ಮೈಷುಗರ್ ನೌಕರನಿಂದಲೇ 70.50 ಲಕ್ಷ ರು. ದೋಖಾ?

| Published : Mar 06 2025, 12:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮಂಡ್ಯಎರಡು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮುಖ್ಯ ಕಬ್ಬು ಅಧಿಕಾರಿಯಾಗಿ ನೇಮಕಗೊಂಡಿದ್ದ ನೌಕರನೊಬ್ಬ ಕಬ್ಬು ಕಟಾವಿಗೆ ಸಂಬಂಧಿಸಿದ ೭೦.೫೦ ಲಕ್ಷ ರು. ಹಣವನ್ನು ದುರುಪಯೋಗ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಎರಡು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮುಖ್ಯ ಕಬ್ಬು ಅಧಿಕಾರಿಯಾಗಿ ನೇಮಕಗೊಂಡಿದ್ದ ನೌಕರನೊಬ್ಬ ಕಬ್ಬು ಕಟಾವಿಗೆ ಸಂಬಂಧಿಸಿದ ೭೦.೫೦ ಲಕ್ಷ ರು. ಹಣವನ್ನು ದುರುಪಯೋಗ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈತ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಅಂಗೀಕಾರವಾಗುವ ಮುನ್ನವೇ ಬೇರೊಂದು ಖಾಸಗಿ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಆದರೂ, ನೌಕರನಿಂದ ಹಣ ವಸೂಲಿಗೆ ಮುಂದಾಗದ ಕಾರ್ಖಾನೆ ಆಡಳಿತ ಮಂಡಳಿ ಜಾಣಕುರುಡುತನ ಪ್ರದರ್ಶಿಸುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಾರ್ಖಾನೆಯಲ್ಲಿ ಮುಖ್ಯ ಕಬ್ಬು ಅಧಿಕಾರಿಯಾಗಿದ್ದ ಡಿ.ಎನ್.ಚಂದ್ರಶೇಖರ್ ಅವರಿಂದ ಸುಮಾರು ೭೦.೫೦ ಲಕ್ಷ ರು. ಹಣ ಬಾಕಿ ಬರಬೇಕಿದೆ. ಈತ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಕಟಾವು ಮಾಡಿಸಲು ೩ ಕೋಟಿ ರು.ಗೂ ಅಧಿಕ ಹಣವನ್ನು ಮುಂಗಡವಾಗಿ ಪಡೆದಿದ್ದನು. ಪಡೆದ ಹಣಕ್ಕೆ ತಕ್ಕಂತೆ ಕಾರ್ಮಿಕರನ್ನು ಕರೆತಂದು ಕಬ್ಬು ಕಟಾವು ಮಾಡಿಸದೆ ವಂಚಿಸಿದ್ದನು ಎಂಬ ಆರೋಪ ಕೇಳಿಬಂದಿತ್ತು.

ಮುಂಗಡವಾಗಿ ಪಡೆದ ಹಣವನ್ನು ವಾಪಸ್ ನೀಡುವಂತೆ ಚಂದ್ರಶೇಖರ್‌ಗೆ ಕಾರ್ಖಾನೆ ಸಾಕಷ್ಟು ಬಾರಿ ಪತ್ರ ಬರೆದಿತ್ತು. ಈ ಸಮಯದಲ್ಲಿ ಎರಡು ಬಾರಿ ಒಂದಷ್ಟು ಹಣ ಸಂದಾಯ ಮಾಡಿದ್ದನು. ಈತ ಪಡೆದಿದ್ದ ಒಟ್ಟು ಹಣದಲ್ಲಿ ಇನ್ನೂ ೭೦.೫೦ ಲಕ್ಷ ರು. ಬಾಕಿ ಉಳಿಸಿಕೊಂಡಿದ್ದನು ಎಂದು ತಿಳಿದುಬಂದಿದೆ.

ಬಾಕಿ ಹಣ ಪಾವತಿಗೆ ಕಾರ್ಖಾನೆಯಿಂದ ಒತ್ತಡ ಹೆಚ್ಚಾಗಿದ್ದರಿಂದ ನೆಪ ಮಾತ್ರಕ್ಕೆ ರಾಜೀನಾಮೆ ಕೊಟ್ಟು ಪಲಾಯನ ಮಾಡಲು ಚಂದ್ರಶೇಖರ್ ಯತ್ನಿಸಿದ್ದಾನೆ. ಈತ ತನ್ನ ಹುದ್ದೆಗೆ ೨೫.೧೧.೨೦೨೪ರಂದು ರಾಜೀನಾಮೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ೯.೧.೨೦೨೫ರಂದು ನೀಡಿರುವ ಹಿಂಬರಹದಲ್ಲಿ ಕಾರ್ಖಾನೆಗೆ ಬಾಕಿ ಪಾವತಿಸಬೇಕಿರುವ ೭೦,೫೧,೨೨೪ ರು. ಹಣವನ್ನು ಕಂಪನಿ ಲೆಕ್ಕಕ್ಕೆ ಜಮಾ ಮಾಡುವಂತೆ ಸೂಚಿಸಿದ್ದು, ಆನಂತರ ರಾಜೀನಾಮೆ ಅಂಗೀಕರಿಸುವ ಬಗ್ಗೆ ತೀರ್ಮಾನಿಸುವುದಾಗಿ ಹಿಂಬರಹದಲ್ಲಿ ತಿಳಿಸಿದ್ದಾರೆ.

ಮುಖ್ಯ ಆಡಳಿತಾಧಿಕಾರಿ ಪತ್ರವನ್ನು ಲೆಕ್ಕಿಸದ ನೌಕರ ಡಿ.ಎನ್.ಚಂದ್ರಶೇಖರ್ ರಾಜೀನಾಮೆ ಅಂಗೀಕಾರಕ್ಕೂ ಮುನ್ನವೇ ಮತ್ತೊಂದು ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ವಂಚಕ ನೌಕರನ ವಿರುದ್ಧ ಕ್ರಮಕ್ಕೆ ಮುಂದಾಗದ ಆಡಳಿತ ಮಂಡಳಿ ನಡೆ ಬಗ್ಗೆಯೇ ಗುಮಾನಿ ಮೂಡಿದೆ.

ಮಾಹಿತಿಗಾಗಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕಿ ವೀಣಾ ಅವರನ್ನು ಸಂಪರ್ಕಿಸಿದರೂ ಸಿಗದೆ ಕಳ್ಳಾಟವಾಡುತ್ತಿದ್ದಾರೆ. ದೂರವಾಣಿ ಕರೆ ಮಾಡಿ ಕೇಳಿದರೆ, ಅದು ಕಚೇರಿ ಆಂತರಿಕ ವಿಚಾರ, ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ವೀಣಾ ಅವರು ಮೈಷುಗರ್ ಕಾರ್ಖಾನೆ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಜೊತೆಗೆ ಮಂಡ್ಯ ಮುಡಾ ಆಯುಕ್ತರಾಗಿ, ಮಂಡ್ಯ ವಿವಿ ಪ್ರಭಾರ ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.