ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಏಳು ವರ್ಷವಾದರೂ ಸಂಶೋಧನೆ ಪೂರ್ಣಗೊಳಿಸದ 70 ಮಂದಿಗೆ ಡಿ.31ರೊಳಗೆ ಪಿಎಚ್.ಡಿ ಮಹಾ ಪ್ರಬಂಧ ಮಂಡಿಸಲು ಗಡುವು ನೀಡಲಾಗಿದೆ.ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಬುಧವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಪ್ರತಿನಿಧಿ ರಾಕೇಶ್ ಕಾರ್ಯಸೂಚಿ ಚರ್ಚೆಯ ಬಳಿಕ, ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಪ್ರಗತಿ ವರದಿ ನೀಡುವುದನ್ನು ಕಡ್ಡಾಯಗೊಳಿಸಬೇಕು. ಈ ಸಂಬಂಧ ಸಮಿತಿ ರಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದರು.ಈ ಕುರಿತು ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಈ ಬಗ್ಗೆ ಹಾಲಿ ಇರುವ ಸಮಿತಿಯೇ ನಿಯಮ ರೂಪಿಸಬೇಕು. ಅದಕ್ಕಾಗಿ ಪ್ರತ್ಯೇಕ ಸಮಿತಿಯ ಅಗತ್ಯವಿಲ್ಲ ಎಂದರು.
ಈ ವೇಳೆ ಮಾತನಾಡಿದ ಪ್ರೊ.ಎಂ.ಎಸ್.ಶೇಖರ್, ಮೊದಲು ನಮ್ಮ ಸಂಶೋಧನಾ ಮಾರ್ಗದರ್ಶಕರು ಸರಿ ಇಲ್ಲ. ಅವರು ತಮ್ಮ ಸಂಶೋಧನಾರ್ಥಿಗಳು ನೀಡುವ ವಾರ್ಷಿಕ ವರದಿ ತೃಪ್ತಿಕರವಾಗಿದೆ ಎಂದು ಬರೆದು ಕಳುಹಿಸುತ್ತಾರೆ. ಒಮ್ಮೆ ತೃಪ್ತಿಕರವಾಗಿಲ್ಲ ಎಂದು ಹೇಳಿದರೆ ಎಲ್ಲರೂ ದಾರಿಗೆ ಬರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಅನೇಕ ಪ್ರಾಧ್ಯಾಪಕರು ಸಹಮತ ವ್ಯಕ್ತಪಡಿಸಿದರು.ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್ ಮಾತನಾಡಿ, ವಿವಿಯಲ್ಲಿ ಒಟ್ಟು 1164 ಮಂದಿ ಸಂಶೋಧನೆ ನಡೆಸುತ್ತಿದ್ದಾರೆ. ಈ ಪೈಕಿ ಸುಮಾರು 70 ಮಂದಿ 5 ಮತ್ತು 7 ವರ್ಷದಿಂದ ಫೆಲೋಶಿಪ್ ಮಾತ್ರ ಪಡೆದುಕೊಂಡು ಸಂಶೋಧನಾ ಪ್ರಬಂಧವನ್ನೇ ಮಂಡಿಸಿಲ್ಲ. ಅವರಿಗೆ ಡಿ.31ಕ್ಕೆ ಗಡುವು ನೀಡಿದ್ದು, ಪ್ರಬಂಧ ಮಂಡಿಸದಿದ್ದರೆ ಅವರನ್ನು ಅನರ್ಹಗೊಳಿಸಲಾಗುವುದು ಎಂದರು.
ಪ್ರತಿ ವಿದ್ಯಾರ್ಥಿಯು ಸುಮಾರು 25ರಿಂದ 52 ಸಾವಿರ ರು. ಫೆಲೋಶಿಪ್ ಪಡೆಯುತ್ತಿದ್ದಾರೆ. ಯಾರು ಫೆಲೋಶಿಪ್ ಪಡೆಯುತ್ತಿಲ್ಲವೋ ಅವರೆಲ್ಲರೂ ಬೇಗನೆ ಪಿಎಚ್.ಡಿ ಮುಗಿಸಿಕೊಳ್ಳುತ್ತಿದ್ದಾರೆ. ಫೆಲೋಶಿಪ್ ಪಡೆಯುವವರು ನಿಧಾನವಾಗಿದೆ. 5 ವರ್ಷ ಫೆಲೋಶಿಪ್ ಪಡೆದ ಅನೇಕ ಮಂದಿ ಪತ್ತೆಯೇ ಇಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸುವುದಾಗಿ ಅವರು ಹೇಳಿದರು.ಪಿಎಚ್.ಡಿ ಮಾಡುವವರಿಗೆ ಮಾರ್ಗದರ್ಶನ ಮಾಡುವ ಪ್ರಾಧ್ಯಾಪಕರು ಬಹಳ ಕಠಿಣವಾಗಿರಬೇಕು. ವಾರ್ಷಿಕ ವರದಿಯನ್ನು ಕುಲಂಕಷವಾಗಿ ಪರಿಶೀಲನೆ ಮಾಡಿ, ಸಂಶೋಧಕರ ಕಾರ್ಯವನ್ನು ಗುರುತಿಸಬೇಕು. ಅವರು ಕೆಲಸ ಮಾಡಿದ್ದಾರೆ ತೃಪ್ತಿಕರವಾಗಿದೆ ಎಂದು ಬರೆಯಬೇಕು. ಇಲ್ಲದಿದ್ದರೆ ತೃಪ್ತಿಕರವಾಗಿ ಇಲ್ಲ ಎಂದು ಬರೆಯಬೇಕು. ಆಗ ಮಾತ್ರ ಇದನ್ನು ಸರಿದಾರಿಗೆ ತರಬಹುದು ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಆಡಳಿತ ಮಂಡಳಿಯಿಂದ ಅನುಮೋದನೆಯಾಗಿ ಕಾಯಂ ನೇಮಕಾತಿ ಪಡೆದುಕೊಂಡಿರುವ ಉಪನ್ಯಾಸಕರು ಪಿಎಚ್.ಡಿ ಮಾಡಿ, ಯುಜಿಸಿಗೆ ಮಾನ್ಯತೆ ಪಡೆದುಕೊಳ್ಳುತ್ತಾರೆ. ಆದರೆ ಅವರ ಸಂಶೋಧನೆ ಗುಣಮಟ್ಟದಿಂದ ಕೂಡಿರುವುದಿಲ್ಲ. ನಮ್ಮ ವಿಶ್ವವಿದ್ಯಾನಿಲಯದಲ್ಲಿ 20-2025 ವರ್ಷದಿಂದ ಕೆಲಸ ಮಾಡುತ್ತಿರುವವರು ಪ್ರಾಧ್ಯಾಪಕರಾಗಲು ಸಾಧ್ಯವಾಗಿಲ್ಲ ಎಂಬ ಕುರಿತು ಪ್ರೊ.ಶೇಖರ್ ಅಸಮಾಧಾನ ಹೊರಹಾಕಿದರು.