ಗವಿಸಿದ್ದೇಶ್ವರ ದಾಸೋಹಕ್ಕೆ 8 ಲಕ್ಷ ಶೇಂಗಾ ಹೋಳಿಗೆ

| Published : Jan 24 2024, 02:01 AM IST

ಸಾರಾಂಶ

ಕೊಪ್ಪಳ ದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿನ ಮಹಾ ದಾಸೋಹಕ್ಕಾಗಿ ಈ ವರ್ಷ 8 ಲಕ್ಷ ಶೇಂಗಾ ಹೋಳಿಗೆ ಸಿದ್ಧ ಮಾಡಲಾಗುತ್ತಿದೆ. ಕಳೆದ ವರ್ಷ 7 ಲಕ್ಷಕ್ಕೂ ಅಧಿಕ ಶೇಂಗಾ ಹೋಳಿಗೆಯನ್ನು ತಯಾರಿಸಲಾಗಿತ್ತು.

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಇಲ್ಲಿನ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿನ ಮಹಾ ದಾಸೋಹಕ್ಕಾಗಿ ಈ ವರ್ಷ 8 ಲಕ್ಷ ಶೇಂಗಾ ಹೋಳಿಗೆ ಸಿದ್ಧ ಮಾಡಲಾಗುತ್ತಿದೆ. ಕಳೆದ ವರ್ಷ 7 ಲಕ್ಷಕ್ಕೂ ಅಧಿಕ ಶೇಂಗಾ ಹೋಳಿಗೆಯನ್ನು ತಯಾರಿಸಲಾಗಿತ್ತು.

ಸಿಂಧನೂರು ವಿಜಯಕುಮಾರ ಮತ್ತು ಗೆಳೆಯರು ಸೇರಿಕೊಂಡು ಹೋಳಿಗೆ ತಯಾರು ಮಾಡಿಸುತ್ತಿದ್ದಾರೆ. ಇದಕ್ಕಾಗಿ 80 ಕ್ವಿಂಟಲ್ ಶೇಂಗಾ, 80 ಕ್ವಿಂಟಲ್ ಅಥವಾ ಅದಕ್ಕಿಂತಲೂ ಅಧಿಕ ಬೆಲ್ಲ ಹಾಗೂ 40 ಕ್ವಿಂಟಲ್ ಮೈದಾಹಿಟ್ಟು ಬಳಕೆ ಮಾಡಲಾಗುತ್ತದೆ. ಇದಕ್ಕೆ ಸುಮಾರು ₹20 ಲಕ್ಷಕ್ಕೂ ಅಧಿಕ ವೆಚ್ಚ ತಗುಲಲಿದೆ.

ಕಳೆದೊಂದು ವಾರದಿಂದ ಸಿಂಧನೂರು, ಕಾರಟಗಿ, ಮಸ್ಕಿ, ಲಿಂಗಸಗೂರು ತಾಲೂಕಿನ 50 ಗ್ರಾಮಗಳ ಜನರಿಗೆ ಪ್ರತಿ ಮನೆಗೆ 2 ಕೆ.ಜಿ. ಶೇಂಗಾ, 2 ಕೆ.ಜಿ. ಬೆಲ್ಲ ಹಾಗೂ ಒಂದು ಪ್ಯಾಕೆಟ್ ಮೈದಾಹಿಟ್ಟು ವಿತರಣೆ ಮಾಡಿ, ಹೋಳಿಗೆ ತಯಾರಿಸಲು ಒಂದು ವಾರದ ಸಮಯ ನೀಡಲಾಗಿದೆ.

ಜ.25ರಂದು ಎಲ್ಲ ಭಕ್ತರು ಹೋಳಿಗೆ ಸಿದ್ಧ ಮಾಡಿಕೊಂಡು ಸಿಂಧನೂರು ಕನಕದಾಸ ಕಲ್ಯಾಣ ಮಂಟಪಕ್ಕೆ ತರುತ್ತಾರೆ. ಅಂದು ಟ್ರೇಗಳಲ್ಲಿ ಜೋಡಿಸಿ, ಪ್ಯಾಕ್ ಮಾಡಿ, ಲಾರಿಯಲ್ಲಿ ಲೋಡ್ ಮಾಡಲಾಗುತ್ತದೆ. ಇದರ ತೂಕವೇ 26 ಟನ್ ಆಗಲಿದೆಯಂತೆ. ಜ.26ರಂದು ಟ್ರಕ್‌ನಲ್ಲಿ ಕೊಪ್ಪಳಕ್ಕೆ ತಂದು, ಕೊಪ್ಪಳ ನಗರದಲ್ಲಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಗವಿಮಠಕ್ಕೆ ಸಲ್ಲಿಸಲಾಗುತ್ತದೆ. ಮಠದಲ್ಲಿ ಇದನ್ನು ಮಹಾದಾಸೋಹದಲ್ಲಿ ಬಳಕೆ ಮಾಡಲಾಗುತ್ತದೆ.