ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಇಂಡಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 3 ಎಕರೆ ಲಿಂಬೆ ಅಭಿವೃದ್ಧಿ ಮಂಡಳಿಗೆ ಜಾಗ ನೀಡಿದ್ದು ಬೂದಿಹಾಳ ಗ್ರಾಮದ ಹತ್ತಿರ ಸಣ್ಣಕೈಗಾರಿಕೆಗಳ ಸ್ಥಾಪನೆಗೆ ಜಾಗ ಮೀಸಲಾಗಿಡಲಾಗಿದೆ. ಸರ್ಕಾರ ₹7.50 ಕೋಟಿ ಹಣ ನೀಡಿದ್ದು, ಸ್ಟೋರೆಜ್ ನಿರ್ಮಿಸಲು ಉಪಯೋಗಿಸಿಕೊಳ್ಳಬಹುದು ಎಂದು ರಾಜ್ಯ ಸರ್ಕಾರದ ಅಂದಾಜು ಸಮಿತಿ ಅಧ್ಯಕ್ಷ ಹಾಗೂ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಸ್ಟೇಷನ್ ರಸ್ತೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ ಪರಂಪರಾಗತ ಯೋಜನೆಯಡಿ ಲಿಂಬೆ ಬೆಳೆಗಾರರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇದೇ ಸ್ಥಳದಲ್ಲಿ ಲಿಂಬೆ ಕೊಲ್ಡ್ ಸ್ಟೋರೆಜ್ ಹಾಗೂ ಲಿಂಬೆ ಹಣ್ಣಿನಿಂದ ಉಪ ಉತ್ಪನಗಳನ್ನು ಮಾಡುವ ಮೂಲಕ ಲಿಂಬೆಹಣ್ಣಿಗೆ ಬಹುಬೇಡಿಕೆ ದೊರೆತು ರೈತರ ಸ್ಟೇಟಸ್ ಹೆಚ್ಚಿಸಲಾಗುವುದು ಎಂದರು.ಇಂಡಿ ತಾಲೂಕು ಲಿಂಬೆ ಬೆಳೆಯುವುದರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ಲಿಂಬೆಗೆ ಭೋಗೋಳಿಕ ಮಾನ್ಯತೆ ದೊರೆತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಡಿಯ ಲಿಂಬೆ ಹಣ್ಣಿಗೆ ಬೆಲೆ ದೊರಿಯುತ್ತಿದೆ. ರಾಜ್ಯ ಅಷ್ಟೆ ಅಲ್ಲದೆ ಇಂಡಿ ಲಿಂಬೆಗೆ ವಿದೇಶದಲ್ಲಿಯೂ ಬೇಡಿಕೆ ಇದೆ ಎಂದರು.ಕೃಷಿ ಇಲಾಖೆ ರೈತರಿಗಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಕೃಷಿ ಹೊಂಡ ನಿರ್ಮಿಸಲು ಸಹಾಯ ಮಾಡಿದೆ. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕೃಷಿ ಹೊಂಡ ಇಂಡಿ ತಾಲೂಕಿನಲ್ಲಿ ರೈತರು ಹೊಂದಿದ್ದಾರೆ. ಶೀಘ್ರದಲ್ಲಿ ಕೃಷ್ಣಾ ಕಾಲುವೆಯಿಂದ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆ, ಗುತ್ತಿಬಸವಣ್ಣ, ತಿಡಗುಂದಿ ಶಾಖಾ ಕಾಲುವೆಯ ಮೂಲಕ ನೀರು ಹರಿದು ಬರುವ ಸಾಧ್ಯತೆ ಇದೆ. ಯಾವುದೇ ಆಂತಕವಿಲ್ಲದೆ ರೈತರು ಲಿಂಬೆ ಬೆಳೆ ಬೆಳೆಯಬಹುದು ಎಂದರು.ಕೆವಿಕೆ ಮುಖ್ಯಸ್ಥ ಡಾ.ಶಿವುಶಂಕರ ಮೂರ್ತಿ ಮಾತನಾಡಿ, ದೇಶದ 737 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಇಂಡಿ ಕೃಷಿ ವಿಜ್ಞಾನ ಕೇಂದ್ರ ಪ್ರಥಮ ಸ್ಥಾನದಲ್ಲಿದೆ. ರೈತರು ಲಿಂಬೆ ಸೇರಿದಂತೆ ವಿವಿಧ ತರಹ ಬೆಳೆ ಪದ್ಧತಿ ಅನುಸರಿಸಿ ಕೃಷಿವಿಜ್ಞಾನ ಕೇಂದ್ರಕ್ಕೆ ರೈತರು ಬಂದು ಸಲಹೆ ಸೂಚನೆ ಪಡೆಯಬೇಕು. ಇಲಾಖೆಯಿಂದ ರೈತರ ಅಭಿವೃದ್ಧಿಗೆ 24/7 ಸದಾ ಮಾಹಿತಿ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಸೋಮಣ್ಣ ಕೆರೂರ, ಭೀಮರಾಯ ಹಿರಾಪೂರ, ಪ್ರಕಾಶ ಗಿಣ್ಣಿ, ರಾಮಣ್ಣ ದೇವರ ಅವರಿಗೆ ಸನ್ಮಾನಿಸಿದರು. ಲಿಂಬೆ ಅಭಿವೃದ್ಧಿ ಮಂಡಳಿಯ ಎಂಡಿ ರಾಹುಲಕುಮಾರ, ಎಸಿ ಅಬೀದ್ ಗದ್ಯಾಳ, ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಪವಾರ, ತಾಪಂ ಇಒ ಬಾಬು ರಾಠೋಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾವದೇವಪ್ಪ ಏವೋರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಯ ಎಚ್.ಎಸ್.ಪಾಟೀಲ, ವಿಜ್ಞಾನಿ ಡಾ.ಹೀನಾ, ಬಾಲಾಜಿ ನಾಯಕ, ತಮ್ಮಣ್ಣ ಪೂಜಾರಿ, ಮಲ್ಲನಗೌಡ ಪಾಟೀಲ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ರೈತರು ಬೆಳೆದ ಲಿಂಬೆ ಹಣ್ಣಿಗೆ ದಲ್ಲಾಳಿಗಳಿಂದ ಖರೀದಿ ಮಾಡುತ್ತಿರುವುದರಿಂದ ಒಂದು ಕಡೆ ಒಂದು ದರವಾದರೇ ಇನ್ನೊಂದು ಕಡೆ ಮತ್ತೊಂದು ದರ ಒಟ್ಟು 6-7 ಕಡೆ ದಲ್ಲಾಳಿಗಳು ಮಾರುಕಟ್ಟೆ ಮಾಡುತ್ತಿದ್ದು, ಅದರ ಬದಲಾಗಿ ಒಂದೇ ಮಾರುಕಟ್ಟೆ ನಿರ್ಮಿಸಿ ತಾಲೂಕಿನ ಎಲ್ಲ ಲಿಂಬೆ ಒಂದೇ ಕಡೆ ಬರುವಂತೆ ಮಾಡಿ ಲಿಂಬೆ ಖರೀದಿಸುವ ದಲ್ಲಾಳಿಗಳು ಒಂದೇ ಸ್ಥಳದಲ್ಲಿಯೇ ಬರುವಂತೆ ವ್ಯವಸ್ಥೆ ಮಾಡಲಾಗುವುದು.-ಯಶವಂತರಾಯಗೌಡ ಪಾಟೀಲ,
ಶಾಸಕ, ಇಂಡಿ.