ದುಬಾರೆ: 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

| Published : Nov 13 2025, 01:30 AM IST

ಸಾರಾಂಶ

ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ರೀತಿಯ ಜಲಕ್ರೀಡೆಗಳ ಕ್ರೀಡಾಕೂಟವನ್ನು ದುಬಾರೆ ಕಾವೇರಿ ರಿವರ್‌ ರಾಫ್ಟಿಂಗ್‌ ನೌಕರರ ಸಂಘ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು

ನಂಜರಾಯಪಟ್ಟಣದ ದುಬಾರೆಯಲ್ಲಿ ಹಮ್ಮಿಕೊಂಡಿದ್ದ ಜಲ ಕ್ರೀಡಾ ಪಂದ್ಯವು ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು, ರಾಜ್ಯದ ನಾನಾ ಭಾಗಗಳಿಂದ ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ, 3ನೇ ವರ್ಷದ ವಿವಿಧ ರೀತಿಯ ಜಲ ಕ್ರೀಡೆಗಳ ಕ್ರೀಡಾಕೂಟವನ್ನು ದುಬಾರೆ ಕಾವೇರಿ ರಿವರ್ ರಾಫ್ಟಿಂಗ್ ನೌಕರರ ಸಂಘದ ಆಯೋಜಿಸಿತ್ತು.

ಕಾವೇರಿ ರಿವರ್ ರಾಫ್ಟಿಂಗ್ ನೌಕರರ ಸಂಘದ ಅಧ್ಯಕ್ಷರಾದ ನಿತನ್ ಅವರ ನೇತೃತ್ವದಲ್ಲಿ ಕ್ರೀಡಾಕೂಟ ಜರುಗಿತು.

ಆಕರ್ಷಣೆಯ ಸ್ಥಳವಾಗಿದೆ:

ಕೊಡಗು ಜಿಲ್ಲಾ ಕರವೇ ಅಧ್ಯಕ್ಷರಾದ ದೀಪಕ್ ಅವರು ಮಾತನಾಡಿ ದುಬಾರೆಯ ರಿವರ್ ರಾಫ್ಟಿಂಗ್ ಹಾಗೂ ಆನೆ ಶಿಬಿರದ ಸ್ಥಳಗಳು ಕೊಡಗಿಗೆ ಆಗಮಿಸುವ ಪ್ರವಾಸಿಗರ ಆಕರ್ಷಣೆಯ ಸ್ಥಳವಾಗಿದೆ.

ರಾಫ್ಟಿಂಗ್ ಗೈಡ್ ಗಳು ಅಪ್ಪಟ ಧೈರ್ಯಶಾಲಿಗಳು ಜೊತೆಗೆ ಕನ್ನಡ ಭಾಷಾ ಪ್ರೇಮಿಗಳು ಹೌದು, ಸೊಗಸಾದ ಇಂತಹ ಕ್ರೀಡಾಕೂಟಗಳನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವುದು ಅವರ ಕನ್ನಡ ಪ್ರೇಮಕ್ಕೆ ಹಿಡಿದ ಕೈಗನ್ನಡಿ ಎಂದು ಬಣ್ಣಿಸಿದರು, ಪ್ರವಾಸಿಗರಿಗೆ ರಾಫ್ಟಿಂಗ್ ಗೈಡ್ ಗಳಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಅತಿವೃಷ್ಟಿ ಹಾಗೂ ಪ್ರವಾಹದಂತಹ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಶ್ಲಾಘನೀಯ ಎಂದು ತಿಳಿಸಿದರು, ನುರಿತ ಈಜುಗಾರನ್ನು ಹೊಂದಿರುವ ರಾಪ್ಟಿಂಗ್ ತಂಡ ಸಾರ್ವಜನಿಕರಿಗಾಗಿ ಈಜು ತರಬೇತಿ ಶಿಬಿರಗಳನ್ನು ಆಯೋಜಿಸಲು ಸಲಹೆ ಇತ್ತರು.

ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ ಎಲ್ ವಿಶ್ವ ಅವರು ಮಾತನಾಡಿ , ಪ್ರತಿವರ್ಷವು ದುಬಾರೆಯಲ್ಲಿ ನಡೆಯುವ ಜಲ ಕ್ರೀಡೆಯು ಒಂದು ಹಬ್ಬದ ವಾತಾವರಣವನ್ನೇ ಸೃಷ್ಟಿಸುತ್ತದೆ, ಇಲ್ಲಿ ಜಾತಿ ಜಾತಿಗಳ ಹೆಸರಿನಲ್ಲಿ ಕ್ರೀಡಾಕೂಟಗಳು ನಡೆಯುವುದಿಲ್ಲ ಬದಲಿಗೆ ಎಲ್ಲಾ ಕೋಮಿನ ಎಲ್ಲಾ ಜಾತಿಯ ಯುವಕರು ಸೇರಿ ಇಂಥ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವುದು ಸೌಹಾರ್ದತೆಯ ಪ್ರತೀಕ ಎಂದು ಬಣ್ಣಿಸಿದರು, ನಂಜರಾಯಪಟ್ಟಣ ಪಂಚಾಯಿತಿ ಗಾಂಧಿ ಗ್ರಾಮ ಪ್ರಶಸ್ತಿಗೆ ಭಾಜನವಾಗಿದ್ದರೆ ಅದು ಇಲ್ಲಿನ ಯುವಕರ ಸಹಕಾರದಿಂದ ಎಂದು ತಿಳಿಸಿದರು.

