ಕೂಡ್ಲಿಗಿಯಲ್ಲಿ ಭಾರಿ ಮಳೆಗೆ 8 ಕುರಿ ಸಾವು

| Published : May 21 2024, 12:31 AM IST

ಸಾರಾಂಶ

ಅಮಲಾಪುರ ಗ್ರಾಮದ ತಿರುಮಲ ಎಂಬವರಿಗೆ ಸೇರಿದ ಮನೆ ಮತ್ತು ಕಾನಹೊಸಹಳ್ಳಿ, ಇಮಡಾಪುರ ಗ್ರಾಮದ ತಲಾ ಒಂದೊಂದು ಮನೆ ಸೇರಿ ಒಟ್ಟು ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕೂಡ್ಲಿಗಿ: ತಾಲೂಕಿನ ಕೂಡ್ಲಿಗಿ, ಕಾನಹೊಸಹಳ್ಳಿ, ಗುಡೇಕೋಟೆ ಹೋಬಳಿಯಾದ್ಯಂತ ಭಾನುವಾರ ರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಈ ವೇಳೆ ಎಂಟು ಕುರಿಗಳು ಸಾವನ್ನಪ್ಪಿವೆ. ಮೂರು ಮನೆಗಳು ಜಖಂ ಆದ ಬಗ್ಗೆ ವರದಿಯಾಗಿದೆ.

ಕಾನಹೊಸಹಳ್ಳಿ ಹೋಬಳಿಯ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಗಡಿಗ್ರಾಮ ಟಿ.ಕಲ್ಲಹಳ್ಳಿ ಗ್ರಾಮದ ಪೂಜಾರಿ ನಾಗಪ್ಪ ಎಂಬವರು ತನ್ನ ಮನೆ ಮುಂದೆ ಹಾಕಿದ್ದ ಚಪ್ಪರ ಮುರಿದು ಬಿದ್ದು ಪರಿಣಾಮ ಅದರ ಅಡಿಯಲ್ಲಿ ಕಟ್ಟಿದ್ದ 8 ಕುರಿಗಳು ಮೃತಪಟ್ಟಿವೆ.

ಅಮಲಾಪುರ ಗ್ರಾಮದ ತಿರುಮಲ ಎಂಬವರಿಗೆ ಸೇರಿದ ಮನೆ ಮತ್ತು ಕಾನಹೊಸಹಳ್ಳಿ, ಇಮಡಾಪುರ ಗ್ರಾಮದ ತಲಾ ಒಂದೊಂದು ಮನೆ ಸೇರಿ ಒಟ್ಟು ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹುರುಳಿಹಾಳ್ ಗ್ರಾಮದಲ್ಲಿ ಮಳೆನೀರು ಜಮೀನಿಗೆ ನುಗ್ಗಿ ದಾಳಿಂಬೆ ತೋಟ ಜಲಾವೃತವಾಗಿದೆ.

ಶಾಲೆಯಂಗಳದಲ್ಲಿ ನೀರು:

ಚಿಕ್ಕಜೋಗಿಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆ ಅವರಣದಲ್ಲಿ ಮಳೆ ನೀರು ಸಂಗ್ರಹವಾಗಿ ಶಾಲಾಯಂಗಳವು ಸದ್ಯ ಕೆರೆಯಂಗಳವಾಗಿ ಪರಿವರ್ತನೆಯಾಗಿದೆ. ಮಕ್ಕಳು ಶಾಲೆಗೆ ಬರುವುದಕ್ಕೆ ತೊಂದರೆಯಾಗಿದೆ. ಈ ಕುರಿತು ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದು ಮಣ್ಣು ಹಾಕಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಲೂಕಿನ ಕಾನಹೊಸಹಳ್ಳಿಯಲ್ಲಿ 49.1 ಮಿ.ಮೀ., ಗುಡೇಕೋಟೆ 14.3 ಮಿ.ಮೀ., ಚಿಕ್ಕಜೋಗಿಹಳ್ಳಿ 54.4 ಮಿ.ಮೀ., ಬಣವಿಕಲ್ಲು 55.3 ಮಿ.ಮೀ. ಮಳೆಯಾಗಿರುವ ಬಗ್ಗೆ ದಾಖಲಾಗಿದೆ.

ಸಂಡೂರಿನ ವಿವಿಧೆಡೆ ಮಳೆ: ಸಂಡೂರುತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ. ಮಳೆ ಜಿನುಗುತ್ತಿರುವುದು ಜನರಲ್ಲಿ ಸಂತಸವನ್ನುಂಟು ಮಾಡಿದೆ. ಸೋಮವಾರ ಮೋಡ ಕವಿದ ವಾತಾವರಣವಿದೆ.

ಸಂಡೂರು, ಚೋರುನೂರು, ಕುರೆಕುಪ್ಪ ಹಾಗೂ ವಿಠಲಾಪುರ ಮಳೆ ಮಾಪನ ಕೇಂದ್ರದಲ್ಲಿ ಭಾನುವಾರ ಕ್ರಮವಾಗಿ ೩೪.೨ ಮಿ.ಮೀ, ೩೨.೮ ಮಿ.ಮೀ, ೧ ಮಿ.ಮೀ ಹಾಗೂ ೩ ಮಿ.ಮೀ ಮಳೆ ದಾಖಲಾಗಿದೆ.