ದಕ್ಷಿಣ ಕನ್ನಡ: ಪದವೀಧರ ಶೇ.72.87, ಶಿಕ್ಷಕರ ಕ್ಷೇತ್ರದಲ್ಲಿ ಶೇ. 75.71 ಮತದಾನ

| Published : Jun 04 2024, 12:31 AM IST

ದಕ್ಷಿಣ ಕನ್ನಡ: ಪದವೀಧರ ಶೇ.72.87, ಶಿಕ್ಷಕರ ಕ್ಷೇತ್ರದಲ್ಲಿ ಶೇ. 75.71 ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್‌ನ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದೆ. ಜಿಲ್ಲೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಶೇ. 72.87 ಮತದಾನವಾಗಿದ್ದರೆ, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶೇ. 75.71 ಮತದಾರರು ಮತ ಚಲಾವಣೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪದವೀಧರ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ 19,971 ಮತದಾರರಿದ್ದು, ಅವರಲ್ಲಿ 14,553 ಮಂದಿ ಮತ ಚಲಾಯಿಸಿದ್ದಾರೆ. ಅದೇ ರೀತಿ ಶಿಕ್ಷಕರ ಕ್ಷೇತ್ರದಲ್ಲಿ 8,189 ಮಂದಿ ಮತದಾರ ಪೈಕಿ 6,200 ಮಂದಿ ಮತದಾನ ಮಾಡಿದರು.

ಪದವೀಧರ ಕ್ಷೇತ್ರದಲ್ಲಿ 24 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಸ್ಥಾಪಿಸಲಾದ ಒಟ್ಟು 16 ಮತಗಟ್ಟೆಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ಬ್ಯಾಲೆಟ್‌ ಪೇಪರ್‌ನಲ್ಲಿ ಮತ ಚಲಾವಣೆಯಾಗಿವೆ. ಜೂ.6ರಂದು ಮೈಸೂರಿನಲ್ಲಿ ಮತಎಣಿಕೆ ನಡೆಯಲಿದೆ.

ಬೆಳಗ್ಗೆ ಮತದಾನ ಕ್ಷೀಣ, ಬಳಿಕ ಚುರುಕು:

ಬೆಳಗ್ಗೆ ಸುಮಾರು 10-11 ಗಂಟೆವರೆಗೆ ಜಿಲ್ಲೆಯ ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾನದ ಉತ್ಸಾಹ ಅಷ್ಟಾಗಿ ಕಂಡುಬರಲಿಲ್ಲ. 10 ಗಂಟೆ ವೇಳೆಗೆ ಪದವೀಧರ ಕ್ಷೇತ್ರದಲ್ಲಿ ಶೇ.14.92 ಮತದಾನ ಆಗಿದ್ದರೆ, ಶಿಕ್ಷಕರ ಕ್ಷೇತ್ರದಲ್ಲಿ ಶೇ 14.35 ಮತದಾನವಾಗಿತ್ತು. 11 ಗಂಟೆ ಬಳಿಕ ಕ್ರಮೇಣ ಮತದಾನ ಚುರುಕುಗೊಂಡಿತು. ಮಂಗಳೂರಿನ ವಿವಿ ಕಾಲೇಜು ಮತಗಟ್ಟೆಯಲ್ಲಿ ಉದ್ದದ ಸರತಿ ಸಾಲು ಕಂಡುಬಂತು. ಮೂಡುಬಿದಿರೆ, ಮೂಲ್ಕಿಯ ಮತಗಟ್ಟೆಗಳಲ್ಲೂ ಉತ್ತಮ ಸಂಖ್ಯೆಯ ಮತದಾರರು ಇದ್ದರು.

ಮಧ್ಯಾಹ್ನ 12 ಗಂಟೆ ವೇಳೆಗೆ ಪದವೀಧರ ಕ್ಷೇತ್ರದಲ್ಲಿ ಶೇ. 34.19 ಮತದಾನವಾಗಿದ್ದರೆ, ಶಿಕ್ಷಕರ ಕ್ಷೇತ್ರದಲ್ಲಿ ಶೇ. 33.41 ಮತದಾನವಾಗಿತ್ತು. ಮಧ್ಯಾಹ್ನ ಬಳಿಕ ಹೆಚ್ಚಿನ ಸಂಖ್ಯೆಯ ಮತದಾರರು ಮತಗಟ್ಟೆಯೆಡೆಗೆ ಆಗಮಿಸತೊಡಗಿದರು. ಸಂಜೆ 4 ಗಂಟೆಗೆ ಮತದಾನ ಕಾರ್ಯ ಮುಕ್ತಾಯಗೊಂಡಿತು.

‘ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಕ್ಕೆ ಮತದಾನ ಮಾಡುತ್ತಿರುವುದು ಇದು 2ನೇ ಬಾರಿ. ಶಿಕ್ಷಕರ ಅನೇಕ ಬೇಡಿಕೆಗಳು, ಸಮಸ್ಯೆಗಳಿವೆ. ಬಗೆಹರಿಯುವ ಆಶಾಭಾವನೆಯಲ್ಲಿ ಪ್ರತಿಬಾರಿಯೂ ಮತದಾನ ಮಾಡುತ್ತೇವೆ, ನಂತರ ಬೇಡಿಕೆಗಳು ಈಡೇರುವುದೇ ಇಲ್ಲ. ಇಂಥ ನಿರ್ಲಕ್ಷ್ಯ ಈ ಬಾರಿಯಾದರೂ ಬದಲಾಗಬೇಕಿದೆ. ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳಿಗೆ ಆಯ್ಕೆಯಾದವರು ಸ್ಪಂದಿಸಬೇಕು’ ಎಂದು ಮೂಡುಬಿದಿರೆಯ ಮತದಾರ ಶಿಕ್ಷಕ ಸತೀಶ್‌ ಅಭಿಪ್ರಾಯ ಹಂಚಿಕೊಂಡರು.