ಸಾರಾಂಶ
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಮೇ 20ಕ್ಕೆ ಎರಡು ವರ್ಷ ಪೂರೈಸಲಿದ್ದು, 3ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಮೂಲಕ ಮಾಜಿ ಸಿಎಂ ಡಿ.ದೇವರಾಜ ಅರಸು ಆಡಳಿತಾವಧಿಗೆ ಹತ್ತಿರವಾಗಿದ್ದಾರೆ.
ಅಂಶಿ ಪ್ರಸನ್ನಕುಮಾರ್
ಕನ್ನಡಪ್ರಭ ವಾರ್ತೆ ಮೈಸೂರುಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಮೇ 20ಕ್ಕೆ ಎರಡು ವರ್ಷ ಪೂರೈಸಲಿದ್ದು, 3ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಮೂಲಕ ಮಾಜಿ ಸಿಎಂ ಡಿ.ದೇವರಾಜ ಅರಸು ಆಡಳಿತಾವಧಿಗೆ ಹತ್ತಿರವಾಗಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರಿನಿಂದ 6 ಬಾರಿ ಆಯ್ಕೆಯಾಗಿದ್ದ ಡಿ.ದೇವರಾಜ ಅರಸು ಅವರು 2 ಬಾರಿ ಮುಖ್ಯಮಂತ್ರಿ ಆಗಿದ್ದರು. ಮೊದಲ ಬಾರಿ ಪೂರ್ಣಾವಧಿ ಆಳ್ವಿಕೆ ನಡೆಸಿದ ಅರಸು 2ನೇ ಅವಧಿಯಲ್ಲಿ 3 ವರ್ಷ ಇದ್ದರು. ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ 5 ವರ್ಷ (2013-2018) ಪೂರ್ಣಾವಧಿ ಆಡಳಿತ ನಡೆಸಿದ್ದು, ಅರಸು ಅವರ ನಂತರ ಪೂರ್ಣಾವಧಿ ಆಡಳಿತ ನಡೆಸಿದ ಸಿಎಂ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. 2023ರಲ್ಲಿ ಎರಡನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಇದೀಗ ಎರಡು ವರ್ಷ ಪೂರೈಸಿದ್ದಾರೆ.ಬಜೆಟ್ ಮಂಡನೆಯಲ್ಲಿ ರೆಕಾರ್ಡ್:
ಹಣಕಾಸು ಸಚಿವರೂ ಆಗಿದ್ದ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ 16 ಬಾರಿ ಬಜೆಟ್ ಮಂಡಿಸಿದ್ದು, ಅತೀ ಹೆಚ್ಚು ಬಜೆಟ್ ಮಂಡನೆಯ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರು 13 ಬಾರಿ ಬಜೆಟ್ ಮಂಡಿಸಿದ್ದರು.ಚಾಮರಾಜನಗರಕ್ಕೂ ಭೇಟಿ:
ಸಿಎಂ ಆದವರೂ ಚಾಮರಾಜನಗರಕ್ಕೆ ಭೇಟಿ ನೀಡಿದರೇ 6 ತಿಂಗಳೊಳಗೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಪ್ರತೀತಿಗೆ ಸಡ್ಡು ಹೊಡೆದ ಸಿದ್ದರಾಮಯ್ಯ ಅವರು, ಸಿಎಂ ಆದ ನಂತರ ಚಾಮರಾಜನಗರಕ್ಕೆ 20 ಬಾರಿ ಭೇಟಿ ನೀಡಿದ್ದಾರೆ. ಆ ಮೂಲಕ ಚಾಮರಾಜನಗರಕ್ಕೆ ಅಂಟಿದ್ದ ಪ್ರತೀತಿ ಸುಳ್ಳಾಗಿಸಿದ್ದಾರೆ.ಜಿಲ್ಲೆಯಿಂದ ಅತಿ ಹೆಚ್ಚು ಬಾರಿ ಶಾಸಕ:
ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದವರು ಎಂಬ ದಾಖಲೆ ಕೂಡ ಸಿದ್ದರಾಮಯ್ಯ ಅವರ ಹೆಸರಿಗೆ ಸೇರಿದೆ. ಸಿದ್ದರಾಮಯ್ಯ ಅವರು 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ 1983, 1985, 1994, 2004, 2006ರಲ್ಲಿ, ವರುಣದಿಂದ 2008, 2013, 2023 ಹಾಗೂ ಬಾದಾಮಿ ಕ್ಷೇತ್ರದಿಂದ 2018ರಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ. ಗುಂಡ್ಲುಪೇಟೆಯ ಕೆ.ಎಸ್.ನಾಗರತ್ನಮ್ಮ ಅವರು 7 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ಟಿ.ನರಸೀಪುರದ ಡಾ.ಎಚ್.ಸಿ.ಮಹದೇವಪ್ಪ, ಪಿರಿಯಾಪಟ್ಟಣದ ಕೆ.ವೆಂಕಟೇಶ್, ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ 6ನೇ ಬಾರಿ ಶಾಸಕರಾಗಿದ್ದಾರೆ. ಡಿ.ದೇವರಾಜ ಅರಸು ಅವರು ಹುಣಸೂರು ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿ ಗೆದ್ದಿದ್ದರು.ಒಂದಲ್ಲ ಒಂದು ಅಧಿಕಾರ:
ಸಿದ್ದರಾಮಯ್ಯ ಅವರಿಗೆ 2004ರಿಂದಲೂ ಒಂದಲ್ಲ ಒಂದು ಅಧಿಕಾರ ಸಿಕ್ಕಿದೆ. 2004ರಲ್ಲಿ 2ನೇ ಬಾರಿ ಡಿಸಿಎಂ ಆಗಿದ್ದ ಸಿದ್ದರಾಮಯ್ಯ 2008ರಲ್ಲಿ ವರುಣಾದಿಂದ ಗೆದ್ದಾಗ 1 ವರ್ಷದ ನಂತರ ಪ್ರತಿಪಕ್ಷ ನಾಯಕ ಆಗಿದ್ದರು. 2013ರಲ್ಲಿ 2ನೇ ಬಾರಿ ಗೆದ್ದಾಗ ಸಿಎಂ ಆದರು. 2018ರಲ್ಲಿ ಬಾದಾಮಿಯಿಂದ ಗೆದ್ದಾಗ 14 ತಿಂಗಳ ಪ್ರತಿಪಕ್ಷ ನಾಯಕ ಆಗಿದ್ದು, 2023ರಲ್ಲಿ ವರುಣಾದಿಂದ 3ನೇ ಬಾರಿ ಗೆದ್ದಾಗ 2ನೇ ಬಾರಿ ಮುಖ್ಯಮಂತ್ತಿ ಆಗಿದ್ದಾರೆ.