ರಾಫ್ಟಿಂಗ್ ಮಾಲೀಕರು ಮತ್ತು ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ವಿಜು ಚಂಗಪ್ಪ ಮಾತನಾಡಿ,

ನಮ್ಮ ರಾಫ್ಟಿಂಗ್ ಚಾಲಕರು ಪ್ರವಾಸಿಗರನ್ನು ರಂಜಿಸುವ ಗೈಡ್ ಮಾತ್ರವಲ್ಲ, ದಸರಾದಂತಹ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವುದರ ಮುಖಾಂತರ ನಮ್ಮ ಊರಿಗೆ ಕೀರ್ತಿ ತಂದ ಹೆಮ್ಮೆಯ ನಾವಿಕರು ಎಂದು ಬಣ್ಣಿಸಿದರು.

ಕ್ರೀಡಾಕೂಟದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರಾದ ರಕ್ಷಿತ್ ಮಾವಜಿ , ದುಬಾರೆ ಇನ್ ಹಾಗೂ ರಾಫ್ಟಿಂಗ್ ಮಾಲೀಕರಾದ ರತೀಶ್, ರಾಫ್ಟಿಂಗ್ ಮಾಲೀಕರು ಹಾಗೂ ಕಾಫಿ ಬೆಳೆಗಾರರಾದ ಮೋಹನ್ ಕುಮಾರ್, ರಿವರ್ ರಾಫ್ಟಿಂಗ್ ಅಸೋಸಿಯೇಶನ್ ದುಬಾರೆಯ ಕಾರ್ಯದರ್ಶಿಗಳಾದ ನವೀನ್ ಟಿ ಟಿ, ಮೀನುಕೊಲ್ಲಿ ವಲಯ ವನ ಪಾಲಕ ಅಧಿಕಾರಿಗಳಾದ ಸಚಿನ್ ನಿಂಬಾಲ್ಕರ್, ರಾಫ್ಟಿಂಗ್ ಮಾಲೀಕರಾದ ಅನುಪಮ ಸಿದ್ದಟ್ಟಿ, ನಂಜುಂಡೇಶ್ವರ ಯೂತ್ ಕ್ಲಬ್ ಅಧ್ಯಕ್ಷರಾದ ಮ್ಯಾಥ್, ನುರಿತ ರಾಪ್ಟಿಂಗ್ ಚಾಲಕರುಗಳಾದ ರಂಜಿತ್ ಎಂ ಎಸ್, ಅನು ಪುರುಷೋತ್ತಮ್, ಮನೀಶ್ ಮತ್ತು ಹರೀಶ್ ಹಾಗೂ ಸಂಘದ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಕ್ರೀಡಾ ಪ್ರೇಮಿಗಳು ಭಾಗವಹಿಸಿದ್ದರು.

ಜಲ ಕ್ರೀಡಾ ಪಂದ್ಯಾಟಗಳು ಬೆಳಿಗ್ಗೆ 9 ರಿಂದ ಪ್ರಾರಂಭವಾಗಿ ಸಂಜೆ 6 ಕ್ಕೆ ಮುಕ್ತಾಯಗೊಂಡಿತು, ತೀವ್ರ ಹಣಹಣಿಯಿಂದ ಕೂಡಿದ ಪಂದ್ಯಾಟಗಳು ರೋಮಾಂಚಕವಾಗಿದ್ದವು .

ವಿಜೇತರ ವಿವರ:

ಬೋಟ್ ರೇಸ್ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಕ್ರಮವಾಗಿ ವೇವ್ ವಾರಿಯರ್ಸ್, ಟೀಮ್ ಕಾವೇರಿ, ಟೀಮ್ ಬ್ರಹ್ಮಪುತ್ರ, ತಂಡಗಳು ಪಡೆದುಕೊಂಡವು. ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ಸ್ಥಾನಗಳನ್ನು ಕ್ರಮವಾಗಿ ರೈ ಫ್ಯಾಮಿಲಿ ಹೊಸಗದ್ದೆ, ವೈಲ್ಡ್ ಕಾರ್ಟ್ ಬಿ, ತಂಡಗಳು ಪಡೆದುಕೊಂಡವು.

ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ದ್ವಿತೀಯ ಸ್ಥಾನಗಳನ್ನು ಮಹಾದೇವ ಸ್ಪೋರ್ಟ್ಸ್ ಕ್ಲಬ್ , ಬಲಮುರಿ. ನಂಜುಂಡೇಶ್ವರ ಮಹಿಳಾಸಂಘ, ತಂಡಗಳು ಪಡೆದುಕೊಂಡವು.

ಈಜು ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳನ್ನು ಪುನೀತ್, ರಂಜಿತ್, ಪ್ರತಾಪ್ ಅವರುಗಳು ಪಡೆದುಕೊಂಡರು. ಮಹಿಳೆಯರಿಗಾಗಿ ಮ್ಯೂಸಿಕಲ್ ಬಾಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ದ್ವಿತೀಯ ಸ್ಥಾನಗಳನ್ನು ಕಾವ್ಯ ರಾಜೇಶ್, ರಮ್ಯಾ ಸತೀಶ್ ಅವರುಗಳು ಪಡೆದುಕೊಂಡರು.