ಬನ್ನಿಹಟ್ಟಿ ರೈಲ್ವೆ ಯಾರ್ಡ್‌ನಲ್ಲಿ ಸುಮಾರು ೮ ಸಾವಿರ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಲಾಗಿದೆ.

ಸಂಡೂರು: ತಾಲೂಕಿನ ಯರ‍್ರಯ್ಯನಹಳ್ಳಿ ೩-೪ ಲಕ್ಷ ಟನ್ ಗ್ರಾವೆಲ್ ಹಾಗೂ ಬನ್ನಿಹಟ್ಟಿ ರೈಲ್ವೆ ಯಾರ್ಡ್‌ನಲ್ಲಿ ಸುಮಾರು ೮ ಸಾವಿರ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಲಾಗಿದೆ. ಅದಿರು ಲೂಟಿಯಾಗಿದೆ. ಇಷ್ಟಾದರೂ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು.ತಾಲೂಕಿನ ಯರ‍್ರಯ್ಯನಹಳ್ಳಿ, ಬನ್ನಿಹಟ್ಟಿ ರೈಲ್ವೆ ಯಾರ್ಡ್ ಹಾಗೂ ಸುಶೀಲಾನಗರದ ಟೋಲ್ ಗೇಟ್ ಸ್ಥಳಕ್ಕೆ ಭಾನುವಾರ ಭೇಟಿ, ನೀಡಿ ಪರಿಶೀಲಿಸಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಅಕ್ರಮ ಬಯಲಿಗೆಳೆದವರ ಮೇಲೆಯೇ ಸುಳ್ಳು ಕೇಸುಗಳನ್ನು ದಾಖಲಿಸುವ ಕೆಲಸ ಕ್ಷೇತ್ರದಲ್ಲಿ ನಡೆದಿದೆ. ಅಕ್ರಮವಾಗಿಲ್ಲದಿದ್ದರೆ ಬನ್ನಿಹಟ್ಟಿ ರೈಲ್ವೆ ಯಾರ್ಡ್‌ನಲ್ಲಿ ಲೋಡ್ ಮಾಡಿದ್ದ ಅದಿರನ್ನು ಏಕೆ ಅನ್‌ಲೋಡ್ ಮಾಡುತ್ತಿದ್ದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಯರ‍್ರಯ್ಯನಹಳ್ಳಿ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಏಕೆ ಪ್ರಕರಣವನ್ನು ದಾಖಲಿಸುತ್ತಿದ್ದರು? ಬನ್ನಿಹಟ್ಟಿ ರೈಲ್ವೆ ಯಾರ್ಡ್‌ನಲ್ಲಿ ಅಕ್ರಮವಾಗಿ ಅದಿರನ್ನು ಸಾಗಿಸಿರುವ ಘಟನೆಯನ್ನು ಕುರಿತು ಈಗಾಗಲೇ ಕೇಂದ್ರ ಸಚಿವರಾದ ಸೋಮಣ್ಣನವರ ಗಮನಕ್ಕೆ ತಂದಿದ್ದೇವೆ. ಕೂಡಲೇ ಅವರು ರೈಲ್ವೆ ಅಧಿಕಾರಿಗಳಿಗೆ ಕಾನೂನು ರೀತಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇಡೀ ದೇಶದಲ್ಲಿ ಎಲ್ಲ ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಲಾಗಿದೆ. ಆದರೆ, ಸುಶೀಲಾನಗರ ಟೋಲ್‌ಗೇಟ್‌ನಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಇಲ್ಲ. ವಾಹನ ಚಾಲಕರಿಂದ ಹಣದ ಮೂಲಕ ಶುಲ್ಕವನ್ನು ವಸೂಲಿಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಸಂತೋಷ್ ಲಾಡ್ ಹಾಗೂ ತುಕಾರಾಂ ಅವರ ಕ್ಷೇತ್ರದಲ್ಲಿಯೇ ಹಗಲು ದರೋಡೆ ನಡೆಯುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಮಾತನಾಡಿ, ಯರ‍್ರಯ್ಯನಹಳ್ಳಿಯಲ್ಲಿ ಸುಮಾರು ೪ ಎಕರೆ ಜಮೀನಿನಲ್ಲಿ ಸುಮಾರು ೩-೪ ಲಕ್ಷ ಟನ್ ಗ್ರಾವೆಲ್ ಅನ್ನು ಅಕ್ರಮವಾಗಿ ತೆಗೆದು ಸಾಗಿಸಲಾಗಿದೆ. ಈ ಪ್ರಕರಣ ಬಯಲಿಗೆ ಬಂದಮೇಲೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ೧೧೦೦೦ ಟನ್ ಗ್ರಾವೆಲ್ ಅಕ್ರಮವಾಗಿ ಸಾಗಿಸಲಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಸುಮಾರು ₹೧೦.೫೦ ಕೋಟಿಯಷ್ಟು ನಷ್ಟವಾಗಿದೆ. ಅದೇರೀತಿಯಾಗಿ ಬನ್ನಿಹಟ್ಟಿ ರೈಲ್ವೆ ಯಾರ್ಡ್ನಲ್ಲಿ ಕಡಿಮೆ ಗುಣಮಟ್ಟದ ಅದಿರನ್ನು ತಂದು ಹಾಕಿ, ಅಲ್ಲಿ ಹತ್ತಾರು ವರ್ಷಗಳಿಂದ ಸಂಗ್ರಹವಾಗಿದ್ದ ಸುಮಾರು ೫೦೦೦ ಟನ್‌ನಷ್ಟು ಉತ್ಕೃಷ್ಟ ಗುಣಮಟ್ಟದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸಲಾಗಿದೆ. ಇದನ್ನು ಪ್ರಶ್ನಿಸಿದರೆ, ನನ್ನ ಮೇಲೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದಲ್ಲದೆ, ಜಾತಿ ನಿಂದನೆ ಕೇಸನ್ನು ದಾಖಲಿಸಿದ್ದಾರೆ. ಇಷ್ಟೆಲ್ಲಾ ನಡೆದರೂ ತಾಲ್ಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡರಾದ ರಾಮಕೃಷ್ಣ, ಸಂಡೂರು ಮಂಡಲ ಅಧ್ಯಕ್ಷ ಆಶೋಕ್‌ಕುಮಾರ್, ಮುಂತಾದವರು ಉಪಸ್ಥಿತರಿದ್ದರು.