8 ಎಕರೆ ಬತ್ತ ನಾಶ, ಕೃಷಿ ವಿಜ್ಞಾನಿಗಳ ತಂಡ ಭೇಟಿ

| Published : Jan 21 2024, 01:32 AM IST

ಸಾರಾಂಶ

ಕಂಪ್ಲಿ ಪಟ್ಟಣದ ಗೊಬ್ಬರದ ಅಂಗಡಿಯಲ್ಲಿ ನೀಡಲಾದ ರಾಸಾಯನಿಕ ಬಳಸಿದ ಕಂಪ್ಲಿ ರೈತ ಕೆ. ರಾಮಕೃಷ್ಣ ಅವರ 8 ಎಕರೆ ಬತ್ತದ ಬೆಳೆ ನಾಶವಾಗಿದೆ. ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ.

ಕಂಪ್ಲಿ: ಪಟ್ಟಣದ ಖಾಸಗಿ ಗೊಬ್ಬರದ ಅಂಗಡಿಯೊಂದರಲ್ಲಿ ನೀಡಲಾದ ರಾಸಾಯನಿಕ ಬಳಸಿ 8 ಎಕರೆ ಜಮೀನಿನಲ್ಲಿ ಬೆಳೆದ ಬತ್ತದ ಬೆಳೆ ಹಾಳಾಗಿದ್ದು, ಈ ಕುರಿತು ರೈತರು ನೀಡಿದ ದೂರಿನ ಮೇರೆಗೆ ತಾಲೂಕಿನ ಬೆಳಗೋಡ್ ಹಾಳ್ ಗ್ರಾಮದ ಕೆ. ರಾಮಕೃಷ್ಣ ಎಂಬ ರೈತರ ಜಮೀನಿಗೆ ಶನಿವಾರ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.

ರೈತ ಕೆ. ರಾಮಕೃಷ್ಣ ಮಾತನಾಡಿ, ಕಂಪ್ಲಿಯ ಕೋದಂಡರಾಮ ಎಂಟರ್‌ಪ್ರೈಸಸ್ ಅಂಗಡಿಯಲ್ಲಿ ಬತ್ತ ಬೆಳೆಯಲು ಗೊಬ್ಬರ ಕೇಳಲು ಹೋದಾಗ ಅಂಗಡಿಯವರು 1 ಎಕರೆ ಬತ್ತಕ್ಕೆ 1 ಚೀಲ ಯೂರಿಯಾ, 1 ಚೀಲ ಡಿಎಪಿ ಅಂದರೆ ಎಕರೆಗೆ 2 ಚೀಲದಂತೆ ಒಟ್ಟು 8 ಎಕರೆ ಜಮೀನಿಗೆ 16 ಚೀಲ ಗೊಬ್ಬರವನ್ನು ಸಮ ಪ್ರಮಾಣದಲ್ಲಿ ಬಳಸಲು ಸೂಚಿಸಿದರಲ್ಲದೇ, ಗೊಬ್ಬರದ ಜತೆಗೆ ಗ್ರೊಮೋರ್ ಕಂಪನಿಯ ಸಲ್ಫರ್ ಮ್ಯಾಕ್ಸ್ ಎಂಬ ರಾಸಾಯನಿಕವನ್ನು ಎಕರೆಗೆ 10 ಕೆಜಿಯಂತೆ ಬಳಸಿದರೆ ಬತ್ತ ಇಳುವರಿ ಚೆನ್ನಾಗಿ ಬರುತ್ತದೆ ಎಂದು ಹೇಳಿದರು.

ಅದರಂತೆ ಬತ್ತಕ್ಕೆ ಸಲ್ಫರ್ ಮ್ಯಾಕ್ಸ್ ಎಂಬ ರಾಸಾಯನಿಕವನ್ನು ಬಳಸಿದ್ದೇನೆ. ಇದರಿಂದಾಗಿ ಬತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಅಂಗಡಿಯ ಮಾಲೀಕರಲ್ಲಿ ನಮ್ಮ ಬೆಳೆ ನಾಶವಾಗಿರುವ ಕುರಿತು ಪ್ರಶ್ನಿಸಿದಾಗ, ಇದಕ್ಕೆ ಕಂಪನಿಯವರೇ ಹೊಣೆಯಾಗಿದ್ದಾರೆ. ನಮ್ಮ ಬಳಿ ಇದಕ್ಕೆ ಯಾವುದೇ ಪರಿಹಾರವಿಲ್ಲವೆಂದು ಹೇಳಿದ್ದಾರೆ. ನಮ್ಮ 8 ಎಕರೆ ಬತ್ತದ ಬೆಳೆ ನಾಶವಾಗಲು ಅಂಗಡಿಯ ಮಾಲೀಕರು ಹಾಗೂ ಗ್ರೊಮೋರ್ ಕಂಪನಿಯವರೇ ನೇರ ಹೊಣೆಯಾಗಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು. ಅಂಗಡಿಯ ಮಾಲೀಕರ ಲೈಸೆನ್ಸ್ ರದ್ದುಗೊಳಿಸುವ ಜತೆಗೆ ಕಂಪನಿಯ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ತಳಿ ಅಭಿವೃದ್ಧಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಹಾಂತೇಶ ಶಿವಯೋಗಯ್ಯ, ಕೃಷಿ ಕೀಟಶಾಸ್ತ್ರಜ್ಞ ಡಾ. ಸುಜಯ ಹುರಳಿ, ಸಸ್ಯರೋಗ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಪ್ರಮೇಶ್ ಡಿ., ದಢೇಸೂಗೂರು ಕೃಷಿ ಸಂಶೋಧನಾ ಕೇಂದ್ರದ ಬೇಸಾಯಶಾಸ್ತ್ರಜ್ಞ ಡಾ. ವೈ.ಎಂ. ರಮೇಶ್ ಬತ್ತದ ಬೆಳೆ ಪರಿಶೀಲಿಸಿ ಜಮೀನಿನ ಮಣ್ಣು ಹಾಗೂ ಬತ್ತವನ್ನು ತೆಗೆದುಕೊಂಡು ಪರೀಕ್ಷೆಯ ಬಳಿಕ ಬೆಳೆ ನಾಶದ ನಿಖರ ಮಾಹಿತಿ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಶ್ರೀಧರ್, ಪ್ರಮುಖರಾದ ದೊಡ್ಡಬಸವರಾಜ್, ಲಕ್ಷ್ಮಣ ಇತರ ರೈತರಿದ್ದರು.