ಸಾರಾಂಶ
ಬೆಂಗಳೂರು : ರಾಜ್ಯಾದ್ಯಂತ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು. ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥ ಸಂಚಲನ ವೀಕ್ಷಿಸಿದರು. ಇದೇ ವೇಳೆ, ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಕಲಬುರಗಿಯಲ್ಲಿ ಡಾ.ಶರಣಬಸಪ್ಪ ಅಪ್ಪಾ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಧ್ವಜಾರೋಹಣದ ಬಳಿಕ ನಡೆಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಮಧ್ಯೆ, ವಜಾ ಬಳಿಕ ಇದೇ ಮೊದಲ ಬಾರಿಗೆ ಮಧುಗಿರಿಗೆ ಆಗಮಿಸಿದ್ದ ಕೆ.ಎನ್.ರಾಜಣ್ಣ, ಮಧುಗಿರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಮಧ್ಯೆ, ತುಮಕೂರು ಜಿಲ್ಲಾಡಳಿತದಿಂದ ವಿತರಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ಕೆ.ಎನ್.ರಾಜಣ್ಣ, ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ಎಂದು ಪ್ರಿಂಟ್ ಆಗಿದ್ದು, ಮುಜುಗರಕ್ಕೆ ಈಡಾಗುವಂತಾಯಿತು.
ಬಳ್ಳಾರಿಯಲ್ಲಿ ಸಚಿವ ರಹೀಂ ಖಾನ್ ಅವರು ಮೋತಿ ವೃತ್ತದಲ್ಲಿರುವ 150 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಧ್ವಜಾರೋಹಣ ನೆರವೇರಿಸಿದ್ದು ವಿಶೇಷವಾಗಿತ್ತು. ಗದಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಬಳಿಕ, ತಮ್ಮ ಯಕೃತ್, ಹೃದಯ, ಮೂತ್ರಪಿಂಡ, ಶ್ವಾಸಕೋಶ ಸೇರಿದಂತೆ ದೇಹದ ಅಂಗಾಂಗಗಳ ದಾನ ಮಾಡಲು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದರು.
ಈ ವೇಳೆ, ಅವರ 1,440 ಅಭಿಮಾನಿಗಳು ಕೂಡ ಅಂಗಾಂಗ ದಾನಪತ್ರಕ್ಕೆ ಸಹಿ ಹಾಕಿದರು.ಮಂಡ್ಯದಲ್ಲಿ ಆಸ್ಪತ್ರೆ ರಸ್ತೆಯಲ್ಲಿರುವ ನಿರಾಳ ಕ್ಲಿನಿಕ್ ಎದುರು ಗ್ರೂಪ್‌ನ ಅಧ್ಯಕ್ಷ ಡಾ.ಅನಿಲ್ ಆನಂದ್ ಧ್ವಜಾರೋಹಣ ನೆರವೇರಿಸಿದರು. ಬಳಿಕ, ತ್ರಿವರ್ಣಗಳಿಂದ ಕೂಡಿದ ಪೇಪರ್ ಬಾಂಬ್‌ಗಳನ್ನು ಸಿಡಿಸುವುದರೊಂದಿಗೆ ತಿರಂಗ ಯಾತ್ರೆಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಮಂಡ್ಯ ಯೂತ್ ಗ್ರೂಪ್ ವತಿಯಿಂದ ನಡೆದ ಒಂದು ಸಾವಿರ ಅಡಿ ಉದ್ದದ ತಿರಂಗ ಪ್ರದರ್ಶನ ನೋಡುಗರ ಮನಸೂರೆಗೊಂಡಿತು.
ಆನೆಯಿಂದ ಧ್ವಜವಂದನೆ:
ಮಂಗಳೂರು ಸಮೀಪದ ಕಟೀಲಿನಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ರಥಬೀದಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಈ ವೇಳೆ, ಕಟೀಲು ದೇವಳದ ಆನೆ, ಮಹಾಲಕ್ಷ್ಮೀ ಧ್ವಜವಂದನೆ ನಡೆಸಿ ಎಲ್ಲರ ಗಮನ ಸೆಳೆಯಿತು.
ದೇವರುಗಳಿಗೆ ‘ತ್ರಿವರ್ಣ ಧ್ವಜ’ ಅಲಂಕಾರ:
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಜ್ಯದ ಹಲವೆಡೆ ದೇವಾಲಯಗಳಲ್ಲಿ ದೇವರಿಗೆ ತ್ರಿವರ್ಣ ಧ್ವಜದ ಅಲಂಕಾರ ಮಾಡಲಾಗಿತ್ತು. ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿಗೆ ತ್ರಿವರ್ಣ ಬಣ್ಣದ ಹೂವಿನಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಹೂವುಗಳ ಅಲಂಕಾರದಿಂದ ದೇವಿ ಕಂಗೊಳಿಸಿದಳು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ತ್ರಿವರ್ಣ ಧ್ವಜದ ಸೀರೆ ಉಡಿಸಲಾಗಿದ್ದು, ತ್ರಿವರ್ಣ ಧ್ವಜದ ಹೂಮಾಲೆಯನ್ನು ತೊಡಿಸಲಾಗಿತ್ತು. ಮಂಗಳೂರಿನ ಅಧಿದೇವತೆ ಮಂಗಳಾದೇವಿಗೆ ತಿರಂಗದ ಸೀರೆಯನ್ನೇ ಉಡಿಸಲಾಗಿದ್ದು, ತ್ರಿವರ್ಣ ಧ್ವಜದ ಹೂಗಳಿಂದ ಅಲಂಕಾರ ಮಾಡಲಾಗಿದೆ. ಬಪ್ಪನಾಡಿನ ದುರ್ಗೆಯೂ ತಿರಂಗದ ಅಲಂಕಾರದಲ್ಲಿ ಕಂಗೊಳಿಸಿದ್ದಾಳೆ.
ಅಮಾನಿಕೆರೆಯಲ್ಲಿ ಸಂವಿಧಾನ ಪೀಠಿಕೆ ಶಿಲಾಫಲಕ ಆನಾವರಣ:ತುಮಕೂರಿನಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಆಗಸ್ಟ್ 2026ರ ಅಂತ್ಯದ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು. ಬಳಿಕ, ನಗರದ ಅಮಾನಿಕೆರೆ ಉದ್ಯಾನವನದ ದ್ವಾರ ಬಾಗಿಲಿನ ಬಳಿ ನಿರ್ಮಿಸಿರುವ ಭಾರತ ಸಂವಿಧಾನ ಪೀಠಿಕೆಯ ಶಿಲಾಫಲಕವನ್ನು ಅನಾವರಣಗೊಳಿಸಿದರು. 10 ಅಡಿ ಎತ್ತರ x 15 ಅಡಿ ಅಗಲದಲ್ಲಿ ಈ ಶಿಲಾಫಲಕವನ್ನು ನಿರ್ಮಿಸಲಾಗಿದೆ.- ಬಾಕ್ಸ್-
ಪರೇಡ್ ವೇಳೆ ಅಸ್ವಸ್ಥರಾಗಿ
ಕುಸಿದ ಬಿದ್ದ ಮಕ್ಕಳುಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಪಥಸಂಚಲನದಲ್ಲಿ ಭಾಗಿಯಾಗಿದ್ದ ಮಕ್ಕಳ ಪೈಕಿ ಮೂವರು ಮಕ್ಕಳು ಅಸ್ವಸ್ಥರಾಗಿ ದಿಢೀರ್ ಕುಸಿದು ಬಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.