ಕುಮಟಾದಲ್ಲಿ 825 ಮಂದಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ

| Published : Jul 17 2024, 12:47 AM IST

ಕುಮಟಾದಲ್ಲಿ 825 ಮಂದಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ನಿದ್ರೆಯ ಮಂಪರಿನಲ್ಲಿದ್ದ ಜನ ಕಂಗಾಲಾದರೂ ಕೂಡಲೇ ತಮ್ಮ ಅಗತ್ಯ ಸಾಮಗ್ರಿಗಳ ಜತೆಗೆ ರಾತ್ರಿಯೇ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ

ಕುಮಟಾ: ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಘನಾಶಿನಿ ಸಹಿತ ಇತರ ಉಪನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.

ತಾಲೂಕಿನ ದೀವಗಿ ಗ್ರಾಪಂ ವ್ಯಾಪ್ತಿಯ ಕೆಳಗಿನಕೇರಿ, ತಂಡ್ರಕುಳಿ, ಜಡ್ಡಿಮೂಲೆಯಲ್ಲಿ ನೀರು ಮನೆಗಳಿಗೆ ನುಗ್ಗಿ ಗ್ರಾಮಸ್ಥರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ತಡರಾತ್ರಿ ೨ ಗಂಟೆ ಸುಮಾರಿಗೆ ಅಘನಾಶಿನಿ ನದಿ ನೀರು ಜನವಾಸ್ತವ್ಯದೊಳಗೆ ಉಕ್ಕಿ ಬರಲಾರಂಭಿಸಿ ಮನೆಯೊಳಗೆ ನುಗ್ಗಲಾರಂಭಿಸಿದೆ. ನಿದ್ರೆಯ ಮಂಪರಿನಲ್ಲಿದ್ದ ಜನ ಕಂಗಾಲಾದರೂ ಕೂಡಲೇ ತಮ್ಮ ಅಗತ್ಯ ಸಾಮಗ್ರಿಗಳ ಜತೆಗೆ ರಾತ್ರಿಯೇ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ. ರಸ್ತೆಯ ಮೇಲೆ ನೀರು ಸೆಳೆತದಿಂದ ಹರಿಯುತ್ತಿದ್ದುದರಿಂದ ಹಗ್ಗವನ್ನು ಕಟ್ಟಿ ರಸ್ತೆ ದಾಟಲು ಅನುಕೂಲ ಕಲ್ಪಿಸಲಾಯಿತು.

ಅಗ್ನಿಶಾಮಕ ಸಿಬ್ಬಂದಿ ಜತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ತಂಡದವರು ಕೈಜೋಡಿಸಿ ರಾತ್ರಿಯಿಂದಲೇ ಜನರ ಸ್ಥಳಾಂತರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ೩೦೦ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದಾರೆ. ಯೋಜನಾಧಿಕಾರಿ ಕಲ್ಮೇಶ ಎಂ. ಸ್ಥಳದಲ್ಲಿದ್ದು ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ೨೮ ಕುಟುಂಬದ ೧೦೮ ಜನ ಆಶ್ರಯ ಪಡೆದಿದ್ದಾರೆ.

250 ಮನೆಗಳಿಗೆ ನುಗ್ಗಿದ ನೀರು:

ತಾಲೂಕಿನಾದ್ಯಂತ ಸುರಿದ ಮಳೆಗೆ ಪ್ರವಾಹ ಉಂಟಾಗಿರುವ ಜತೆಗೆ ಸಂಬಂಧಿಸಿ ಹಲವೆಡೆ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಸುಮಾರು ೨೫೦ಕ್ಕೂ ಹೆಚ್ಚು ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ.

ಮಳೆಯಿಂದಾಗ ೧೨ ಮನೆಗಳಿಗೆ ತೀವ್ರ ಹಾನಿಯಾಗಿದೆ. ಮೂರೂರಿನಲ್ಲಿ ಅಂಗಡಿಕೇರಿಯ ಗಣಪತಿ ಸತ್ಯನಾರಾಯಣ ಭಟ್ಟ ಅವರ ಜವಳಿ ಅಂಗಡಿ ಹಿಂಭಾಗದ ಧರೆ ಕುಸಿದು ಅಂಗಡಿ ಮೇಲೆ ಬಿದ್ದಿದ್ದು, ಅಪಾರ ಹಾನಿಯಾಗಿದೆ.

ತಾಲೂಕಿನ ೧೦ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಹ ಸಮಸ್ಯೆ ಉಂಟಾಗಿದೆ. ಹಲವು ಕಡೆ ಗ್ರಾಮದ ಒಳರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಸುತ್ತುಬಳಸಿ ಜನ ಓಡಾಡಬೇಕಿದೆ. ಹೆಗಡೆಯಲ್ಲಿ ಜನರನ್ನು ದೋಣಿ ಮೂಲಕ ಸ್ಥಳಾಂತರಿಸಲಾಗಿದೆ. ಕುಮಟಾ ಭಾಗದಲ್ಲಿ ೧೬೪.೪ ಮಿಮೀ, ಕತಗಾಲ ಭಾಗದಲ್ಲಿ ೨೮೮.೨ ಮಿಮೀ ಹಾಗೂ ಗೋಕರ್ಣ ಭಾಗದಲ್ಲಿ ೧೯೫.೪ ಮಿಮೀ ಮಳೆಯಾಗಿದೆ.

ಪ್ರವಾಹದಿಂದ ಜಲಾವೃತವಾದ ಕುಟುಂಬಗಳಿಗೆ ಸಂಬಂಧಿಸಿ ಊರಕೇರಿಯ ಕಡವು, ಮೂರೂರು, ಬೊಗ್ರಿಬೈಲ್, ಕರ್ಕಿಮಕ್ಕಿ, ಹೆಗಡೆ, ಮಣಕೋಣ,ದೀವಗಿ, ಖೈರೆ, ತಾರಿಬಾಗಿಲ, ಶಿರಗುಂಜಿ, ಕೋಡ್ಕಣಿ, ಉಪ್ಪಿನಪಟ್ಟಣ, ಮೇಲಿನಕೇರಿ, ಭಾವಿಕೊಡ್ಲ, ಮಣಕಿ, ಗುಡಕಾಗಾಲ, ತೆಪ್ಪ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕಾಳಜಿ ಕೇಂದ್ರದಲ್ಲಿ ಒಟ್ಟೂ ೨೮೩ ಕುಟುಂಬಗಳ ೮೨೫ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಹಸೀಲ್ದಾರ್‌ ಕಚೇರಿ ಮಾಹಿತಿ ತಿಳಿಸಿದೆ. ಶಾಸಕ ದಿನಕರ ಶೆಟ್ಟಿ ಅಧಿವೇಶನದ ನಿಮಿತ್ತ ಬೆಂಗಳೂರಿನಲ್ಲಿದ್ದರೂ ಕ್ಷೇತ್ರದ ಪ್ರವಾಹ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.