ಬಿಲ್ಲವರ ಬೇಡಿಕೆಗಾಗಿ 700 ಕಿ.ಮೀ ಯಾತ್ರೆ: ಪ್ರಣವಶ್ರೀ

| Published : Nov 18 2025, 12:45 AM IST

ಸಾರಾಂಶ

18 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಮುಖ್ಯಸ್ಥ ಪ್ರಣವಾನಂದ ಸ್ವಾಮೀಜಿ ಅವರು 700 ಕಿ.ಮೀ. ಪಾದಯಾತ್ರೆ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಈಡಿಗ, ಬಿಲ್ಲವ, ನಾಮಧಾರಿ ಮತ್ತು ಇತರ ಸಮುದಾಯಗಳಿಗೆ ಸಂಬಂಧಿಸಿದ 18 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಮುಖ್ಯಸ್ಥ ಪ್ರಣವಾನಂದ ಸ್ವಾಮೀಜಿ ಅವರು ಜ.6ರಿಂದ ಕಲಬುರಗಿಯಿಂದ ಬೆಂಗಳೂರಿಗೆ 41 ದಿನ 700 ಕಿ.ಮೀ. ಪಾದಯಾತ್ರೆ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ದಿನಕ್ಕೆ ಸುಮಾರು 20 ಕಿ.ಮೀ. ಕ್ರಮಿಸಲಿದ್ದು, 15 ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನು ಯೋಜಿಸಲಾಗಿದೆ ಎಂದರು. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ವಾರ್ಷಿಕ ₹250 ಕೋಟಿ ಹಂಚಿಕೆ ಮಾಡುವುದಾಗಿ ಭರವಸೆ ನೀಡಿದ್ದರೂ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಮಂಜುನಾಥ ಪೂಜಾರಿ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದ್ದರೂ, ನೇಮಕಾತಿ ಆದೇಶ ಇನ್ನೂ ಅವರಿಗೆ ತಲುಪಿಲ್ಲ, ಯಾವುದೇ ಕಚೇರಿಯನ್ನೂ ಸ್ಥಾಪಿಸಲಾಗಿಲ್ಲ ಎಂದು ಆಕ್ಷೇಪಿಸಿದರು.

ಸಮುದಾಯವನ್ನು 2ಎ ವರ್ಗದಿಂದ ಎಸ್‌ಟಿ ವರ್ಗಕ್ಕೆ ಬದಲಾಯಿಸಬೇಕು, ಕಲ್ಯಾಣ ಕರ್ನಾಟಕದಲ್ಲಿ ಶೇಂದಿ ನಿಷೇಧದೊಂದಿಗೆ ಸಮುದಾಯದ ಸದಸ್ಯರು ಮೂಲಭೂತ ಸೌಲಭ್ಯಗಳಿಲ್ಲದೆ ಕಷ್ಟಪಡುತ್ತಿದ್ದು, ಅವರಿಗೆ ನೆರವು ಬೇಕಿದೆ. ವಿಧಾನಸೌಧದ ಮುಂದೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆ ಸ್ಥಾಪಿಸಬೇಕು, ಕೋಟಿ ಚೆನ್ನಯ ಜನ್ಮಸ್ಥಳದ ಅಭಿವೃದ್ಧಿಗೆ ₹100 ಕೋಟಿ ಮಂಜೂರು ಮಾಡಬೇಕು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಬೇಕು ಎಂದು ಒತ್ತಾಯಿಸಿದರು.