ರಾಯಚೂರಲ್ಲಿ 78ನೇ ಕಲ್ಯಾಣ ಕರ್ನಾಟಕ ಉತ್ಸವ

| Published : Sep 18 2025, 01:10 AM IST

ಸಾರಾಂಶ

ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಾಂತಿ-ಸೌಹಾರ್ದತೆಯನ್ನು ಕಾಪಾಡಿಕೊಂಡು ಸರ್ವಾಂಗೀಣ ಏಳ್ಗೆಗಾಗಿ ಎಲ್ಲರೂ ಕಂಕಣ ಬದ್ಧರಾಗಿ ಶ್ರಮಿಸೋಣ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನುಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಾಂತಿ-ಸೌಹಾರ್ದತೆಯನ್ನು ಕಾಪಾಡಿಕೊಂಡು ಸರ್ವಾಂಗೀಣ ಏಳ್ಗೆಗಾಗಿ ಎಲ್ಲರೂ ಕಂಕಣ ಬದ್ಧರಾಗಿ ಶ್ರಮಿಸೋಣ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನುಡಿದರು.

ಸ್ಥಳೀಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 78 ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ಬುಧವಾರ ಮಾತನಾಡಿದ ಅವರು, ಸಂವಿಧಾನದ 371(ಜೆ) ಸ್ಥಾನಮಾನ ಸಿಕ್ಕ ಬಳಿಕ ಈ ಭಾಗದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲು ದೊರೆಯಲು ಸಾಧ್ಯವಾಗಿದ್ದು, ವೃತ್ತಿಪರ ಕೋರ್ಸ್‌ಗಳಲ್ಲಿ ಮೀಸಲು ದೊರೆತು 9 ಸಾವಿರ ಮಕ್ಕಳು ಡಾಕ್ಟರ್, 25 ಸಾವಿರ ಎಂಜಿನಿಯರ್ ಆಗಲು ಸಾಧ್ಯವಾಗಿದೆ. ಕಳೆದ 10 ವರ್ಷದಲ್ಲಿ 80 ಸಾವಿರ ಸರ್ಕಾರಿ ನೌಕರಿಗಿಟ್ಟಿಸಲಾಗಿದೆ. ಈ ಭಾಗಕ್ಕೆ 18,000 ಕೋಟಿ ರು. ಮಂಜೂರಾಗಿ 371 ಜೆ ಕಾನೂನಿನಿಂದ ಪ್ರತಿ ಮಗುವಿಗು ಸಹಾಯವಾಗಿದ್ದು, ಈ ಭಾಗದ ಜನರಿಗೆ ಕಾಯಕಲ್ಪ, ಕಾಮಧೇನುವಾಗಿ ಶ್ರೀರಕ್ಷೆಯಾಗಿದೆ. ಸಂವಿಧಾನ ಇರುವವರೆಗೆ 371(ಜೆ) ಕಾಯಿದೆ ಇರಲಿದೆ ಎಂದು ತಿಳಿಸಿದರು.

ಅಖಂಡ ಭಾರತ ನಿರ್ಮಾಣದ ಪ್ರಯತ್ನ, ಹೋರಾಟಗಾಥೆ ಸಾಮಾನ್ಯವಾದ ಸಂಗತಿಯಲ್ಲ. ಅಹಿಂಸಾ ಮಾರ್ಗದಲ್ಲಿ ಪ್ರೀತಿಯಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿ ಸಿದ್ದು, ಇಡೀ ಜಗತ್ತಿಗೆ ಮಾದರಿಯಾಗಿದೆ. ಸಂವಿಧಾನದ ಭದ್ರಬುನಾದಿಯ ಮೇಲೆ ದೇಶ ನಡೆಯುತ್ತಿದೆ. ಸಾಮಾಜಿಕ ಕಳಕಳಿ ಹೊಂದಿದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರಂತಹ ಮಹನೀಯರ ಸತತ ಪ್ರಯತ್ನದಿಂದ 2012ರಲ್ಲಿ ಸಂಸತ್ತನಲ್ಲಿ ಪಾಸಾಗಿ 371(ಜೆ) ಕಾಯಿದೆಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭವಾಯಿತು ಎಂದರು.

ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ರಾಜ್ಯ ಸರ್ಕಾರವು ಬದ್ಧವಾಗಿದೆ. ರಾಯಚೂರ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಭಿವೃದ್ಧಿಯ ವಿಷಯದಲ್ಲಿ ಪಕ್ಷಬೇಧ ಮರೆತು ಎಲ್ಲರೂ ಸೇರಿ ಕಾರ್ಯ ಪ್ರವೃತ್ತರಾಗಬೇಕಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ದಕ್ಷತೆಯಿಂದ ಕೆಲಸ ಮಾಡಬೇಕು. ರಾಯಚೂರ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಎಲ್ಲರೂ ಕಂಕಣಬದ್ಧರಾಗಿ ದುಡಿಯೋಣ ಎಂದು ಸಚಿವರು ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಮಹರ್ಷಿ ವಾಲ್ಮೀಕಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ ಬಯ್ಯಾಪುರ, ಎ.ವಸಂತಕುಮಾರ, ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಡಿಸಿ ನಿತೀಶ್ ಕೆ., ಜಿಪಂ ಸಿಇಒ ಈಶ್ವರ್ ಕಾಂದೂ, ಎಸ್ಪಿ ಪುಟ್ಟಮಾದಯ್ಯ ಎಂ, ಆಯುಕ್ತ ಜುಬಿನ್ ಮೊಹಪಾತ್ರ,ತಹಸೀಲ್ದಾರ ಸುರೇಶ ವರ್ಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ಗಣ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.