ಹತ್ತೇ ದಿನದಲ್ಲಿ ವಾಡಿಕೆಗಿಂತ 78% ಅಧಿಕ ಮಳೆ

| Published : Jun 11 2024, 01:32 AM IST

ಸಾರಾಂಶ

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೇರಿದಂತೆ ಇನ್ನೂ ಬೇರೆ ಬೇರೆ ವರದಿಗಳು ಹೇಳಿರುವ ಹಿನ್ನೆಲೆಯಲ್ಲಿ ಮಳೆ ಹಾನಿ ತಡೆಯಲು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೂ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೇರಿದಂತೆ ಇನ್ನೂ ಬೇರೆ ಬೇರೆ ವರದಿಗಳು ಹೇಳಿರುವ ಹಿನ್ನೆಲೆಯಲ್ಲಿ ಮಳೆ ಹಾನಿ ತಡೆಯಲು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೂ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ವಿಪತ್ತು ನಿರ್ವಹಣೆ ಕುರಿತ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಹಾನಿಯಿಂದ ಯಾವುದೇ ಜೀವ ಹಾನಿ, ಆಸ್ತಿ ಪಾಸ್ತಿ ಹಾನಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನೀರಾವರಿ, ಗ್ರಾಮೀಣಾಭಿವೃದ್ಧಿ, ಕಂದಾಯ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖಾ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ ಎಂದರು.

ಯಾವುದೇ ಪ್ರಾಣ ಹಾನಿಗಳನ್ನು ತಡೆಯುವುದು ವಿಶೇಷ ಆದ್ಯತೆಯಾಗಿರಬೇಕು. ಏಕೆಂದರೆ ಪ್ರಾಣ ಹಾನಿಯಾದ ಬಳಿಕ ಎಷ್ಟೇ ಪರಿಹಾರ ಕೊಟ್ಟರೂ ಪ್ರಯೋಜನ ಇಲ್ಲ. ಪ್ರಾಣ ಹಾನಿಯಾಗದಂತೆ ತಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಅದನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಪ್ರತೀ ವರ್ಷ ಮಳೆ ಹಾನಿಗೊಳಗಾಗುವ ಪ್ರದೇಶಗಳನ್ನು ಮಾಪನ ಮಾಡಿ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಲುಪಿಸಲಾಗಿದೆ. ಅವರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

10 ದಿನದಲ್ಲಿ ಶೇ.41ರಷ್ಟು ಹೆಚ್ಚು ಮಳೆ:

ರಾಜ್ಯದಲ್ಲಿ ಪೂರ್ವ ಮುಂಗಾರಿನಲ್ಲಿ 115 ಮಿ.ಮೀ. ವಾಡಿಕೆ ಮಳೆ ಆಗಬೇಕು. ಈ ಬಾರಿ 151 ಮಿ.ಮೀ. ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ.41ರಷ್ಟು ಹೆಚ್ಚು ಮಳೆಯಾಗಿದೆ. ಅದೇ ರೀತಿ ಜೂ.2ರಂದು ಅಧಿಕೃತವಾಗಿ ಮುಂಗಾರು ರಾಜ್ಯ ಪ್ರವೇಶಿಸಿದ್ದು ಇದುವರೆಗೆ ರಾಜ್ಯದ ಸಂಪೂರ್ಣ ಭಾಗಗಳಿಗೆ ವಿಸ್ತರಿಸಿದೆ. 10 ದಿನಗಳ ಅವಧಿಯಲ್ಲಿ ವಾಡಿಕೆ ಪ್ರಕಾರ 51 ಮಿ.ಮೀ. ಮಳೆ ಆಗಬೇಕಿತ್ತು. ಈಗಾಗಲೇ 91 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.78ರಷ್ಟು ಹೆಚ್ಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬರೀ 8 ಮಿ.ಮೀ. ಆಗಿತ್ತು. ಅಂದರೆ ಶೇ.-72 ಮಳೆ ಕೊರತೆಯಾಗಿತ್ತು ಎಂದರು.

ಈ ಬಾರಿ ಎಲ್ಲ ಭಾಗಗಳಲ್ಲೂ ಮಳೆಯಾಗುತ್ತಿದೆ. ಐದು ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆ, ನಾಲ್ಕು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ, 22 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆಯಾಗಿದೆ. ಈ ಹಿನ್ನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಬರುವ 15 ದಿನಗಳಲ್ಲಿ ಇನ್ನೂ ಗಣನೀಯವಾಗಿ ಕಡಿಮೆಯಾಗಲಿದೆ ಎಂದರು.ಇಂದು 18 ಜಿಲ್ಲೆಗಳಲ್ಲಿ ಭಾರಿ ಮಳೆ ಸಂಭವ, ಯೆಲ್ಲೋ, ಆರೆಂಜ್‌ ಅಲರ್ಟ್‌

ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಎಲ್ಲಾ ಜಿಲ್ಲೆ ಸೇರಿದಂತೆ ಒಟ್ಟು 18 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಮತ್ತು ಆರೆಂಜ್‌ ಅಲರ್ಟ್‌ ಅನ್ನು ಹವಾಮಾನ ಇಲಾಖೆ ನೀಡಿದೆ.

ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ 11 ರಿಂದ 20 ಸೆಂ.ಮೀ. ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್‌ ಅಲರ್ಟ್‌ ನೀಡಲಾಗಿದೆ.ಇನ್ನು ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ದಾವಣಗೆರೆ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ 6 ರಿಂದ 11 ಸೆಂ.ಮೀ. ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ ಕೊಡಲಾಗಿದೆ.

---------ಮೀನುಗಾರರಿಗೆ ಎಚ್ಚರಿಕೆ:

ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಾರುತಗಳು ಪ್ರಬಲವಾಗಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಗಾಳಿಯು ಗಂಟೆಗೆ 35ರಿಂದ 65 ಕಿ.ಮೀ.ವರೆಗೆ ಬೀಸುತ್ತಿರುವುದರಿಂದ ರಾಜ್ಯದ ಕರಾವಳಿ ಭಾಗದ ಮೂರು ಜಿಲ್ಲೆಗಳ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ, ಕಾರವಾರ ಮತ್ತು ಸಿಂದಗಿಯಲ್ಲಿ ಅತಿ ಹೆಚ್ಚು ತಲಾ 12 ಸೆಂ.ಮೀ. ಮಳೆಯಾಗಿದೆ. ಅಂಕೋಲಾ, ದೇವರಹಿಪ್ಪರಗಿ ತಲಾ 10, ಮಂಗಳೂರು 9, ಆಗುಂಬೆ ಹಾಗೂ ಕೋಟಾದಲ್ಲಿ ತಲಾ 8, ಕುಂದಾಪುರ, ಉಡುಪಿ, ಕದ್ರಾ ಸಿದ್ದಾಪುರ ಹಾಗೂ ಪಣಂಬೂರಿನಲ್ಲಿ ತಲಾ 7 ಸೆಂ.ಮೀ. ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.