ಸಂಘದ ಆಸ್ತಿಗೂ ೮ ಗುಂಟೆಗೂ ಯಾವುದೇ ಸಂಬಂಧವಿಲ್ಲ

| Published : Feb 09 2024, 01:45 AM IST

ಸಾರಾಂಶ

ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿಯಲ್ಲಿ ಯಾವುದೇ ದುರುಪಯೋಗವಾಗಿಲ್ಲ, ೮ ಗುಂಟೆಗೂ ಸಂಘದ ಆಸ್ತಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಂಘದ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿಯಲ್ಲಿ ಯಾವುದೇ ದುರುಪಯೋಗವಾಗಿಲ್ಲ, ೮ ಗುಂಟೆಗೂ ಸಂಘದ ಆಸ್ತಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಂಘದ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಸ್ಪಷ್ಟಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆವರಣದಲ್ಲಿ ತಾಲೂಕು ಆದಿಕರ್ನಾಟಕ ಸಮುದಾಯದ ಯಜಮಾನರು, ಮುಖಂಡರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಪದಾಧಿಕಾರಿಗಳ ಸಮಕ್ಷಮದಲ್ಲಿ ನಡೆದ ಸ್ಪಷ್ಟೀಕರಣ ಸಭೆಯಲ್ಲಿ ಮಾತನಾಡಿದರು. ಸಂಘದ ಆಸ್ತಿಯನ್ನು ನನ್ನ ತಮ್ಮನ ಮಕ್ಕಳಿಗೆ ಪರಭಾಧೆ ಮಾಡಿಸಿಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದು ಶುದ್ಧ ಸುಳ್ಳು ಸಂಘದ ಆಸ್ತಿಯಲ್ಲಿ ಯಾವುದೇ ತಪ್ಪುಮಾಡಿದ್ದರೆ ನಾನು ಶರಣಾಗಿ ನಿವೃತ್ತಿಯನ್ನು ಹೊಂದುತ್ತೇನೆ. ಈಗಾಗಲೇ ಈ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ವಿಚಾರಣೆ ಮಾಡಲಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಈ ಸಂಘವನ್ನು ರಾಜಕಾರಣದಿಂದ ದೂರವಿಟ್ಟು, ಸಮುದಾಯದ ನಿವೃತ್ತ ಐಎಎಸ್, ಐಪಿಎಸ್ ಮತ್ತು ಇತರ ಅಧಿಕಾರಿಗಳನ್ನು ಸದಸ್ಯರನ್ನಾಗಿ ಮಾಡಿ, ಅವರ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃದ್ದಿಗೊಳಿಸಿ, ಈ ಆವರಣದಲ್ಲಿ ಶೈಕ್ಷಣಿಕ ಕಟ್ಟಡ ಮತ್ತು ತರಬೇತಿ ಕೇಂದ್ರಗಳನ್ನು ತೆರೆಯುವ ಅಭಿಲಾಷೆ ಹೊಂದಲಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.ಸಂಘಕ್ಕೆ ಪ್ರತಿ ಗ್ರಾಮಗಳಲ್ಲೂ ಇಬ್ಬರು ಸದಸ್ಯರನ್ನಾಗಿ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ. ದೊಡ್ಡ ಗ್ರಾಮಗಳಲ್ಲಿ ೪ ರಿಂದ ೬ ಜನರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಗುವುದು. ಖುದ್ದಾಗಿ ಗ್ರಾಮಗಳಿಗೆ ಹೋಗಿ ಸದಸ್ಯರನ್ನಾಗಿ ಮಾಡಿಕೊಳ್ಳುತ್ತೇವೆ. ಆರೋಪ ಮಾಡುವವರು ಸ.ನಂ. ೨೯೫ ಸಿ ರಲ್ಲಿ ಜಾಗ ಎಲ್ಲಿದೆ ಎಂಬುದನ್ನು ಸಾಬೀತುಪಡಿಸಿ ಎಂದರು.

ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ನಮ್ಮ ಸಂಘಕ್ಕೆ ಸೇರಿದ ೫೦ ಎಕರೆ ಜಮೀನಿದ್ದು, ಅದರಲ್ಲಿ ಈಗಾಗಲೇ ಸುಮಾರು ೨೫ ಎಕರೆಯಷ್ಟು ಜಮೀನನ್ನು ನಮ್ಮ ಸಂಘಕ್ಕೆ ಅಳತೆ ಮಾಡಿಸಿಕೊಳ್ಳಲಾಗಿದೆ. ಅಲ್ಲದೇ ಸಂಘ ಇರುವ ಜಾಗವನ್ನು ಪ್ರೆಸಿಡೆಂಟ್ ಹೆಸರಲ್ಲಿ ಖಾತೆ ಮಾಡಿಸಲಾಗಿದೆ ಹೊರತು ಯಾರ ಹೆಸರಲ್ಲೂ ಖಾತೆ ಮಾಡಲಾಗಿಲ್ಲ. ಬೂದಿತಿಟ್ಟು ಗ್ರಾಮದಲ್ಲಿ ೧೮ ಎಕರೆ ಜಮೀನಿದ್ದು, ಅದರ ಸಾಗುವಳಿ ಚೀಟಿ ಕಳೆದುಹೋಗಿದ್ದು, ಅದನ್ನು ನಮ್ಮ ಸಂಘಕ್ಕೆ ಖಾತೆ ಮಾಡಿಸಲು ಎಲ್ಲಾ ರೀತಿಯ ಚಟುವಟಿಕೆಗಳನ್ನು ಮಾಡಲಾಗುತ್ತಿದೆ ನಗರದ ರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ನಮ್ಮ ಸಂಘದ ಹೆಸರಿಗೆ ೧.೪ ಗುಂಟೆ ಜಾಗ ಇದೆ. ಕೂಡ್ಲೂರು ಗ್ರಾಮದಲ್ಲೂ ಸಹ ೧೫ ಎಕರೆ ಜಮೀನಿದ್ದು, ಅದನ್ನು ನಮ್ಮ ಸಂಘದ ಸುಪರ್ದಿಗೆ ಪಡೆದುಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈಗ ಸಂಘಕ್ಕೆ ತಿಂಗಳಿಗೆ ೬೫ ಸಾವಿರಕ್ಕೂ ಹೆಚ್ಚು ಬಾಡಿಗೆ ಬರವಂತೆ ಮಾಡಲಾಗಿದೆ, ಇದರಲ್ಲಿ ಒಂದೂ ಪೈಸೆಯು ದುರುಪಯೋಗವಾಗಿಲ್ಲ, ಮುಂದೆ ಇರುವ ಎಲ್ಲಾ ಕಾನೂನು ತೊಡಕುಗಳನ್ನು ಸರಿಪಡಿಸಿ, ಸಂಘಕ್ಕೆ ಸೇರಿರುವ ೧ ಎಕರೆ ೨೪ ಗುಂಟೆ ಭೂಮಿಯ ದಾಖಲೆಗಳನ್ನು ಸರಿಪಡಿಸಲಾಗುವುದು ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಬಸವಪುರ ನಾಗರಾಜು ಮಾತನಾಡಿ, ಜ್ಯೋತಿಗೌಡನಪುರ ಹಾಗೂ ಬೂದಿತಿಟ್ಟು ಗ್ರಾಮದ ಜಮೀನನ್ನು ನಮ್ಮ ಸಂಘಕ್ಕೆ ಪಡೆದುಕೊಳ್ಳಲು, ಸಮುದಾಯದಿಂದ ಕಂದಾಯ ಸಚಿವ ಕೃಷ್ಣಭೈರೇಗೌಡರ ಬಳಿ ಒಂದು ನಿಯೋಗ ಹೋಗುವಂತೆ ಹೇಳಿದರು. ಸಭೆಯಲ್ಲಿ ಮಾತನಾಡಿದ ಗಡಿಕಟ್ಟೆಮನೆ ಯಜಮಾನರು, ಮುಖಂಡರು ನಮ್ಮ ಸಮುದಾಯಲ್ಲಿ ಒಡಕುವುಂಟಾಗುವುದು ಬೇಡ, ಆರೋಪ ಮಾಡುವರರು ಸಂಘದ ಪದಾಧಿಕಾರಿಗಳು ಒಂದೆಡೆ ಕುಳಿತು ಸಮಸ್ಯೆ ಬಗ್ಗೆ ಚರ್ಚಿಸಿ, ಅವರ ಸಂಶಯವನ್ನು ಹೋಗಲಾಡಿಸಿ, ಅವರನ್ನು ಸೇರಿಸಿಕೊಂಡು ಸಮುದಾಯಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಹೋಗೋಣ ಎಂದರು. ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣೆಗಾಗಿ ಶುಕ್ರವಾರ ಚಂದಕವಾಡಿಯಿಂದ ಚಾಮರಾಜನಗರಕ್ಕೆ ಸಂಘದ ಆವರಣಕ್ಕೆ ಬಂದಾಗ ಅವರಿಗೆ ದಾಖಲೆ ಸಮೇತ ಸ್ಪಷ್ಟಪಡಿಸಿ ಅವರ ಅನುಮಾನವನ್ನು ಬಗೆಹರಿಸೋಣ ಎಂದರು. ಇದಕ್ಕೆ ಸಭೆ ಒಪ್ಪಿಗೆ ನೀಡಿತು.

ಸಭೆಯಲ್ಲಿ ಸಂಘದ ಕಾರ್ಯದರ್ಶಿ ರಾಜ್ ಗೋಪಾಲ್, ಖಜಾಂಚಿ ಸಿ.ಕೆ.ರವಿಕುಮಾರ್, ನಿರ್ದೇಶಕರಾದ ಎಸ್. ಮಹದೇವಯ್ಯ, ಮಲ್ಲಣ್ಣ, ಎಂ.ಎಸ್. ಮಾದಯ್ಯ, ಮೂಡ್ನಾಕೂಡು ಪ್ರಕಾಶ್, ಸಿ.ಕೆ. ರವಿಕುಮಾರ್, ವೆಂಕಟೇಶ, ಕಾಂತರಾಜು, ಎಸ್. ಪುಟ್ಟಸ್ವಾಮಿ, ಪಾರ್ವತಮ್ಮ, ರಂಗಸ್ವಾಮಿ ಸಂಘದ ಜನಾಂಗದ ಕಟ್ಟೆ, ಗಡಿ ಮನೆ ಯಜಮಾನರು, ಮುಖಂಡರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.