ಸಾರಾಂಶ
ಯಲ್ಲಾಪುರ: ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಹಾವು (ಕೆರೆ ಹಾವು) ಬಿದ್ದಿದ್ದು, ಅದೇ ನೀರನ್ನು ಸೇವಿಸಿ 8 ಮಂದಿ ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಡೋಮಗೇರಿ ಗೌಳಿವಾಡದಲ್ಲಿ ಭಾನುವಾರ ನಡೆದಿದೆ.
ವಾಂತಿ ಭೇದಿ ಕಂಡುಬಂದ ೮ ಜನರನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಘಟನೆಯ ವಿವರ: ಡೋಮಗೇರಿ ಗೌಳಿವಾಡದ ಒವರ್ ಹೆಡ್ ಟ್ಯಾಂಕ್‌ನಿಂದ ಸರಬರಾಜು ಮಾಡುತ್ತಿರುವ ನೀರಿನಲ್ಲಿ ವಾಸನೆ ಬರುತ್ತಿತ್ತು. ನೀರು ಸೇವಿಸಿದ ಕೆಲವು ಜನರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಸ್ಥಳಿಯರು ತಿಳಿಸಿದ ಮಾಹಿತಿ ಮೇರೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಹಾವಿನ ಕಳೇಬರ ಪತ್ತೆಯಾಗಿದೆ. ಸಮುದಾಯ ಆರೋಗ್ಯ ಅಧಿಕಾರಿ ಭವ್ಯಾ ದೇವಾಡಿಗ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರದ್ಧಾ ಭಗತ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ಥಳಕ್ಕೆ ಭೇಟಿ ನೀಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ವಡ್ಡರ್ ಹಾಗೂ ಗ್ರಾಪಂ ಸದಸ್ಯರು, ಸಿಬ್ಬಂದಿಯೊಂದಿಗೆ ಒವರ್‌ಹೆಡ್ ಟ್ಯಾಂಕ್ಅನ್ನು ಕೂಡಲೇ ಖಾಲಿ ಮಾಡಿಸಿದ್ದಾರೆ. ಬಳಿಕ ಟ್ಯಾಂಕ್ ಶುಚಿಗೊಳಿಸಿ, ಹೊಸ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದಾರೆ.ಕಲುಷಿತ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕುರಿತು ತಿಳಿಸಲಾಯಿತು. ಸಾರ್ವಜನಿಕರು ಕುದಿಸಿ ಆರಿಸಿದ ನೀರನ್ನು ಸೇವಿಸುವಂತೆ ತಿಳಿಸಲಾಯಿತು. ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಲು ಜಾಗೃತಿ ಮೂಡಿಸಲಾಯಿತು. ವಾಂತಿ, ಭೇದಿ ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಲು ತಿಳಿಸಲಾಯಿತು. ಲಂಚ ಪಡೆದ ಅರಣ್ಯ ಅಧಿಕಾರಿಗಳಿಗೆ ಶಿಕ್ಷೆ
ಕಾರವಾರ: ಕಾಡಿನಿಂದ ಕಟ್ಟಿಗೆಗಳನ್ನು ತಂದಿರುವುದಕ್ಕೆ ಪ್ರಕರಣ ದಾಖಲಿಸುವ ಕುರಿತು ಬೆದರಿಸಿ ಲಂಚಕ್ಕೆ ಬೇಡಿಕೆ ಇಟ್ಟ ದಾಂಡೇಲಿ ವಲಯದ ಉಪ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕನಿಗೆ ಶಿಕ್ಷೆ ವಿಧಿಸಿ ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ತೀರ್ಪು ನೀಡಿದ್ದಾರೆ.ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ- 1998 ಕಲಂ 7ರಡಿ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ, ಇದನ್ನು ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 3 ತಿಂಗಳ ಕಾರಾಗೃಹ ವಾಸ ಶಿಕ್ಷೆ ಕಲಂ 13(1)(ಡಿ)ಸಹಿತ 13(2) ರಡಿಯಲ್ಲಿ 2 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ ₹5,000 ದಂಡ ವಿಧಿಸಿ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 3 ತಿಂಗಳ ಕಾರಾಗೃಹವಾಸ ಶಿಕ್ಷೆ ವಿಧಿಸಿದೆ.ಪ್ರಕರಣ ಹಿನ್ನಲೆ: ಜೋಯಿಡಾ ತಾಲೂಕಿನ ಹೊಸಕೊಣಪ ಗ್ರಾಮದ ಸುನೀಲ ತಾತಪ್ಪ ಕಾಂಬಳೆ ಅವರು ತಮ್ಮ ಮನೆಗೆ ದುರಸ್ತಿಗಾಗಿ ಇಟ್ಟಿಗೆ ಸುಡಲು ತಮ್ಮ ಮನೆ ಬಳಿಯ ಅರಣ್ಯದಲ್ಲಿ ತುಂಡಾಗಿ ಬಿದ್ದ ಮರದ ತುಂಡುಗಳನ್ನು ತಂದಿದ್ದರು. ಈ ಬಗ್ಗೆ ಅಪಾಧಿತರಾದ ದಾಂಡೇಲಿಯ ಉಪವಲಯ ಅರಣ್ಯಾಧಿಕಾರಿ ಯಲ್ಲಪ್ಪ ತುಳಸಿಗೇರಿ ಕಲಾಲ ಹಾಗೂ ಅರಣ್ಯ ರಕ್ಷಕ ಶಿವಶರಣ ಅವರು ಕಾಡಿನಿಂದ ಕಟ್ಟಿಗೆಗಳನ್ನು ತಂದಿರುವ ಬಗ್ಗೆ ಬೆದರಿಸಿ ₹10,000 ಲಂಚದ ಹಣ ಬೇಡಿಕೆ ಇಟ್ಟಿದ್ದು, ಹಣ ನೀಡದೇ ಇದ್ದಲ್ಲಿ ಎಫ್‌ಐಆರ್ ದಾಖಲಿಸುವುದಾಗಿ ಬೆದರಿಸಿದ್ದರು.ಈ ಬಗ್ಗೆ ಸುನೀಲ ಲೋಕಾಯುಕ್ತರಿಗೆ ದೂರು ನೀಡಿದ್ದರು. ಆರೋಪಿಗಳು ದೂರುದಾರರಿಂದ ₹5,000 ಲಂಚದ ಹಣವನ್ನು ದಾಂಡೇಲಿಯ ಶಿತಲ್ ಕೋಲ್ಡ್ ಡ್ರಿಂಕ್ಸ್‌ನಲ್ಲಿ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ವಿಶೇಷ ಸರ್ಕಾರಿ ಅಭಿಯೋಜಕ ಲಕ್ಷ್ಮೀಕಾಂತ ಪ್ರಭು ವಾದ ಮಂಡಿಸಿದ್ದರು.