ನೀರಿನ ಸಮಸ್ಯೆ ಪರಿಹಾರಕ್ಕೆ ₹80 ಕೋಟಿ

| Published : Feb 23 2024, 01:53 AM IST

ಸಾರಾಂಶ

ಬಿಬಿಎಂಪಿಗೆ ಸೇರಿದ 110 ಹಳ್ಳಿಗಳ ನೀರಿನ ಸಮಸ್ಯೆ ನಿವಾರಣೆಗೆ 80 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಹೊರವಲಯದ ವಾರ್ಡ್‌ಗಳು ಹಾಗೂ 110 ಹಳ್ಳಿ ವ್ಯಾಪ್ತಿಯಲ್ಲಿ ನೀರಿನ ಪೂರೈಕೆಗೆ ಒಟ್ಟು ₹80 ಕೋಟಿ ಅನುದಾನ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 110 ಹಳ್ಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಹೊಸ ಕೊಳವೆ ಬಾವಿ ಕೊರೆಯಲು 15ನೇ ಹಣಕಾಸು ಆಯೋಗದಲ್ಲಿ ₹40 ಕೋಟಿ ನೀಡಲಾಗಿದೆ ಹಾಗೂ ಕೊಳವೆ ಬಾವಿಯನ್ನು ಇನ್ನಷ್ಟು ಆಳಕ್ಕೆ ಕೊರೆಯಲು, ರಿಪೇರಿ ಹಾಗೂ ವಾಟರ್‌ ಟ್ಯಾಂಕರ್‌ಗಳಿಗೆ ₹40 ಕೋಟಿ ಅನುದಾನವನ್ನು ಜಲಮಂಡಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಅನುದಾನದಲ್ಲಿ ಜಲಮಂಡಳಿಯು ನೀರಿನ ವ್ಯವಸ್ಥೆ ಮಾಡಲಾಗುತ್ತದೆ. 110 ಹಳ್ಳಿ ವ್ಯಾಪ್ತಿಯಲ್ಲಿ ಮಾತ್ರ ಬಿಬಿಎಂಪಿ ನೀರು ಪೂರೈಕೆಯ ಜವಾಬ್ದಾರಿಯನ್ನು ಹೊಂದಿದೆ. ಉಳಿದಂತೆ ನಗರದ ಎಲ್ಲ ಪ್ರದೇಶಗಳಲ್ಲಿ ನೀರು ಪೂರೈಕೆಯನ್ನು ಜಲಮಂಡಳಿಗೆ ವಹಿಸಲಾಗಿದೆ. ನಗರದ ಕೇಂದ್ರ ಭಾಗದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದಲ್ಲಿ ಕೊಳವೆ ಬಾವಿ ಕೊರೆಯಲು ಅವಕಾಶವಿಲ್ಲ. ಅಗತ್ಯವಿದ್ದರೆ ಟ್ಯಾಂಕರ್‌ ಮೂಲಕ ಮಾತ್ರ ನೀರಿನ ಪೂರೈಕೆ ಮಾಡಬೇಕು ಎಂದು ತಿಳಿಸಿದರು.ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಭೂಗರ್ಭ ಶಾಸ್ತ್ರಜ್ಞರ ವರದಿ ಪಡೆದು ಕೊಳವೆ ಬಾವಿ ಕೊರೆಯಬೇಕು. ಇಲ್ಲವಾದರೆ, ಹಣ ಬಿಡುಗಡೆ ಆಗುವುದಿಲ್ಲ.

-ತುಷಾರ್‌ ಗಿರಿನಾಥ್‌, ಬಿಬಿಎಂಪಿ ಮುಖ್ಯ ಆಯುಕ್ತ.