ಸ್ನೇಹಿತನ ಕಾರು ಕೊಡದೇ ವಂಚನೆ: ಆರೋಪಿಯಿಂದ 8 ಕಾರುಗಳ ವಶ!

| Published : Nov 08 2023, 01:00 AM IST

ಸಾರಾಂಶ

ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದ ಆರ್‌ಎಂಎಲ್ ನಗರದ ಸೈಯದ್ ಸಾದಿಕ್‌

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹೆಂಡತಿಗೆ ಹುಷಾರಿಲ್ಲ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುತ್ತೇನೆ ಎಂದು ಹೇಳಿ ಸ್ನೇಹಿತನ ಕಾರು ತೆಗೆದುಕೊಂಡು ಹೋಗಿ ಬಳಿಕ ವಾಪಸ್‌ ಕೊಡದೇ ವಂಚಿಸಿದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಆರೋಪಿಯನ್ನು ಬಂಧಿಸಿ, ಒಟ್ಟು 8 ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಕಿರಣಕುಮಾರ್ ಅಲಿಯಾಸ್ ಗುಂಡಾ (35) ಬಂಧಿತ ಆರೋಪಿ. ತನ್ನ ಸ್ನೇಹಿತ, ಶಿವಮೊಗ್ಗದ ಆರ್.ಎಂ.ಎಲ್. ನಗರದ ವಾಸಿ ಸೈಯದ್ ಸಾದಿಕ್‌ನ ಬಳಿ ಹೆಂಡಿತಿಗೆ ಹುಷಾರಿಲ್ಲ ಆಸ್ಪತ್ರೆ ಕರೆದುಕೊಂಡು ಹೋಗಿ ಬರಬೇಕು ಎಂದು ಹೇಳಿ ಸಾದಿಕ್‌ನ ಕಾರು ತೆಗೆದುಕೊಂಡು ಹೋಗಿ ಬಳಿಕ ವಾಪಸ್‌ ಕೊಡದೇ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಈ ಹಿನ್ನೆಲೆ ಸೈಯ್ಯದ್ ಸಾದಿಕ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕಿರಣ್ ಕುಮಾರ್‌ ವಿರುದ್ಧ ದೂರು ದಾಖಲಿಸಿದ್ದರು.

ಆರೋಪಿ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಬಿ.ಬಾಲರಾಜ್‌ ಮೇಲ್ವಿಚಾರಣೆಯಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಅಂಜನ್ ಕುಮಾರ್, ನೇತೃತ್ವದ ಪಿಎಸ್‌ಐ ಮಂಜಮ್ಮ ಹಾಗೂ ಸಿಬ್ಬಂದಿ ಎಚ್.ಸಿ. ಲಚ್ಚಾನಾಯ್ಕ, ಪಾಲಾಕ್ಷನಾಯ್ಕ, ಪಿಸಿ ರಮೇಶ್, ನಿತಿನ್ ಮತ್ತು ಚಂದ್ರನಾಯ್ಕ ಅವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡವು ಆರೋಪಿಯನ್ನು ಬಂಧಿಸಿ ಆತನಿಂದ ಅಂದಾಜು ₹10 ಲಕ್ಷ ಮೌಲ್ಯದ 2 ಟೊಯೋಟಾ ಇನ್ನೋವಾ ಕಾರು, 3 ಸ್ವಿಫ್ಟ್ ಡಿಸೈರ್ ಕಾರು ಮತ್ತು 3 ಮಾರುತಿ ಸುಜುಕಿ ಎರ್ಟಿಗಾ ಕಾರು ಸೇರಿದಂತೆ ಒಟ್ಟು 8 ಕಾರುಗಳನ್ನು ಜಪ್ತಿ ಮಾಡಿದ್ದಾರೆ.

- - -

-7ಎಸ್‌ಎಂಜಿಕೆಪಿ04: ಆರೋಪಿ ಕಿರಣ್‌ ಕುಮಾರ್‌ನನ್ನು ಬಂಧಿಸಿದ ವಶಕ್ಕೆ ಪಡೆದ ಕಾರುಗಳು.