ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ಮೇಲಿನಜೂಗಾನಹಳ್ಳಿ(ಎಸ್ಎಸ್ ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಜೂರು ಗ್ರಾಮದಲ್ಲಿ ಒತ್ತುವರಿಯಾಗಿತ್ತು ಎನ್ನಲಾದ 8 ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದ್ದು, ಆಶ್ರಯ ಯೋಜನೆಗಾಗಿ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂದು ವಕೀಲ ಪ್ರತಾಪ್ ಹೇಳಿದರು.
ಗುಂಜೂರು ಗ್ರಾಮದಲ್ಲಿ ಆಶ್ರಯ ಯೋಜನೆಗೆ ಜಮೀನು ಮಂಜೂರಾದ ಹಿನ್ನಲೆ ಮಾಕಳಿದುರ್ಗ ರೈಲು ನಿಲ್ದಾಣದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವೇ ನಂ.33ರಲ್ಲಿ ಒಟ್ಟು 120 ಎಕರೆ ಗೋಮಾಳ ಜಮೀನು ಇದೆ. ಅದರಲ್ಲಿ ಕೆಲವರಿಗೆ ಸರ್ಕಾರದಿಂದ ಮಂಜೂರಾಗಿದೆ. ಉಳಿದ ಭೂಮಿಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಬಳಿಸುವ ಹುನ್ನಾರ ನಡೆಸಿದ್ದರು. ಎಲ್ಲೂ ಒಂದು ಅಡಿ ಜಾಗ ನಿರಾಶ್ರಿತರಿಗಾಗಿ ಮೀಸಲಿರಲಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಊರಲ್ಲಿ ಬಿಟ್ಟರೆ ಬೇರೆ ಯಾವ ಊರಲ್ಲೂ ಸಹ ಸ್ಮಶಾನಕ್ಕೂ ಕೂಡ ಜಾಗ ಮೀಸಲಿಡಲಿಲ್ಲ. ಈ ಹಿನ್ನೆಲೆ 2022-23ನೇ ಸಾಲಿನಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಕಬಳಿಕೆಯಾಗಿದ್ದ ಭೂಮಿಯನ್ನು ಪತ್ತೆ ಮಾಡಿ, ನಡೆಸಿದ ಹೋರಾಟದ ಫಲವಾಗಿ ಆಶ್ರಯ ಯೋಜನೆಗಾಗಿ ಸುಮಾರು 8 ಎಕರೆ ಜಮೀನನ್ನು ಕಾನೂನು ಬದ್ಧವಾಗಿ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂದರು.ಘಾಟಿ ಸುತ್ತಮುತ್ತಾ ಸರ್ಕಾರಿ ಜಮೀನುಗಳನ್ನು ಭೂಗಳ್ಳರು, ಬಲಾಢ್ಯರು ಕಬಳಿಕೆ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಸರ್ಕಾರ ಈ ಕೂಡಲೇ ಪರಿಶೀಲನೆ ಮಾಡಿ, ಸರ್ಕಾರಿ ಜಮೀನುಗಳನ್ನು ಉಳಿಸಿ, ರೈತರು, ನಿರಾಶ್ರಿತರು, ಬಡವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಸದ್ಯ ಗುಂಜೂರು ಗ್ರಾಮದ ಸರ್ವೇ ನಂಬರ್ 33ರಲ್ಲಿ 8 ಎಕರೆ ನಿವೇಶನಕ್ಕಾಗಿ ಮಂಜೂರಾಗಿರುವ ಜಾಗಕ್ಕೆ ಸುಮಾರು 500ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಪಂಚಾಯಿತಿ ವತಿಯಿಂದ ಈ ಎಲ್ಲಾ ಅರ್ಜಿಗಳು ಪರಿಶೀಲನೆ ಆಗುತ್ತವೆ. ನಿಜವಾದ ಫಲಾನುಭವಿಗಳಿಗೆ ನಿವೇಶನ ದೊರಕುವ ನಂಬಿಕೆ ಇದೆ ಎಂದರು.ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ (ಕಿಟ್ಟಿ) ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತ ಹಳ್ಳಿಗಳಿಗೆ ಇದೊಂದು ಸುಸಂದರ್ಭ. ಕೆಲವು ಹಳ್ಳಿಗಳಿಗೆ ಆಶ್ರಯ ಯೋಜನೆಗೆ ಜಮೀನು ಸಿಕ್ಕಿರುವುದು ಒಳ್ಳೆಯ ಸಂಗತಿಯಾಗಿದೆ. ಕೆಲ ಪ್ರಭಾವಿಗಳು ಇಲ್ಲಿನ ಭೂಮಿ ಕಬಳಿಸುತ್ತಿದ್ದು, ನಾವು ಎಚ್ಚೆತ್ತುಕೊಂಡರೆ ಮಾತ್ರ ನಮಗೆ ಜಮೀನು ಸಿಗುತ್ತದೆ. ಇಲ್ಲದಿದ್ದರೆ ಜಮೀನುಗಳು ಸಿಗುವುದಿಲ್ಲ ಎಂದು ಹೇಳಿದರು
ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ಕುಮಾರ್, ಮುನಿಕೃಷ್ಣಪ್ಪ, ತೂಬಗೆರೆ ಹೋಬಳಿ ಬಿಜೆಪಿ ಅಧ್ಯಕ್ಷ ವಾಸುದೇವ್, ಜೆಡಿಎಸ್ ಮುಖಂಡ ಉದಯ ಆರಾಧ್ಯ, ಘಾಟಿ ಸುಬ್ರಹ್ಮಣ್ಯ ದೇವಾಲಯ ಅರ್ಚಕ ನಾಗರಾಜ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.4ಕೆಡಿಬಿಪಿ2-
ಗುಂಜೂರು ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಗೆ ಭೂಮಿ ಮಂಜೂರಾದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಹಲವು ಮುಖಂಡರು ಭಾಗಿಯಾಗಿದ್ದರು.