8 ಲಕ್ಷ ಭಕ್ತ ಸಾಗರದ ಮಧ್ಯೆ ಗವಿಸಿದ್ಧೇಶ್ವರ ತೇರು

| Published : Jan 28 2024, 01:17 AM IST

ಸಾರಾಂಶ

ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಇಲ್ಲಿಯ ಗವಿಸಿದ್ಧೇಶ್ವರರ ೨೦೮ನೇ ಮಹಾರಥೋತ್ಸವ ಶನಿವಾರ ಸಂಜೆ ಸುಮಾರು 8 ಲಕ್ಷ ಭಕ್ತರ ಹರ್ಷೋದ್ಗಾರಗಳ ನಡುವೆ ಅದ್ಧೂರಿಯಾಗಿ ನೆರವೇರಿತು. ಸೇರಿದ್ದ ಭಕ್ತಕೋಟಿಯ ಜೈಕಾರ ಮುಗಿಲು ಮುಟ್ಟಿತ್ತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಇಲ್ಲಿಯ ಗವಿಸಿದ್ಧೇಶ್ವರರ ೨೦೮ನೇ ಮಹಾರಥೋತ್ಸವ ಶನಿವಾರ ಸಂಜೆ ಸುಮಾರು 8 ಲಕ್ಷ ಭಕ್ತರ ಹರ್ಷೋದ್ಗಾರಗಳ ನಡುವೆ ಅದ್ಧೂರಿಯಾಗಿ ನೆರವೇರಿತು. ಸೇರಿದ್ದ ಭಕ್ತಕೋಟಿಯ ಜೈಕಾರ ಮುಗಿಲು ಮುಟ್ಟಿತ್ತು.

ಮೈಸೂರಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಸವಪಟ ಆರೋಹಣ ನೆರವೇರಿಸುವ ಮೂಲಕ ಐತಿಹಾಸಿಕ ರಥೋತ್ಸವಕ್ಕೆ ಚಾಲನೆ ನೀಡಿದರು. ಗವಿಸಿದ್ಧೇಶ್ವರ ಶ್ರೀ ಲಕ್ಷಾಂತರ ಭಕ್ತರಿಗೆ ರಥ ಎಳೆಯಲು ಸನ್ನೆ ಮಾಡಿದಾಗ 58 ಅಡಿ ಎತ್ತರದ ತೇರು ಗಜಗಾಂಭೀರ್ಯದಿಂದ ರಥಬೀದಿಯಲ್ಲಿ ಸಾಗಿತು. ಹೀಗೆ ಸಾಗುತ್ತಿದ್ದಂತೆಯೇ ಭಕ್ತಗಣ ಉತ್ತತ್ತಿ ಎಸೆದು ಭಕ್ತಿ ಪ್ರದರ್ಶಿಸಿದರು.

ಡಾ.ಅಭಿನವ ಚೆನ್ನಬಸವ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಹರಗುರುಚರಮೂರ್ತಿಗಳು ಸಾನ್ನಿಧ್ಯ ವಹಿಸಿದ್ದರು.ಇದಕ್ಕೂ ಮೊದಲು ೧೧ನೇ ಪೀಠಾಧಿಪತಿ ಆಗಿದ್ದ ಗವಿಸಿದ್ಧೇಶ್ವರ ಶ್ರೀಗಳ ಕರ್ತೃ ಗದ್ದುಗೆಯಲ್ಲಿ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಯಿತು. ಬಳಿಕ ಗವಿಸಿದ್ಧೇಶ್ವರ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ಮೆರವಣಿಗೆಯಲ್ಲಿ ಕರೆತರಲಾಯಿತು. ಗವಿಸಿದ್ದೇಶ್ವರ ಶ್ರೀ ಸೇರಿ ಹರಗುರು ಚರಮೂರ್ತಿಗಳು ಮುಂದೆ ಸಾಗುತ್ತಿದ್ದಂತೆ ಅವರ ಬೆನ್ನ ಹಿಂದೆ ಉಳಿದ ಶ್ರೀಗಳು ಸಾಗುವ ದೃಶ್ಯ ಶರಣ ಸಂಸ್ಕೃತಿಯ ಪ್ರತೀಕದಂತೆ ಕಾಣುತ್ತಿತ್ತು.

ವಾದ್ಯ ವೃಂದದ ಮೂಲಕ ಮೆರವಣಿಗೆ ಮಾಡುತ್ತಾ ರಥದ ಸುತ್ತ ಐದು ಸುತ್ತು ಪ್ರದಕ್ಷಿಣೆ ಹಾಕಿ, ಮೂರ್ತಿಯನ್ನು ರಥದಲ್ಲಿ ಇರಿಸಲಾಯಿತು. ನಂತರ ಬಸವ ಪಟ ಆರೋಹಣ ನೆರವೇರಿಸುತ್ತಿದ್ದಂತೆ ರಥೋತ್ಸವ ಸಾಂಗವಾಯಿತು. ಭಕ್ತ ಗಣ ಜೈಕಾರ ಹಾಕಿ ಸಂಭ್ರಮಿಸಿದರು. ಬಳಿಕ ಪಾದಗಟ್ಟೆ ತಲುಪಿ ರಥ ವಾಪಸಾಗುತ್ತಿದ್ದಂತೆ ಜಯಕಾರ ಹಾಗೂ ಕರತಾಡನ ಮುಗಿಲು ಮುಟ್ಟಿತ್ತು.

ನೆರೆದಿದ್ದ ಲಕ್ಷಾಂತರ ಭಕ್ತರು ಏಕಧ್ವನಿಯಲ್ಲಿ ಗವಿಸಿದ್ದೇಶ್ವರ ಮಹಾರಾಜಕೀ ಜೈ ಎಂದು ಜಯಕಾರ ಕೂಗಿದರು. ಪಲ್ಲಕ್ಕಿ ಹೊತ್ತ ಡಿಕೆಶಿ: ಗವಿಸಿದ್ಧೇಶ್ವರ ರಥೋತ್ಸವಕ್ಕೂ ಮುನ್ನ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಡಿಸಿಎಂ ಡಿ.ಕೆ.‌ಶಿವಕುಮಾರ್‌ ಅವರು ಪಲ್ಲಕ್ಕಿ ಹೊತ್ತು ಸಾಗಿದ್ದು ವಿಶೇಷವಾಗಿತ್ತು. ಈ ಹಿಂದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೊತ್ತಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಉಪ ಮುಖ್ಯಮಂತ್ರಿಯೊಬ್ಬರು ಗವಿಸಿದ್ಧೇಶ್ವರ ಮೂರ್ತಿಯ ಪಲ್ಲಕ್ಕಿ ಹೊತ್ತಿರುವುದು ಇದೇ ಮೊದಲು.

ವೇದಿಕೆಯಲ್ಲಿ ಕುಳಿತಿದ್ದ ಡಿಕೆಶಿ ಪಲ್ಲಕ್ಕಿ ಆಗಮಿಸುತ್ತಿದ್ದಂತೆ ಕೆಳಗೆ ಇಳಿದು ಹೋಗಿ, ಲಕ್ಷಾಂತರ ಭಕ್ತರ ಮಧ್ಯೆ ತೆರಳಿ ಪಲ್ಲಕ್ಕಿ ಹೊತ್ತರು. ಇವರಿಗೆ ಸಚಿವ ಶಿವರಾಜ ತಂಗಡಗಿ ಸೇರಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಸಾಥ್ ನೀಡಿದರು.