ಸಾರಾಂಶ
ಹನುಮಸಾಗರ: ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ನರೇಗಾ ಹೆಚ್ಚು ಸಹಕಾರಿಯಾಗಿದೆ ಹಾಗೂ ನಿಗದಿಪಡಿಸಿದ ಕಾಲ ಮಿತಿಯಲ್ಲಿ ಗುರಿ ಸಾಧಿಸಬೇಕು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಸಮೀಪದ ಹನುಮನಾಳ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ನರೇಗಾ ಯೋಜನೆಯಡಿ ಕೆಲಸಕ್ಕೆ ಯಾರೇ ಬಂದರೂ ಅವರಿಗೆ ನಿಯಮ ಪ್ರಕಾರ ಅವಕಾಶ ಕಲ್ಪಿಸಿಕೊಡಬೇಕು. ಮಾನವ ದಿನಗಳ ಸೃಜನೆಯಲ್ಲಿ ಪ್ರಗತಿ ಸಾಧಿಸಿದ ಪಂಚಾಯಿತಿಗಳು ಈ ಕೂಡಲೇ ಆ ಬಗ್ಗೆ ಗಮನ ಹರಿಸಬೇಕು. ಮುಂದಿನ ಹೊತ್ತಿಗೆ ನನಗೆ ನೀಡಿರುವ ಗುರಿ ಸಾಧಿಸಿ ಸಭೆ ಮಾಡಬೇಕು ಎಂದರು.
ಸಭೆಯಲ್ಲಿ ಹೋಬಳಿ ವ್ಯಾಪ್ತಿಯ ಹನುಮನಾಳ, ಮಾಲಗಿತ್ತಿ , ಯರಗೇರಾ, ತುಗ್ಗಲಡೋಣಿ, ಬಿಳೇಕಲ್, ಬೆನಕನಾಳ, ಹಿರೇಗೊಣ್ಣಾಗರ, ಜಹಗೀರಗುಡದೂರ, ತುಮರಿಕೊಪ್ಪ, ಹಾಬಲಕಟ್ಟಿ, ನಿಲೋಗಲ್ ಗ್ರಾಪಂಗಳ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ವಸತಿ ಯೋಜನೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪಿಆರ್‌ಐಡಿ ಇಲಾಖೆ ಸೇರಿ ವಿವಿಧ ಇಲಾಖೆ ಯೋಜನೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.ದಿಶಾ ಸಮಿತಿ ಸದಸ್ಯ ದೊಡ್ಡಬಸನಗೌಡ ಪಾಟೀಲ್ ಬಯ್ಯಾಪುರ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಫಾರೂಕ್ ದಲಾಯತ್, ಜಿಪಂ ಜಿಲ್ಲಾ ಯೋಜನೆ ನಿರ್ದೇಶಕ ಪ್ರಕಾಶ ವಿ., ತಾಪಂ ಇಒ ಪಂಪಾಪತಿ ಹಿರೇಮಠ, ತಹಸೀಲ್ದಾರ್ ಅಶೋಕ ಶಿಗ್ಗಾವಿ, ತಾಲೂಕು ವೈದ್ಯಾಧಿಕಾರಿ ಡಾ. ಆನಂದ ಗೊಟೂರು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಹನಮನಾಳ ಗ್ರಾಪಂ ಅಧ್ಯಕ್ಷೆ ಸುಜಾತ ತವರಪ್ಪ ಚಿಕನಾಳ ಸೇರಿ ಹೋಬಳಿ ವ್ಯಾಪ್ತಿಯ 11 ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು ಇದ್ದರು.