ಸಾರಾಂಶ
ಬೆಂಗಳೂರಿನಲ್ಲಿ ಸಿಡಿಲಬ್ಬರದ ಧಾರಾಕಾರ ಮಳೆ ಮುಂದುವರೆದಿದ್ದು, ನೀರು ರಸ್ತೆಯಲ್ಲಿ ನಿಂತು ಹಾಗೂ ಮರದ ರೆಂಬೆಕೊಂಬೆಗಳು ಬಿದ್ದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನ ಸಾಮಾನ್ಯರು ಪರದಾಡಬೇಕಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರವೂ ಸಿಡಿಲಬ್ಬರದ ಧಾರಾಕಾರ ಮಳೆ ಮುಂದುವರೆದಿದ್ದು, ಮಳೆ ನೀರು ರಸ್ತೆಯಲ್ಲಿ ನಿಂತು ಹಾಗೂ ಮರದ ರೆಂಬೆಕೊಂಬೆಗಳು ಬಿದ್ದ ಹಿನ್ನೆಲೆಯಲ್ಲಿ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನ ಸಾಮಾನ್ಯರು ಪರದಾಡಬೇಕಾಯಿತು.
ಸತತವಾಗಿ 3ನೇ ದಿನ ನಗರದಲ್ಲಿ ಮಳೆ ಮುಂದುವರೆದಿದ್ದು, ಶುಕ್ರವಾರ ಮಧ್ಯಾಹ್ನದವರೆಗೂ ಬಿಸಿಲು ಹಾಗೂ ಸೆಕೆಯ ವಾತಾವರಣ ಕಂಡು ಬಂದಿತ್ತು. ಸಂಜೆಯಾಗುತ್ತಿದ್ದಂತೆ ನಗರದ ವಿವಿಧ ಭಾಗದಲ್ಲಿ ಮಳೆ ಶುರುವಾಯಿತು. ಶುಕ್ರವಾರ ಮಳೆಗಿಂತ ಗಾಳಿ ಹಾಗೂ ಗುಡುಗು, ಸಿಡಿಲಿನ ಅಬ್ಬರ ಹೆಚ್ಚಾಗಿ ಕಂಡು ಬಂತು. ನ್ಯಾಷನಲ್ ಕಾಲೇಜು ಬಳಿಯಲ್ಲಿ ಬೃಹತ್ ಮರ ಕಾರಿನ ಮೇಲೆ ಬಿದ್ದು, ನಗರದಲ್ಲಿ ಒಟ್ಟು 3 ಕಾರುಗಳು ಮರ ಬಿದ್ದು ಜಖಂಗೊಂಡಿವೆ. ಬಿದ್ದ ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಅದೇ ರೀತಿ ಶೇಷಾದ್ರಿಪುರದಲ್ಲಿ ಜಟ್ಕಾ ಸ್ಟ್ಯಾಂಡ್ ರಸ್ತೆಯಲ್ಲಿ ಮರ ಬಿದ್ದಿದ ವರದಿಯಾಗಿದೆ. ಸರ್ಜಾಪುರದ ಸೋಂಪುರ ಗೇಟ್ ಬಳಿ ಬೃಹತ್ ಹೋರ್ಡಿಂಗ್ಸ್ ಧರೆಗೆ ಬಿದ್ದಿದ್ದು, ಯಾವುದೇ ಅಪಾಯ ಉಂಟಾಗಿಲ್ಲ.
24 ಗಂಟೆಯಲ್ಲಿ 70ಕ್ಕೂ ಅಧಿಕ ಮರ ಧರೆಗೆ:
ಗುರುವಾರ ರಾತ್ರಿ 9 ಗಂಟೆಯಿಂದ ಶುಕ್ರವಾರ ರಾತ್ರಿ 8 ಗಂಟೆಯ ಅವಧಿಯಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 70ಕ್ಕೂ ಅಧಿಕ ಮರ ಸಂಪೂರ್ಣವಾಗಿ ಧರೆಗೆ ಬಿದ್ದಿವೆ. ಅದರೊಂದಿಗೆ 95ಕ್ಕೂ ಅಧಿಕ ಮರದ ರೆಂಬೆ-ಕೊಂಬೆಗಳು ಬಿದ್ದ ವರದಿಯಾಗಿದೆ.
