ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿದ್ದು, ನಿನ್ನೆ ಒಂದೇ ದಿನ, ಬುಧವಾರ, 4ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಬಾಲಕ ಸೇರಿ 8 ಮಂದಿ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ.

 ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿದ್ದು, ನಿನ್ನೆ ಒಂದೇ ದಿನ, ಬುಧವಾರ, 4ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಬಾಲಕ ಸೇರಿ 8 ಮಂದಿ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಕುರುಬಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿಯಲ್ಲಿ ಪಾಠ ಕೇಳುತ್ತಿರುವಾಗಲೇ 4ನೇ ತರಗತಿಯ ವಿದ್ಯಾರ್ಥಿ, 10 ವರ್ಷದ ಬಾಲಕ, ಮನೋಜ್‌, ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.

ದಾವಣಗೆರೆಯಲ್ಲಿ ಇಬ್ಬರು:

ಈ ಮಧ್ಯೆ, ದಾವಣಗೆರೆಯಲ್ಲಿ ಇಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಜಯನಗರದಲ್ಲಿ ಉದ್ಯಮಿ ರೇಖಾ ಮುರುಗೇಶ್‌ ಎಂಬುವರ ಪುತ್ರ ಅಕ್ಷಯ್ (22) ಮನೆಯಲ್ಲಿ ಕುಳಿತಿದ್ದಾಗಲೇ ಕುಸಿದು ಬಿದ್ದಿದ್ದು, ಬಳಿಕ, ಆಸ್ಪತ್ರೆಗೆ ದಾಖಲಿಸಿದ ಕೆಲ ಕ್ಷಣದಲ್ಲೇ ಕೊನೆಯುಸಿರೆಳೆದಿದ್ದಾನೆ. ನಗರದ ನಿಟುವಳ್ಳಿಯ ಚಿಕ್ಕನಹಳ್ಳಿ ಬಡಾವಣೆಯಲ್ಲಿ ಹರೀಶ್ (50) ಎಂಬುವರಿಗೆ ಮಲಗಿದ್ದಾಗಲೇ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಧಾರವಾಡದಲ್ಲಿ ಯುವತಿ:

ಧಾರವಾಡದ ಪುರೋಹಿತ ನಗರದಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಕೃಷಿ ಪದವೀಧರೆ ಜೀವಿತಾ ಕುಸಗೂರ (26) ಎಂಬ ಯುವತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಬೆಳಗ್ಗೆ ತಲೆ ಸುತ್ತುತ್ತಿದೆ ಎಂದು ಮನೆಯಲ್ಲಿ ಕುಸಿದು ಬಿದ್ದಿದ್ದು, ಬಳಿಕ, ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರು ದಕ್ಷಿಣದಲ್ಲಿ ಇಬ್ಬರು:

ಈ ಮಧ್ಯೆ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಬುಧವಾರ ಇಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ರಾಮನಗರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಹಸು ಮೇಯಿಸುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಗಿರೀಶ್ (25) ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕನಕಪುರ ತಾಲೂಕಿನ ಹೆಗ್ಗನೂರುದೊಡ್ಡಿ ಗ್ರಾಮದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಫಾರೆಸ್ಟ್‌ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಮಾದೇಶ ನಾಯಕ (38) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಕೊಡಗು, ಕಲಬುರಗಿಯಲ್ಲಿ ತಲಾ ಒಬ್ಬರು:

ಇದೇ ವೇಳೆ, ಕೊಡಗಿನ ಕುಶಾಲನಗರದಲ್ಲಿ ಸುಮಾ (58) ಎಂಬುವರಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗಲೇ ಅಸುನೀಗಿದ್ದಾರೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮೋಹಸಿನ್‌ ಪಟೇಲ್‌ (22) ಎಂಬ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮನೆಯಲ್ಲಿದ್ದಾಗಲೇ ಅವರು ದಿಢೀರ್‌ ಎಂದು ಕುಸಿದು ಬಿದ್ದು, ಕೊನೆಯುಸಿರೆಳೆದರು.