ಕನ್ನಡಪ್ರಭ ವಾರ್ತೆ ಆಲಮಟ್ಟಿ

ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ ಹೆಚ್ಚಿಸಲು ಭೂಸ್ವಾಧೀನ ಸೇರಿ ವಿವಿಧ ಕಾಮಗಾರಿಗಳಿಗೆ ಸುಮಾರು ₹80 ಸಾವಿರ ಕೋಟಿ ಅಗತ್ಯವಿದೆ. ಇದಕ್ಕಾಗಿ 1.33 ಲಕ್ಷ ಎಕರೆ ಜಮೀನು ವಶಪಡಿಸಿಕೊಳ್ಳಬೇಕಿದೆ. ಮುಂದಿನ ಮೂರು ವರ್ಷಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಜಲಸಂಪನ್ಮೂಲ ಸಚಿವರಾದ ನಂತರ ಮಂಗಳವಾರ ಪ್ರಥಮ ಬಾರಿಗೆ ಆಲಮಟ್ಟಿಗೆ ಭೇಟಿ ನೀಡಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವರ್ಷ ಸರ್ಕಾರ ₹3,000 ಕೋಟಿ ಅನುದಾನ ಒದಗಿಸಿದೆ. ಇದು ಸಾಂಕೇತಿಕ ಅನುದಾನವಾಗಿದೆ. ಪೂರಕ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗಿದೆ ಎಂದರು.

ರಾಜ್ಯಗಳ ಸಭೆ ಕರೆಯಲಿ:ಕೃಷಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ನಡುವೆ ಇರುವ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಕೇಂದ್ರ ಜಲಶಕ್ತಿ ಸಚಿವರು ಸಂಬಂಧಪಟ್ಟ ರಾಜ್ಯಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ಗೆಜೆಟ್ ಅಧಿಸೂಚನೆ ಶೀಘ್ರ ಹೊರಡಿಸಲು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮುಂದುವರಿದಿದೆ. ಮುಖ್ಯಮಂತ್ರಿಯವರೊಂದಿಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಈ ಕುರಿತು ಮತ್ತೊಮ್ಮೆ ಮನವಿ ಮಾಡಲಾಗುವುದು. ಯುಕೆಪಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಯಲ್ಲಿ ವಿಳಂಬವಾಗಿದೆ. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್ ಸರ್ಕಾರ ಎರಡೂ ಕಾರಣವಾಗಿವೆ. ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಜ್ಯೇಷ್ಠತೆಯ ಆಧಾರದ ಮೇಲೆ ಪಾವತಿಸಲಾಗುವುದು. ಆಲಮಟ್ಟಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಹಲವು ಪ್ರಸ್ತಾವ ಬಂದಿದ್ದು, ಅದಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.


ಯುಕೆಪಿ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿಗೆ ನೀರು ಹರಿಸಲು 60 ಟಿಎಂಸಿ ಅಡಿ ನೀರು ಅಗತ್ಯವಿದೆ. ಇನ್ನೂ 20 ಟಿಎಂಸಿ ನೀರು ಬಂದರೆ ಮುಂಗಾರು ಹಂಗಾಮಿನಲ್ಲಿ ನೀರಾವರಿಗೆ ನೀರು ಹರಿಸುವ ಬಗ್ಗೆ ಚಿಂತಿಸಲಾಗುವುದು. ಸದ್ಯಕ್ಕೆ ಕುಡಿಯುವ ನೀರಿಗಾಗಿ ಮಾತ್ರ ಕಾಲುವೆಗೆ ನೀರು ಬಿಡಲಾಗಿದೆ ಎಂದ ಅವರು, ಜುಲೈ 25ರೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜೆ.ಟಿ. ಪಾಟೀಲ, ಉಮೇಶ ಮೇಟಿ, ಸಿ.ಎಸ್. ನಾಡಗೌಡ, ಮುಖಂಡರಾದ ನಾಗರಾಜ ಹದ್ಲಿ, ಶ್ರೀಕರ ದೇಸಾಯಿ, ರಾಯಪ್ಪ ಮೇಟಿ ಇದ್ದರು.