ತಳಕಲ್ಲಿನ 8 ಜನರಿಗೆ ಕಚ್ಚಿದ ಕೊಪ್ಪಳದ ಹುಚ್ಚು ನಾಯಿ!

| Published : Aug 17 2025, 02:29 AM IST

ಸಾರಾಂಶ

ತಳಕಲ್‌ನಲ್ಲಿ ಶನಿವಾರ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಹುಚ್ಚು ನಾಯಿ ತೀವ್ರ ದಾಳಿ ನಡೆಸಿದೆ. ಈ ವೇಳೆ ಶಿಕ್ಷಕನಿಗೂ ಕಚ್ಚಿ ಓಡಿಹೋಗಿದೆ. ಇದರಿಂದ ಭಯಭೀತರಾಗಿರುವ ಜನರು ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಕನೂರು:

ತಾಲೂಕಿನ ತಳಕಲ್ ಗ್ರಾಮದಲ್ಲಿ ಹುಚ್ಚು ನಾಯಿಯೊಂದು ಗ್ರಾಮದ ದಾರಿಯುದ್ದಕ್ಕೂ ಬರುವ ೮ಕ್ಕೂ ಅಧಿಕ ಜನರಿಗೆ ಕಚ್ಚಿದ ಘಟನೆ ಶನಿವಾರ ಜರುಗಿದೆ. ಇದರಲ್ಲಿ ಓರ್ವ ಬಾಲಕನಿಗೆ ತೀವ್ರ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ನಾಯಿ ಕೊಪ್ಪಳದ್ದು ಎನ್ನುವುದು ಗ್ರಾಮಸ್ತರ ಆರೋಪ.

ಈ ಘಟನೆ ನಡೆಯುತ್ತಿದ್ದಂತೆ ಗ್ರಾಮ ಪಂಚಾಯಿತಿ ತುರ್ತು ಸಭೆ ನಡೆಸಿ ಗ್ರಾಮದಲ್ಲಿರುವ ಮಾಂಸದ ಅಂಗಡಿಯನ್ನು ಬಂದ್‌ ಮಾಡಿಸುವ ಮೂಲಕ ನಾಯಿಗಳ ಕಡಿವಾಣಕ್ಕೆ ಮುಂದಾಗಿದೆ.

ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದ ಸಮೀಪ ಮನೆಗೆ ತೆರಳುತ್ತಿದ್ದ ಬಾಲಕ ಯಮನೂರಸಾಬ್ ಮಾಬುಸಾಬ್ ನದಾಫ್(೮), ಶಿಕ್ಷಕ ಹನುಮಂತಪ್ಪ ದಾಸರ(೪೪), ಸೈಯದ್‌ಸಾಬ್ ಇಲಾತ್‌ಖಾನ್ (೨೬), ವೀರೇಶ ಹಂದ್ರಾಳ (೨೦), ಭೀಮಯ್ಯ ಕಲ್ಗುಡಿ (೨೨), ಉಮೇಶ ಭರಮಯ್ಯ ಮುಸ್ಲಿ (೧೮), ತಳಬಾಳ ಗ್ರಾಮದ ಫಕೀರಪ್ಪ ಕವಲೂರು (೨೮), ರೇಣುಕಪ್ಪ ಕಮ್ಮಾರ (೧೮) ನಾಯಿ ಕಡಿತಕ್ಕೊಳಗಾಗಿದ್ದಾರೆ.

ಇವರಲ್ಲಿ ಕೆಲವರು ತ್ವರಿತವಾಗಿ ಜಿಲ್ಲಾಸ್ಪತ್ರೆಗೆ ತೆರಳಿದ್ದು, ತೀವ್ರವಾಗಿ ಗಾಯಗೊಂಡ ಯಮನೂರಸಾಬ್ ಕೂಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಳಕಲ್ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತದಿಂದ ಬಂದ ಜನರಿಗೆ ಬನ್ನಿಕೊಪ್ಪ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ. ನಿಂಗಪಲ್ಲಿ ಮಲ್ಲೇಶ್, ಡಾ. ಮಹಾಂತೇಶ್, ಹಿರಿಯ ಆರೋಗ್ಯ ಸಹಾಯಕ ಸಿದ್ದಲಿಂಗೇಶ ಕಾತರಕಿ ಚಿಕಿತ್ಸೆ ನೀಡಿದ್ದಾರೆ.

