15 ಕ್ಕೆ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಯೋಜನೆ

| Published : Nov 11 2023, 01:16 AM IST / Updated: Nov 11 2023, 01:17 AM IST

ಸಾರಾಂಶ

ಬರ ಹಿನ್ನೆಲೆ ಸರಳವಾಗಿ ಸಪ್ತಾಹ ಆಚರಿಸಲು ನಿರ್ಧಾರ: ಮಾಜಿ ಶಾಸಕ ನಾಡಗೌಡ

ಕನ್ನಡಪ್ರಭ ವಾರ್ತೆ ರಾಯಚೂರು

70 ನೇ ಅಖಿಲ ಭಾರತ ಸಹಕಾರ ಸಪ್ತಾಹ-2023 ಕಾರ್ಯಕ್ರಮವನ್ನು ಇದೇ ನ.15 ರಿಂದ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10:30 ಕ್ಕೆ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಒಎಫ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ಶುಕ್ರವಾರ ಆರ್‌ಡಿಸಿಸಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಧ್ವಜಾರೋಹಣ ನೆರವೇರಿಸುವರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಸ್ತು ಪ್ರದರ್ಶನ ಮಳಿಗೆಗೆ ಚಾಲನೆ ನೀಡುವರು. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರಿಂದ ಸಫಲ್ ನೀರಿನ ಬಾಟಲ್ ಲೋಕಾರ್ಪಣೆ ಮಾಡಲಾಗುವುದು. ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೆಗೌಡ, ಕರ್ನಾಟಕ ರಾಜ್ಯ ಗ್ರಾಹಕರ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಪಿ.ಪಾಟೀಲ, ಕುರಿ ಮತ್ತು ಮೇಕೆ ಸಾಕಣೆದಾರರ ಸಂಘಗಳ ಮಹಾಮಂಡಳ ಅಧ್ಯಕ್ಷ ಶರಣು ಬಿ.ತಳ್ಳಿಕೇರಿ, ಮಹಾಮಂಡಳದ ನಿರ್ದೇಶಕರು, ಹಿರಿಯ ಸಹಕಾರಿಗಳು, ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಅನೇಕರು ಪಾಲ್ಗೊಳ್ಳುವರು ಎಂದು ವಿವರಿಸಿದರು.

ಇಡೀ ದೇಶದಲ್ಲಿಯೇ ಸಪ್ತಾಹ ಆಚರಿಸುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿ ಸಹಕಾರಿ ಪ್ರವೇಶ ಮಾಡಬೇಕು ಎನ್ನುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಹತ್ತು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಸಲದ ಸಪ್ತಾಹದ ಧ್ಯೇಯ ದೇಶ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಹಕಾರ ಕ್ಷೇತ್ರಗಳ ಬಲವರ್ಧನೆಗೆ ಕೇಂದ್ರ ಸರ್ಕಾರ ಬಹಳ ಒತ್ತು ನೀಡುತ್ತಿದೆ ಎಂದರು.

ಈ ಬಾರಿ ಮುಖ್ಯವಾಗಿ ಸಿರಿಧಾನ್ಯಗಳ ಉತ್ತೇಜನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸಿರಿಧಾನ್ಯಗಳಿಗೆ ಪ್ರತ್ಯೇಕ ವಿಭಾಗ ರಚಿಸಲಾಗಿದೆ. ವಿದೇಶಗಳಲ್ಲಿ ಸಿರಿಧಾನ್ಯಗಳಿಗೆ ಬಹಳಷ್ಟು ಬೇಡಿಕೆಯಿದ್ದು, ಸಹಕಾರಿಗಳ ಮೂಲಕ ಸಿರಿಧಾನ್ಯ ಮಾರುಕಟ್ಟೆ ಬಲವರ್ಧನೆಗೆ ಒತ್ತು ನೀಡಲಾಗುತ್ತಿದೆ. ಮೊದಲು ಈ ಭಾಗದಲ್ಲಿ ಸಿರಿಧಾನ್ಯಗಳಿಗೆ ಮಾರುಕಟ್ಟೆ ಸೃಷ್ಟಿಸಿ ಆನಂತರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಮುಂದಾಗಲಾಗುವುದು ಎಂದು ತಿಳಿಸಿದರು.

ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ ಮಾತನಾಡಿ, ಸರ್ಕಾರದಿಂದ ಇನ್ನೂ ನಾಲ್ಕು ಕೋಟಿ ಸಾಲಮನ್ನಾ ಹಣ ಬರಬೇಕಿದೆ. ಸರ್ಕಾರ ಸದ್ಯಕ್ಕೆ ರೈತರ ಬಡ್ಡಿ ಮನ್ನಾ ಮಾತ್ರ ಮನ್ನಾ ಮಾಡುತ್ತಿದೆ. ಹೊಸ ಸಾಲಮನ್ನಾದ ವಿಚಾರ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ಶಾವಂತಗೇರಿ ಸೇರಿ ಅನೇಕರಿದ್ದರು.

ಸಹಕಾರ ಸಪ್ತಾಹ ಹಿನ್ನೆಲೆ ಜಿಲ್ಲೆಯಾದ್ಯಂತ ಕಾರ್ಯಕ್ರಮವನ್ನು ರೂಪಿಸಲಾಗಿದೆ. ರಾಯಚೂರು ತಾಲೂಕಿನ ಕೂಡ್ಲೂರಿನಲ್ಲಿ ನ. 14 ರಂದು ಸಹಕಾರ ಸಂಸ್ಥೆಗಳಲ್ಲಿ ಇತ್ತಿಚೀನ ಬೆಳವಣಿಗೆಗಳು ದಿನವನ್ನು ಆಚರಿಸಲಾಗುತ್ತಿದೆ. 15 ರಂದು ಕೃಷಿ ವಿವಿಯಲ್ಲಿ ಸಾಲೇತರ ಸಹಕಾರ ಸಂಘಗಳ ಪುನಃಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ ದಿನವನ್ನು ರಾಜ್ಯ ಮಟ್ಟದ ಕಾರ್ಯಕ್ರಮ ಏರ್ಪಡಿಸಿದ್ದು, 16ಕ್ಕೆ ಮಾನ್ವಿ ತಾಲೂಕು ಭಾಗ್ಯನಗರ ಕ್ಯಾಂಪ್ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ ದಿನ, 17ಕ್ಕೆ ರಾಯಚೂರು ತಾಲೂಕಿನ ದಿನ್ನಿ ಪ್ಯಾಕ್ಸ್ ಸಂಘದಲ್ಲಿ ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯೋನ್ಮುಖ ವಲಯಗಳು ದಿನ, 18ಕ್ಕೆ ಲಿಂಗಸಗೂರು ತಾಲೂಕು ಸಂತೆಕಲ್ಲೂರು ಪ್ಯಾಕ್ಸ್ ಸಂಘದಲ್ಲಿ ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವುದು ದಿನ, 19ಕ್ಕೆ ಸಿಂಧನೂರು ತಾಲೂಕು ಮಲ್ಲಾಪುರ ಪ್ಯಾಕ್ಸ್ ಸಂಘದಲ್ಲಿ ಮಹಿಳೆಯರು, ಯುವಜನ ಮತ್ತು ಅಬಲವರ್ಗಕ್ಕೆ ಸಹಕಾರ ಸಂಸ್ಥೆಗಳು ದಿನ ಹಾಗೂ ನ.20ರಂದು ದೇವದುರ್ಗ ತಾಲೂಕಿನ ಅನ್ನಪೂರ್ಣೇಶ್ವರಿ ಮಹಿಳಾ ಸಹಕಾರ ಸಂಘದಲ್ಲಿ ಸಹಕಾರ ಶಿಕ್ಷಣ ತರಬೇತಿಯ ಪರಿಷ್ಕರಣೆ ದಿನ ಹಮ್ಮಿಕೊಳ್ಳಲಾಗಿದೆ.-------------

10ಕೆಪಿಆರ್ಸಿಆರ್03: ಕೆಒಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