಲ್ಲ. ಶೀಘ್ರದಲ್ಲೇ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನವಸತಿ ಹಾಗೂ ಕೃಷಿ ಪ್ರದೇಶಗಳನ್ನು 4 (1) ನೋಟಿಫಿಕೇಶ್ ಮಾಡಿ ಅರಣ್ಯಕ್ಕೆ ಸೇರಿಸಿರುವುದ ರಿಂದ, ಡೀಮ್ಡ್ ಫಾರೆಸ್ಟ್, ಹುಲಿಯೋಜನೆ, ಪರಿಸರ ಸೂಕ್ಷ್ಮವಲಯ, ಬಫರ ಝೋನ್ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರಿಗೆ ಹಾಗೂ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡಲು ಸಮಸ್ಯೆಯಾಗಿದೆ. ಈ ಹಿಂದೆ ಚಿಕ್ಕಮಗಳೂರು ಜಿಲ್ಲಾಧಿಕಾರಿಯೊಬ್ಬರು 1.25 ಲಕ್ಷ ಹೆಕ್ಟೆರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಗೆ ಸೇರಿಸಿದ್ದಾರೆ. ಇದರಲ್ಲಿ ಬಹುತೇಕ ಜನ ವಸತಿ ಪ್ರದೇಶ ಹಾಗೂ ಕೃಷಿ ಸಾಗುವಳಿ ಜಮೀನು ಸೇರಿದ್ದು ಇದರಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶ ಡಿಮ್ಡ್ ಫಾರೆಸ್ಟ್ ನಿಂದ ಬಿಡುಗಡೆಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದು ಬಿಡುಗಡೆಯಾದರೆ ಬಹುತೇಕ ಜನರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು. ಈ ಭಾಗದ ಅರಣ್ಯ ಮತ್ತು ಕಂದಾಯ ಜಮೀನಿನ ಸಮಸ್ಯೆ ಬಗ್ಗೆ ಅರಣ್ಯ ಸಚಿವರ ಗಮನ ಸೆಳೆಯುವ ಕೆಲಸ ಮಾಡಿದ್ದೇನೆ. ಒತ್ತುವರಿದಾರರಿಗೆ ಭವಿಷ್ಯದಲ್ಲಿ ಯಾವುದೇ ಸಮಸ್ಯೆಯಾಗದ ರೀತಿ ಕಾನೂನು ಪ್ರಕಾರವಾಗಿ ಹಕ್ಕು ಪತ್ರ ನೀಡಲಾಗುವುದು . ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ಅಧಿಕಾರದಲ್ಲಿರು ವವರೆಗೂ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸೇವೆಗೆ ಪ್ರಾಮಾಣಿಕವಾಗಿ, ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಆಡುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್ ವಹಿಸಿದ್ದರು. ಸಭೆಯಲ್ಲಿ ಆಡುವಳ್ಳಿ ಗ್ರಾಪಂ ಸದಸ್ಯ ಚೆನ್ನಪ್ಪಗೌಡ, ಕರ್ಕೇಶ್ವರ ಗ್ರಾಪಂ ಸದಸ್ಯ ರಾಜೇಶ್, ವಿಜಯ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ವಿ.ಉಪೇಂದ್ರ, ಗ್ರಾಪಂ ಮಾಜಿ ಸದಸ್ಯೆ ಸಾವಿತ್ರಮ್ಮ, ತಾಪಂ ಮಾಜಿ ಸದಸ್ಯ ಪ್ರವೀಣ್ ಕುಮಾರ್ ಇದ್ದರು. ಇದೇ ಸಂದರ್ಭದಲ್ಲಿ ಹೊಸಗದ್ದೆ ಗ್ರಾಮಕ್ಕೆ ಸಂಪರ್ಕ ಸೇತುವೆ ನಿರ್ಮಾಣ ಹಾಗೂ ಕೊಳಲೆ –ಆಡುವಳ್ಳಿ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿದ್ದಕ್ಕೆ ಗ್ರಾಮಸ್ಥರು ಶಾಸಕ ಟಿ.ಡಿ.ರಾಜೇಗೌಡರನ್ನು ಸನ್ಮಾನಿಸಿದರು.