ಗ್ರಾಮದ ಪ್ರಮುಖ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ವಾಯುವಿಹಾರ ಸೇರಿದಂತೆ ಬಸ್ ನಿಲ್ದಾಣಕ್ಕೆ ಹೋಗಲು ಕಷ್ಟವಾಗುತ್ತಿದೆ. ಸಾಕಷ್ಟು ನಾಯಿಗಳು ರಸ್ತೆಯಲ್ಲಿಯೇ ಬಿಡಾರ ಹೂಡಿದ್ದು, ಜನರ ಮೇಲೆ ದಾಳಿಗೆ ಬರುತ್ತಿವೆ. ಇದರಿಂದ ಮಕ್ಕಳು ಹಾಗೂ ಜನರು ಈ ರಸ್ತೆಗಳಲ್ಲಿ ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಪಂ ತುರ್ತು ಸಭೆ:

ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಜಹೀರಾ ಬೇಗಂ ಜಾಕಿರ್ ಹುಸೇನ್ ಕೊಪ್ಪಳ ಅಧ್ಯಕ್ಷತೆಯಲ್ಲಿ ನಾಯಿ ಕಡಿತಕ್ಕೆ ಕಡಿವಾಣ ಹಾಕುವ ಕುರಿತು ತುರ್ತು ಸಭೆ ಸಹ ಜರುಗಿತು. ಗ್ರಾಮದ ರಸ್ತೆಯ ಪಕ್ಕದಲ್ಲಿರುವ ಚಿಕನ್ (ಮಾಂಸದ) ಅಂಗಡಿಗಳನ್ನು ತಕ್ಷಣ ಬಂದ್ ಮಾಡಿಸುವ ನಿರ್ಣಯವನ್ನು ಸದಸ್ಯರು ತೆಗೆದುಕೊಂಡರು. ಗ್ರಾಮದ ರಸ್ತೆ ಪಕ್ಕದಲ್ಲಿರುವ ಚಿಕನ್ ಅಂಗಡಿಗಳನ್ನು ಸದಸ್ಯರು ಹಾಗೂ ಪಿಡಿಒ ಅವರು ತೆರಳಿ ಬಂದ್ ಸಹ ಮಾಡಿಸಿದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಿದಾಬಿ ಗುಡಿಗುಡಿ, ಧಾರವಾಡ ಕೃಷಿ ವಿವಿ ಸಿಂಡಿಕೇಟ್ ಸದಸ್ಯ ತಿಮ್ಮಣ್ಣ ಚೌಡಿ, ಸದಸ್ಯರಾದ ಉಮೇಶಗೌಡ ಪೊಲೀಸ್‌ಪಾಟೀಲ್, ಸೀರಾಜ್ ಹುದಿನ್, ವೀರೇಶ್ ಬಿಸರಳ್ಳಿ, ಗಂಗಾರಡ್ಡಿ ಸೋಮರಡ್ಡಿ, ದೇವಕ್ಕ ಭಂಗಿ, ರೇಣುಕಾ ಮಡಿವಾಳರ, ಚೈತ್ರಾ ಹಿರೇಗೌಡ, ಪಿಡಿಒ ವೀರನಗೌಡ ಚನ್ನವೀರಗೌಡ ಇತರರಿದ್ದರು.

ನಾಯಿ ತಂದು ಬಿಟ್ಟ ಆರೋಪ

ಗ್ರಾಮದ ಸಮೀಪ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ೨೫ಕ್ಕೂ ಅಧಿಕ ನಾಯಿಗಳನ್ನು ವಾಹನದಲ್ಲಿ ತಂದು ಕೊಪ್ಪಳ ನಗರಸಭೆಯವರು ಬಿಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದಕ್ಕೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಹ ಹರಿದಾಡುತ್ತಿದೆ. ಇದರಿಂದ ಗ್ರಾಮಕ್ಕೆ ಹುಚ್ಚು ಹಿಡಿದ ನಾಯಿ ಪ್ರವೇಶಿಸಿದ್ದು, ಗ್ರಾಮದ ಜನರಿಗೆ ಕಡಿದಿದೆ. ಇಂತಹ ನಾಯಿಗಳನ್ನು ತಕ್ಷಣ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.