ಸಾರಾಂಶ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಸಾಲು, ಸಾಲು ರಜೆ ಹಿನ್ನೆಲೆಯಲ್ಲಿ ಭಾನುವಾರ ಪ್ರವಾಸಿಗರ ದಂಡು ಹರಿದುಬಂದಿದೆ. 80 ಸಾವಿರಕ್ಕೂ ಅಧಿಕ ಪ್ರವಾಸಿಗರು ಹಂಪಿಗೆ ಆಗಮಿಸಿದ್ದು, ಹಂಪಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು.
ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರಿಂದ ಉದ್ದಾನ ವೀರಭದ್ರೇಶ್ವರ ದೇವಾಲಯ, ಶ್ರೀಕೃಷ್ಣ ದೇವಾಲಯ, ಉಗ್ರ ನರಸಿಂಹ ದೇಗುಲಗಳ ಕಡೆ ಹೋಗುವ ರಸ್ತೆಯಲ್ಲಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್‌ನಿಂದಾಗಿ ಪ್ರವಾಸಿಗರು ಕೂಡ ಪರದಾಡಿದರು. ಬೆಂಗಳೂರಿನ ಪ್ರವಾಸಿಗರ ಕಾರೊಂದನ್ನು ರಸ್ತೆ ಮಧ್ಯದಲ್ಲೇ ಬಿಟ್ಟು ಹೋಗಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.ಹಂಪಿಗೆ ಪ್ರವಾಸಿಗರ ದಂಡು ಹರಿದುಬಂದಿದ್ದರಿಂದ, ಇಡೀ ಹಂಪಿಯಲ್ಲಿ ಜಾತ್ರೆ, ಉತ್ಸವದ ವಾತಾವರಣ ನಿರ್ಮಾಣಗೊಂಡಿತ್ತು. ಪ್ರವಾಸಿಗರು ಸ್ಮಾರಕಗಳನ್ನು ಕಂಡು ಖುಷಿಪಟ್ಟರು. ವಿರೂಪಾಕ್ಷೇಶ್ವರ ದೇವಾಲಯದಲ್ಲಿ ದೇವರ ದರ್ಶನ ಪಡೆದರು.
ಅಂಜನಾದ್ರಿಗೆ ತೆರಳುವ ಹನುಮ ಮಾಲಾಧಾರಿಗಳು ಕೂಡ ದೇವರ ದರ್ಶನ ಪಡೆದರು. ವಿಜಯ ವಿಠ್ಠಲ, ಮಹಾನವಮಿ ದಿಬ್ಬ, ಹಜಾರರಾಮ ದೇವಾಲಯ, ಕಲ್ಲಿನ ತೇರು, ಕಮಲ ಮಹಲ್, ಕಡಲೆ ಕಾಳು, ಸಾಸಿವೆ ಕಾಳು ಗಣಪತಿ ಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸಿದರು.ರಾಜ್ಯ ಸೇರಿದಂತೆ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದರು. ಮಾಸ್ಕ್‌ಗಳನ್ನು ಧರಿಸಿದ್ದವರು ಅತಿ ವಿರಳವಾಗಿದ್ದರು.
ಗೈಡ್‌ಗಳ ಕೊರತೆ: ಹಂಪಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬಂದಿದ್ದರಿಂದ ಗೈಡ್‌ಗಳ ಕೊರತೆಯೂ ಉಂಟಾಗಿತ್ತು. ಹಲವು ಪ್ರವಾಸಿಗರು ಹಂಪಿಯಲ್ಲಿ ಗೈಡ್‌ಗಳು ಸಿಗಲಿಲ್ಲ ಎಂದು ಬೇಸರ ಕೂಡ ವ್ಯಕ್ತಪಡಿಸಿದರು. 80 ಸಾವಿರಕ್ಕೂ ಅಧಿಕ ಪ್ರವಾಸಿಗರು ಬಂದಿದ್ದರಿಂದ ಗೈಡ್‌ಗಳ ಕೊರತೆಯೂ ಎದ್ದುಕಾಣುತ್ತಿತ್ತು.ಹಂಪಿಗೆ ಪ್ರವಾಸಿಗರು ಭಾರೀ ಪ್ರಮಾಣದಲ್ಲಿ ಬಂದಿದ್ದರಿಂದ ಹಂಪಿ, ಕಮಲಾಪುರ ಮತ್ತು ಹೊಸಪೇಟೆ ಸುತ್ತಮುತ್ತಲ ಹೋಟೆಲ್‌ಗಳು ಭರ್ತಿಯಾಗಿದ್ದವು. ಹೋಟೆಲ್‌ಗಳಲ್ಲಿ ರೂಮ್‌ಗಳು ಸಿಗದೇ ಪ್ರವಾಸಿಗರು ಕೂಡ ಪರದಾಡಿದರು. ಎರಡು ದಿನದ ಪ್ರವಾಸವನ್ನು ಒಂದೇ ದಿನಕ್ಕೆ ಮೊಟಕುಗೊಳಿಸಿ ಹಲವು ಪ್ರವಾಸಿಗರು ವಾಪಸಾದರು.