ಸಾರಾಂಶ
- ಹೊಳಲೂರು, ಬೆಜ್ಜವಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಸಹಕಾರ ಭರವಸೆ - ಇನ್ನೂ 10 ಸಾವಿರ ಎಕರೆ ಭೂಮಿ ಒದಗಿಸಲು ಪಾವಗಡ ರೈತರು ಉತ್ಸಾಹ ತೋರುತ್ತಿದ್ದಾರೆ- ವಿದ್ಯುತ್ ಅಭಾವ ನೀಗಿಸಲು ತೆರೆದ ಮಾರುಕಟ್ಟೆಯಲ್ಲಿ ವಿದ್ಯುತ್ ಖರೀದಿಸಲು ಕ್ರಮ- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ರೈತರು ತಮ್ಮ ಹೊಲಗಳಲ್ಲಿನ ಬೆಳೆಗಳಿಗೆ ಅವಶ್ಯವಿರುವ ವಿದ್ಯುತ್‍ಗಾಗಿ ಸೋಲಾರ್ ವ್ಯವಸ್ಥೆ ನಿರ್ಮಿಸಿಕೊಳ್ಳುವವರಿಗೆ ಸರ್ಕಾರದಿಂದ ಶೇ.80ರಷ್ಟು ಸಹಾಯಧನ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಮೆಸ್ಕಾಂ ವ್ಯಾಪ್ತಿಯೊಳಗಿನ ವಿದ್ಯುತ್ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಪ್ರಗತಿ ಕುರಿತು ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಈ ವಿದ್ಯುತ್‍ನಿಂದ ಸುಮಾರು 10 ಎಚ್.ಪಿ.ವರೆಗಿನ ಮೋಟಾರ್ ಯಂತ್ರಗಳನ್ನು ನಡೆಸಬಹುದು. ಹೊಳಲೂರು ಮತ್ತು ಬೆಜ್ಜವಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 220 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದರು.
ಶರಾವತಿ, ವರಾಹಿ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ. ಪರಿಸರಸ್ನೇಹಿ ಗ್ರೀನ್ ಹೈಡ್ರೋಜನ್ ಪವರ್ ಉತ್ಪಾದಿಸುತ್ತಿರುವ ಉತ್ತರ ಕರ್ನಾಟಕದ ಆಯ್ದ ಜಿಲ್ಲೆಗಳ ವಿದ್ಯುತ್‍ನ್ನು ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಸರಬರಾಜು ಮಾಡಲು ಕ್ರಮವಹಿಸಲಾಗಿದೆ. ಪಾವಗಡದಲ್ಲಿ ಅಲ್ಲಿನ ರೈತರ ಸಹಕಾರದೊಂದಿಗೆ ಸುಮಾರು 10 ಸಾವಿರ ಎಕರೆ ಭೂಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೇ. ಅಲ್ಲಿನ ರೈತರು ಇನ್ನೂ 10 ಸಾವಿರ ಎಕರೆ ಭೂಮಿ ಒದಗಿಸಲು ಉತ್ಸಾಹ ತೋರುತ್ತಿದ್ದಾರೆ. ಎಂದರು.ಮುಂಗಾರು ಕೈಕೊಟ್ಟ ಹಿನ್ನೆಲೆ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತಗೊಂಡಿದೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ವಿದ್ಯುತ್‍ನ್ನು ಖರೀದಿಸಿ ರಾಜ್ಯದ ಜನರ ಅನುಕೂಲಕ್ಕೆ ತಕ್ಕಂತೆ ಸರಬರಾಜು ಮಾಡಲಾಗುತ್ತಿದೆ. ಇರುವ ವಿದ್ಯುತ್‍ನ್ನು ಹಂಚಿಕೆ ಮಾಡುವ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗಳಿಗೆ ನೀಡಲಾಗುತ್ತಿದ್ದ ವಿದ್ಯುತ್‍ನ್ನು 7 ಗಂಟೆಗಳಿಂದ 5 ಗಂಟೆಗೆ ಮಿತಿಗೊಳಿಸಲಾಗಿದೆ. ಅಂತೆಯೇ, ಬೇಸಿಗೆ ಕಾಲವಾದ್ದರಿಂದ 9 ಸಾವಿರ ಮೆಗಾ ವ್ಯಾಟ್‌ನಿಂದ 16 ಮೆಗಾ ವ್ಯಾಟ್ ವಿದ್ಯುತ್‍ಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದರು.