ಎಲ್ಲೆಲ್ಲೂ ಟ್ರಾಫಿಕ್ ಜಾಮ್ : ಮಳೆಯಿಂದಾಗಿ ಶುಕ್ರವಾರ ಸಂಜೆ ವಡ್ಡರಪಾಳ್ಯದಿಂದ ಗೆದ್ದಲ ಹಳ್ಳಿ ರೈಲ್ವೆ ಅಂಡರ್ ಪಾಸ್ ಹೆಣ್ಣೂರು ಕಡೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆರ್.ಟಿ.ನಗರದ ಸಿಬಿಐ ಫ್ಲೈಓವರ್‌ನಿಂದ ವಿಮಾನ ನಿಲ್ದಾಣದ ಕಡೆಗೆ, ಹೆಬ್ಬಾಳದಿಂದ ಗುರುಗುಂಟೆಪಾಳ್ಯ, ಗುರುಗುಂಟೆಪಾಳ್ಯದಿಂದ ಹೆಬ್ಬಾಳ ಕಡೆಗೆ, ಬಿನ್ನಿಮಿಲ್ ಜಂಕ್ಷನ್ ರೈಲು ನಿಲ್ದಾಣದಿಂದ ಹುಣಸೆಮರದ ರಸ್ತೆಯ ಎರಡೂ ಮಾರ್ಗದಲ್ಲಿ, ಮದರ್ ಡೈರಿಯಿಂದ ಎಂ.ಎಸ್ ಪಾಳ್ಯ ಕಡೆಗೆ, ಕಡೆಗೆ, ಓಕಳಿಪುರ ಜಂಕ್ಷನ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಹಾಗೂ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಪೀಣ್ಯ ಮೇಲ್ಸೇತುವೆ, ಕುವೆಂಪು ವೃತ್ತದಿಂದ ಬಿಇಎಲ್ ವೃತ್ತ ಕಡೆಗೆ, ಪ್ರಸನ್ನ ಜಂಕ್ಷನ್‌ನಿಂದ ವಿಜಯನಗರ ಕಡೆಗೆ, ಕುವೆಂಪು ವೃತ್ತದಿಂದ ಭದ್ರಪ್ಪ ಲೇಔಟ್ ಕಡೆಗೆ, ಬೆಳ್ಳಹಳ್ಳಿಯಿಂದ ಭಾರತೀಯ ನಗರ ಕಡೆಗೆ, ಸಂತೆ ಸರ್ಕಲ್‌ನಿಂದ ಕೋಗಿಲು ಕ್ರಾಸ್ ಕಡೆಗೆ ಸೇರಿದಂತೆ ವಿವಿಧ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ರಸ್ತೆಯಲ್ಲಿ ನೀರು: ಕೆಳ ಸೇತುವೆಗಳು ಬಂದ್
ನೀರುಗಾಲುವೆಗೆ ಮಳೆ ನೀರುವ ಹೋಗವ ಜಾಗದಲ್ಲಿ ಕಸಕಡ್ಡಿ ಸಿಕ್ಕಿಕೊಂಡಿದ್ದ ಪರಿಣಾಮ ಮಳೆ ನೀರು ಸರಾಗವಾಗಿ ಮೋರಿಗೆ ಹರಿಯದೆ ಬಹುತೇಕ ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತ ಪರಿಣಾಮ ದ್ವಿಚಕ್ರ, ಆಟೋರಿಕ್ಷಾ ಸಂಚಾರಕ್ಕೆ ಅಡ್ಡಿಯಾಯಿತು. ಸುಮಾರು ಒಂದು ಗಂಟೆ ಕಾಲ ಸಣ್ಣ ಪ್ರಮಾಣದಲ್ಲಿ ಮಳೆ ಬೀಳುತ್ತಲೇ ಇದ್ದ ಕಾರಣ ದ್ವಿಚಕ್ರ ವಾಹನ ಸವಾರರು, ಸಾರ್ವಜನಿಕರು ಪ್ರಯಾಣಿಕರ ತಂಗುದಾಣ, ಕಟ್ಟಡಗಳ ಬಳಿ ನಿಂತು ಆಶ್ರಯ ಪಡೆಯಬೇಕಾಯಿತು. ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಆರ್ ವೃತ್ತ, ಬ್ಯಾಟರಾಯನಪುರ, ಸ್ಯಾಂಕಿ ರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಇದರಿಂದಲೂ ಕೆಲವು ಭಾಗದಲ್ಲಿ ಸಂಚಾರ ದಟ್ಟಣೆಯಾಗಿ ವಾಹನ ಸವಾರರು ಪರದಾಡಿದರು.
ಎಲ್ಲೆಲ್ಲಿ ಎಷ್ಟು ಮಳೆ:
ಕೆಂಗೇರಿಯಲ್ಲಿ ಅತಿ ಹೆಚ್ಚು 7.8 ಸೆಂ.ಮೀ ಮಳೆಯಾಗಿದೆ. ಉಳಿದಂತೆ, ಆರ್‌ಆರ್‌ನಗರ 4.3, ಹೆಮ್ಮಿಗೆಪುರ 3.6, ಗೊಲ್ಲಹಳ್ಳಿ, ನಾಯಂಡನಹಳ್ಳಿಯಲ್ಲಿ 3.5, ಪೀಣ್ಯ 3.2, ಬಾಗಲಗುಂಟೆ 3.1, ಹೇರೋಹಳ್ಳಿ 3, ಹಂಪಿನಗರ, ಚೊಕ್ಕಸಂದ್ರದಲ್ಲಿ 2.9, ಶೆಟ್ಟಿಹಳ್ಳಿ 2.7, ದೊಡ್ಡಬಿದರಕಲ್ಲು, ಬಸವೇಶ್ವರ ನಗರದಲ್ಲಿ ತಲಾ 2.3, ಜಕ್ಕೂರು 2.2 ಸೆಂ.ಮೀ ಮಳೆಯಾಗಿದೆ. ಒಟ್ಟಾರೆ ನಗರದಲ್ಲಿ ಸರಾಸರಿ 1.1 ಸೆಂ.ಮೀ ಮಳೆಯಾಗಿದ್ದು, ಶನಿವಾರವೂ ನಗರದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಂಗೇರಿಯಲ್ಲಿ ಅತಿ ಹೆಚ್ಚು 7.8 ಸೆಂ.ಮೀ ಮಳೆಯಾಗಿದೆ. ಉಳಿದಂತೆ, ಆರ್‌ಆರ್‌ನಗರ 4.3, ಹೆಮ್ಮಿಗೆಪುರ 3.6, ಗೊಲ್ಲಹಳ್ಳಿ, ನಾಯಂಡನಹಳ್ಳಿಯಲ್ಲಿ 3.5, ಪೀಣ್ಯ 3.2, ಬಾಗಲಗುಂಟೆ 3.1, ಹೇರೋಹಳ್ಳಿ 3, ಹಂಪಿನಗರ, ಚೊಕ್ಕಸಂದ್ರದಲ್ಲಿ 2.9, ಶೆಟ್ಟಿಹಳ್ಳಿ 2.7, ದೊಡ್ಡಬಿದರಕಲ್ಲು, ಬಸವೇಶ್ವರ ನಗರದಲ್ಲಿ ತಲಾ 2.3, ಜಕ್ಕೂರು 2.2 ಸೆಂ.ಮೀ ಮಳೆಯಾಗಿದೆ. ಒಟ್ಟಾರೆ ನಗರದಲ್ಲಿ ಸರಾಸರಿ 1.1 ಸೆಂ.ಮೀ ಮಳೆಯಾಗಿದ್ದು, ಶನಿವಾರವೂ ನಗರದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.