ಕನ್ನಡಪ್ರಭ ವಾರ್ತೆ ಮೂಡಲಗಿ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಹೊರಬರುವ ಕಬ್ಬಿನ ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಜಿಲ್ಲೆಯಲ್ಲೇ ಸುಮಾರು 783.55 ಮೆಗಾವ್ಯಾಟ್ ಜೈವಿಕ ವಿದ್ಯುತ್ ಉತ್ಪಾದಿಸುವ ಅವಕಾಶವಿದೆ ಎಂದು ಕೇಂದ್ರ ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೂಡಲಗಿ
ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಹೊರಬರುವ ಕಬ್ಬಿನ ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಜಿಲ್ಲೆಯಲ್ಲೇ ಸುಮಾರು 783.55 ಮೆಗಾವ್ಯಾಟ್ ಜೈವಿಕ ವಿದ್ಯುತ್ ಉತ್ಪಾದಿಸುವ ಅವಕಾಶವಿದೆ ಎಂದು ಕೇಂದ್ರ ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ತ್ಯಾಜ್ಯದಿಂದ (ಸಿಪ್ಪೆ/ಬಗಾಸ್, ಪ್ರೆಸ್ ಮಡ್) ಜೈವಿಕ ಇಂಧನ ಉತ್ಪಾದನೆಯ ಸಾಮರ್ಥ್ಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲೆಯ ಒಟ್ಟು 29 ಸಕ್ಕರೆ ಕಾರ್ಖಾನೆಗಳ ಕಬ್ಬಿನ ಸಿಪ್ಪೆಯಿಂದ (ಬಗಾಸ್) ವಿದ್ಯುತ್ ಮತ್ತು ಕಬ್ಬಿನ ಗಸಿಯಿಂದ (ಪ್ರೆಸ್ ಮಡ್) ಅನ್ನು ಸುಡುವ ಬದಲಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಿದ್ಯುತ್ ಮತ್ತು ಬಯೋಗ್ಯಾಸ್ ಆಗಿ ಪರಿವರ್ತಿಸಬಹುದು. ಜಿಲ್ಲೆಯಲ್ಲಿ ದಿನಕ್ಕೆ 2,05,200 ಟನ್ ಕಬ್ಬು ಅರೆಯುವ ಸಾಮರ್ಥ್ಯವಿದ್ದು, 5.74 ಲಕ್ಷ ಕ್ಯೂಬಿಕ್ ಮೀಟರ್ ಬಯೋಗ್ಯಾಸ್ ಉತ್ಪಾದಿಸಬಹುದಾಗಿದೆ ಎಂದಿದ್ದಾರೆ.ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡಲ್) ಮಾಹಿತಿಯಂತೆ, ಜಿಲ್ಲೆಯಲ್ಲಿ ಪ್ರಸ್ತುತ 24 ಜೈವಿಕ ಇಂಧನ ವಿದ್ಯುತ್ ಯೋಜನೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಗೋಬರ್ಧನ್’ ಯೋಜನೆಯಡಿ ಕರ್ನಾಟಕದಲ್ಲಿ ಒಟ್ಟು 20 ಸಂಕುಚಿತ ಜೈವಿಕ ಅನಿಲ ಘಟಕಗಳು ಸ್ಥಾಪನೆಯಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಒಂದು ಘಟಕ ಯಶಸ್ವಿಯಾಗಿ ಕಾರ್ಯಾರಂಭ ಮಾಡಿದೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮ ಮತ್ತು ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ತ್ಯಾಜ್ಯದಿಂದ ಇಂಧನ ತಯಾರಿಸುವ ಘಟಕಗಳಿಗೆ ಆರ್ಥಿಕ ನೆರವು ಮತ್ತು ತಾಂತ್ರಿಕ ಬೆಂಬಲವನ್ನು ನೀಡುತ್ತಿದೆ. ಈ ಮೂಲಕ ಸಕ್ಕರೆ ಕಾರ್ಖಾನೆಗಳ ತ್ಯಾಜ್ಯವನ್ನು ಪರಿಸರ ಸ್ನೇಹಿ ಇಂಧನವಾಗಿ ಪರಿವರ್ತಿಸಿ ಉದ್ದಿಮೆಗಳಿಗೆ ಮತ್ತು ರೈತರಿಗೆ ಉಪ-ಉತ್ಪನ್ನಗಳ ಮೂಲಕ ಹೆಚ್ಚಿನ ಆರ್ಥಿಕ ಲಾಭ ತಂದುಕೊಡುವ ಗುರಿ ಹೊಂದಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾಗಿ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.