ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಮ್ಮ ಮಣ್ಣಿನ ಸಾಹಿತ್ಯ, ಸಂಸ್ಕೃತಿ, ಉದಾತ್ತತೆಯನ್ನು ಯುವಜನರಿಗೆ ತಲುಪಿಸುವ ಉದ್ದೇಶವನ್ನು 2025ರ ಜನವರಿ 11 ಮತ್ತು 12 ರಂದು ನಡೆಯಲಿರುವ ಮಂಗಳೂರು ಲಿಟ್ ಫೆಸ್ಟ್ ಹೊಂದಿದೆ ಎಂದು ಭಾರತ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಹೇಳಿದರು.ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾರತ್ ಫೌಂಡೇಶನ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ಸಹಯೋಗದಲ್ಲಿ ಮಂಗಳೂರು ಲಿಟ್ ಫೆಸ್ಟ್ ಪ್ರಯುಕ್ತ ನಡೆದ ಅಂತರ್ ಕಾಲೇಜು ರಸಪ್ರಶ್ನೆ ಮತ್ತು ಪುಸ್ತಕ ವಿಮರ್ಶಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಲಿಟ್ ಫೆಸ್ಟ್ ಭಾರತೀಯ ಸಾಹಿತ್ಯ, ಸಂಸ್ಕೃತಿಯನ್ನು ತೆರೆದಿಡುವ ವೇದಿಕೆ. ಇದು ದೇಶ-ವಿದೇಶಗಳ ಸಂಪನ್ಮೂಲ ವ್ಯಕ್ತಿಗಳ ಭಾಷಣ ಕೇಳುವ, ಅವರೊಂದಿಗೆ ಮುಖಾಮುಖಿ ಸಂವಾದ ನಡೆಸುವ ವೇದಿಕೆ. ಇದೊಂದು ಕಾರ್ಯಕ್ರಮವಲ್ಲ, ಬದಲಾಗಿ ಒಂದು ವೇದಿಕೆ ಎಂದರು.‘ಯುವಜನರಲ್ಲಿ ಸಾಹಿತ್ಯದ ಒಲವು’ ಕುರಿತು ಮಾತನಾಡಿದ ವಿದ್ವಾನ್ ಡಾ. ರಾಘವೇಂದ್ರ ರಾವ್, ಅನ್ನದಷ್ಟೇ ಅಕ್ಷರವೂ ಜೀವನದಲ್ಲಿ ಮುಖ್ಯ. ಮಾನವೀಯ ಮೌಲ್ಯವನ್ನು ಜಗತ್ತಿಗೆ ತೋರಿಸಿದ್ದೇ ಸಾಹಿತ್ಯ ಎಂದರು.
ವಿವೃತ್ತ ಪ್ರಾಧ್ಯಾಪಕ ವಿ.ಬಿ. ಕುಳಮರ್ವ ಮಾತನಾಡಿ, ಮನುಷ್ಯನ ಸರ್ವಶ್ರೇಷ್ಠ ಸಂಶೋಧನೆ ಅಂತರಂಗವನ್ನು ಹೋಗಲಾಡಿಸುವ ಭಾಷೆ. ನಮ್ಮ ಭಾಷಾವೈವಿಧ್ಯವನ್ನು ಉಳಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ. ಗಣಪತಿ ಗೌಡ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಜೊತೆಗೆ, ವಿಮರ್ಶೆಯ ಪ್ರಯತ್ನ ನಡೆಸುತ್ತಿರುವುದಕ್ಕೆ ಮಂಗಳೂರು ಲಿಟ್ ಫೆಸ್ಟ್ ತಂಡವನ್ನು ಅಭಿನಂದಿಸಿದರು. ವಿಶ್ವಕ್ಕೆ
ತಿಳಿಯುವ ಮೊದಲೇ ಅದ್ಭುತ ಸಾಹಿತ್ಯವನ್ನು ನೀಡಿದ್ದು ಭಾರತ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳುಸಾಹಿತ್ಯದಿಂದ ದೂರವಾಗುತ್ತಿರುವುದು ಕಳವಳಕಾರಿ ಎಂದರು.
ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಇದ್ದರು. ಲತೇಶ್ ಕಾಂತ ನಿರೂಪಿಸಿದರು. ಕಾಜಲ್ ವಂದಿಸಿದರು. ಪುತ್ತೂರಿನ ವಿದುಷಿ ಅನಸೂಯ ಪಾಠಕ್, ಮತ್ತವರ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು.ಸ್ಪರ್ಧಾ ಫಲಿತಾಂಶ:ಒಟ್ಟು 21 ತಂಡಗಳು ಪುಸ್ತಕ ವಿಮರ್ಶೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ವಿವೇಕಾನಂದ ಬಿ.ಎಡ್ ಕಾಲೇಜಿನ ಅಕ್ಷಯ ನವೀನ ಎನ್ ಪ್ರಥಮ, ವಿವೇಕಾನಂದ ಕಾನೂನು ಕಾಲೇಜಿನ ಪ್ರಿಯಾ ಎಸ್ ದ್ವಿತೀಯ, ಹಾಗೂ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ತಂಡ ತೃತೀಯ ಸ್ಥಾನ ಪಡೆದಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ 24 ತಂಡಗಳು ಭಾಗವಹಿಸಿದ್ದು, ನವೆಂಬರ್ 22 ರಂದು ಫಲಿತಾಂಶ ಪ್ರಕಟಿಸಲಾಗುವುದು. ರಸಪ್ರಶ್ನೆಯಲ್ಲಿ ಆಯ್ಕೆಯಾದ 6 ತಂಡಗಳು ಮಂಗಳೂರು ಲಿಟ್ ಫೆಸ್ಟ್ ವೇದಿಕೆಯಲ್ಲಿ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.