ಸದ್ಯಕ್ಕೆ ರಾಜ್ಯದಲ್ಲಿ ವಿದ್ಯುತ್ ಅಭಾವ ನೀಗಿದೆ. ರಾಯಚೂರು, ಬಿಜಾಪುರ ಜಿಲ್ಲೆಗಳಲ್ಲಿನ ಕೃಷಿ ಚಟುವಟಿಕೆಗಳಿಗೂ ವ್ಯವಸ್ಥಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಭಾವ್ಯ ವಿದ್ಯುತ್ ಅಭಾವವನ್ನು ನೀಗಿಸಲು ತೆರೆದ ಮಾರುಕಟ್ಟೆಯಲ್ಲಿ ವಿದ್ಯುತ್ ಖರೀದಿಸಲು ಕ್ರಮ ವಹಿಸಲಾಗುವುದು ಎಂದರು.ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಪ್ರಸ್ತುತ ಬಳಸುತ್ತಿರುವ ವಿದ್ಯುತ್‍ನ ಬಿಲ್ ಕೋಟ್ಯಂತರ ರು. ಬಾಕಿ ಇದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್, ಈ ವಿಷಯವನ್ನು ಸಂಬಂಧಿಸಿದ ಇಲಾಖಾ ಸಚಿವರೊಂದಿಗೆ ಮಾತನಾಡಿ, ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ, ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಮೆಸ್ಕಾಂ ವ್ಯವಸ್ಥಾಪಕಿ ಪದ್ಮಾವತಿ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಶಾಸಕಿ ಶಾರದಾಪೂರ್ಯಾನಾಯ್ಕ್ ಮತ್ತಿತರರು ಇದ್ದರು.- - - ಬಾಕ್ಸ್ ರಾಜ್ಯದಲ್ಲಿ 750 ಹೊಸ ವಿದ್ಯುತ್ ಸ್ಥಾವರ
ರಾಜ್ಯದಲ್ಲಿ ಕೆಪಿಸಿಎಲ್ ವತಿಯಿಂದ ಪಂಪ್ ಸ್ಟೋರೇಜ್ ಪ್ಲಾಂಟ್ಸ್ ನಿರ್ಮಾಣಕ್ಕೆ ಸುಮಾರು ₹8500 ಕೋಟಿ ಯೋಜನೆ ರೂಪಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.ಕುಸುಮ್ ಯೋಜನೆಯಡಿ ರಾಜ್ಯದಲ್ಲಿ 750 ಹೊಸ ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಖಾಸಗಿಯವರೊಂದಿಗೆ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಶಿವಮೊಗ್ಗ ಸಮೀಪದ 220 ಕೆ.ವಿ. ವಿದ್ಯುತ್ ಸ್ವೀಕರಣ ಕೇಂದ್ರಕ್ಕೆ 100 ಎಂ.ವಿ.ಎ. ಅಧಿಕಶಕ್ತಿ ಪರಿವರ್ತಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗ ನಗರದ ಹೊರವಲಯದ ದೇವಕಾತಿಕೊಪ್ಪ ಮತ್ತು ಸಿದ್ಲೀಪುರ ಕೈಗಾರಿಕಾ ಪ್ರದೇಶಕ್ಕೆ ಹೊಸದಾಗಿ ವಿದ್ಯುತ್ ಉಪಕೇಂದ್ರ ಸ್ಥಾಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆ ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಕ್ರಮ ವಹಿಸಲಾಗುವುದು ಎಂದರು.
- - - -3ಎಸ್‌ಎಂಜಿಕೆಪಿ04:ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿದರು.