ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಪಿಎಲ್‌ಡಿ ಬ್ಯಾಂಕ್‌ನಲ್ಲಿ ಸಾಲ ಪಡೆದುಕೊಂಡು ಸುಸ್ತಿದಾರರಾಗಿರುವ ರೈತರು ಸಾಲದ ಹಣವನ್ನು ಕಟ್ಟಿದರೆ ಬಡ್ಡಿ ಎಷ್ಟಿದ್ದರೂ ಮನ್ನಾ ಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಾಥಮಿಕ ಸಹಕಾರ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್ ಮನವಿ ಮಾಡಿದರು.
ಬಡ್ಡಿ ಮನ್ನಾ ಕುರಿತಂತೆ ಜ.೨೦ರಂದು ಸರ್ಕಾರ ಆದೇಶ ಹೊರಡಿಸಿದೆ. ಸುಸ್ತಿದಾರ ರೈತರು ಫೆ.೨೯ರೊಳಗೆ ಸಾಲದ ಹಣವನ್ನು ಪಾವತಿ ಮಾಡಬೇಕು. ಮಂಡ್ಯ ಪಿಕಾರ್ಡ್ (ಪಿಎಲ್‌ಡಿ) ಬ್ಯಾಂಕ್‌ನಲ್ಲಿ ಒಟ್ಟು ೨೮೦೦ ಸುಸ್ತಿದಾರರಿದ್ದಾರೆ, ಒಟ್ಟು ೮.೪೨ ಕೋಟಿ ರು. ಬಾಕಿ ಬರಬೇಕಾಗಿದ್ದು, ರೈತರು ೪.೨೦ ಕೋಟಿ ರು. ಅಸಲು ಮರು ಪಾವತಿಸಿದರೆ, ಬ್ಯಾಂಕಿಗೆ ಸರ್ಕಾರ ಬಡ್ಡಿ ಮನ್ನಾ ರೂಪದಲ್ಲಿ ೪.೨೨ ಕೋಟಿ ರು.ನೀಡಲಿದೆ. ಹಾಗಾಗಿ ಫೆ.೨೯ರೊಳಗೆ ಸುಸ್ತಿದಾರರು ಅಸಲು ಪಾವತಿಸಿ ಬಡ್ಡಿ ಮನ್ನಾ ಯೋಜನೆ ಸೌಲಭ್ಯ ಪಡೆಯುವಂತೆ ತಿಳಿಸಿದರು.ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲ ತೆಗೆದುಕೊಂಡಿರುವ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಂಡ್ಯ, ನಾಗಮಂಗಲ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ಸೇರಿದಂತೆ ಒಟ್ಟು ೨೮೦೦ ರೈತರಿಗೆ ಅನುಕೂಲವಾಗಲಿದೆ ಎಂದರು.
ಇಡೀ ರಾಜ್ಯದ ೧೩೭ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರು ಕಳೆದ ಸೆಪ್ಟಂಬರ್‌ನಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿ ಬ್ಯಾಂಕ್‌ಗಳಲ್ಲಿ ಕೆಲವೇ ಕೆಲವು ಪಿಕಾರ್ಡ್ ಬ್ಯಾಂಕ್‌ಗಳು ಸುಸ್ತಿಯಲ್ಲಿದ್ದು, ಇನ್ನುಳಿದಂತೆ ೧೩೦ಕ್ಕೂ ಹೆಚ್ಚು ಚಿಂತಾಜನಕ ಸ್ಥಿತಿಯಲ್ಲಿವೆ, ಕಾರಣ, ರೈತರು ಹಳೇ ಸಾಲವನ್ನು ತೆಗೆದುಕೊಂಡು ತುಂಬಾ ವರ್ಷಗಳಿಂದಲೂ ಪಾವತಿ ಮಾಡಿಲ್ಲ. ಅಸಲಿಗಿಂತಲೂ ಬಡ್ಡಿ ಹಣವೇ ಹೆಚ್ಚಾಗಿದೆ. ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೂ ಬಡ್ಡಿಯನ್ನಾದರೂ ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದೆವು ಎಂದರು.ನಮ್ಮೆಲ್ಲರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಿಎಲ್‌ಡಿ ಬ್ಯಾಂಕ್ ಸೇರಿದಂತೆ ಡಿಸಿಸಿ, ಅಫೆಕ್ಸ್, ಸಹಕಾರಿ ಬ್ಯಾಂಕ್ ಸೇರಿದಂತೆ ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲದ ಬಡ್ಡಿ ಮನ್ನಾ ಮಾಡಲು ಸರ್ಕಾರ ಮುಂದಾಗಿದೆ. ಅದರಂತೆ ನಮ್ಮ ಜಿಲ್ಲೆಯ ಬಡ್ಡಿ ಮನ್ನಾದ ಯೋಜನೆಯ ಸುಸ್ತಿದಾರರು ಈ ಯೋಜನೆಯ ಅನುಕೂಲ ಪಡೆದುಕೊಳ್ಳಬೇಕು ಎಂದರು.
ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಅರವಿಂದ್, ನಿರ್ದೇಶಕರಾದ ಬಿಳಿದೇಗಲು ಬೋರೇಗೌಡ, ಹೊಸಹಳ್ಳಿ ಶಿವಲಿಂಗೇಗೌಡ, ತಗ್ಗಹಳ್ಳಿ ಶಿವಲಿಂಗೇಗೌಡ, ಸುನಂದಮ್ಮ, ನಂಜುಂಡ ಶಿವಾರ, ಯೋಗೇಶ್ ಗೋಷ್ಠಿಯಲ್ಲಿದ್ದರು.