ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಈ ಹಿಂದಿನ ಆಡಳಿತ ವೈದ್ಯಾಧಿಕಾರಿ ಡಾ. ವೆಂಕಟೇಶ್ ಅವರು ಆರೋಗ್ಯ ರಕ್ಷಾ ಸಮಿತಿ ಹಾಗೂ ಆಯುಷ್ಮಾನ್ ಯೋಜನೆ ದುರ್ಬಳಸಿಕೊಂಡು 83 ಲಕ್ಷ ರು. ಮೌಲ್ಯದ ಭ್ರಷ್ಟಾಚಾರ ಎಸಗಿದ್ದಾರೆ. ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಿ, ಸೂಕ್ತ ತನಿಖೆ ನಡೆಸುವಂತೆ ಕರುನಾಡ ಸೇವಕರು ಸಂಘಟನೆ ಜಿಲ್ಲಾಧ್ಯಕ್ಷ ಎಂ.ಬಿ. ನಾಗಣ್ಣಗೌಡ ಆಗ್ರಹಿಸಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಿಗೆ 40 ಸಾವಿರದವರೆಗೆ ಮಾತ್ರ ಹಣಕಾಸು ವೆಚ್ಚ ಮಾಡುವ ಅಧಿಕಾರವಿದೆ. ಅದನ್ನು ಮೀರಿ 83 ಲಕ್ಷ ರು.ಗಳನ್ನು ಆಸ್ಪತ್ರೆಗೆ ಔಷಧ ಹಾಗೂ ಸರ್ಜಿಕಲ್ ಉಪಕರಣ, ಇನ್ನಿತರ ಸಿವಿಲ್ ಕಾಮಗಾರಿಗಳ ಹೆಸರಿನಲ್ಲಿ ಸುಲಿಗೆ ನಡೆಸಲಾಗಿದೆ ಎಂದು ದೂರಿದರು.
ಆಸ್ಪತ್ರೆಗಳಿಗೆ ಅಗತ್ಯ ಔಷಧಗಳನ್ನು ಸರ್ಕಾರವೇ ಪೂರೈಸುತ್ತದೆ. ಕೊರತೆ ಕಂಡುಬಂದಲ್ಲಿ ವಾರ್ಷಿಕ ಅಗತ್ಯತೆ ಅನುಸಾರ ಟೆಂಡರ್ ನಡೆಸಿ ಸರ್ಕಾರ ನಿಗದಿಪಡಿಸಿರುವ ದರದಲ್ಲಿಯೇ ಔಷಧಿಗಳನ್ನು ಖರೀದಿಸಬೇಕು. ಆದರೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಕೊಟೇಷನ್ ಹೆಸರಿನಲ್ಲಿ ತಾವು ಈಗಾಗಲೇ ಒಳ ಒಪ್ಪಂದ ಮಾಡಿಕೊಂಡಿರುವ ಸರ್ಜಿಕಲ್ ಏಜೆನ್ಸಿಗಳಿಗೆ ಪ್ರತ್ಯೇಕವಾಗಿ 99 ಸಾವಿರ ರು.ಗಳ ಕೊಟೇಷನ್ ನೀಡಿದ್ದಾರೆ. ವಾಸ್ತವದಲ್ಲಿ ಈ ಪ್ರಮಾಣದ ಔಷಧಿಗಳನ್ನು ಖರೀದಿಸಿಲ್ಲ. ಬದಲಿಗೆ ಖರೀದಿಸಿದಂತೆ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಲಕ್ಷಾಂತರ ಹಣವನ್ನು ಲಪಟಾಯಿಸಲಾಗಿದೆ ಎಂದು ಆರೋಪಿಸಿದರು.ಕಳೆದ ಜ.17ರಂದು ಆಸ್ಪತ್ರೆಗೆ 97,350 ರು. ವೆಚ್ಚದಲ್ಲಿ ಮೆಡಿಪ್ಲಸ್ ಎಂಬ ಏಜೆನ್ಸಿಯಿಂದ 30 ಡಸ್ಟ್ ಬೀನ್ ಗಳನ್ನು ಪಡೆಯಲಾಗಿದೆ. ಮುಂದುವರಿದು ಜ.22ರಂದು ಅದೇ ಏಜೆನ್ಸಿಯಿಂದ 97, 350 ರು. ವೆಚ್ಚದಲ್ಲಿ ಡಸ್ಟ್ ಬೀನ್‌ಗಳನ್ನು ಪಡೆದಂತೆ ನಕಲಿ ಬಿಲ್ ಸೃಷ್ಟಿಸಲಾಗಿದೆ ಎಂದು ದೂರಿದರು.
ವಾಸ್ತವದಲ್ಲಿ ಈ ಎರಡೂ ಸಹ ಐದೇ ದಿನದ ಅಂತರದಲ್ಲಿ ನಡೆದ ವ್ಯವಹಾರವಾಗಿದೆ. ಈ ಎರಡು ಖರೀದಿಯನ್ನು ಒಟ್ಟುಗೂಡಿಸಿ ಟೆಂಡರ್ ಮೂಲಕ ವಸ್ತುಗಳನ್ನು ಪಡೆಯುವ ಅವಕಾಶವಿದ್ದರೂ ಕೊಟೇಷನ್ ಮೂಲಕ ಖರೀದಿಸಿದಂತೆ ತೋರಿಸಿ ನಕಲಿ ಬಿಲ್ ಮೂಲಕ ಸರ್ಕಾರದ ಹಣವನ್ನು ದೋಚಲಾಗಿದೆ ಎಂದರು.ಸರ್ಕಾರದ ಕೆಟಿಪಿಪಿ ನಿಯಮಗಳನ್ನು ಗಾಳಿಗೆ ತೂರಿ ಸಿವಿಲ್ ಕಾಮಗಾರಿಗಳನ್ನು ನಡೆಸಲಾಗಿದೆ. ಕೊಟೇಷನ್ ಮೂಲಕ ಆಸ್ಪತ್ರೆಗೆ ಬಹಳಷ್ಟು ಔಷಧಗಳು. ಸರ್ಜಿಕಲ್ ಉಪಕರಣಗಳು ಪೀಠೋಪಕರಣಗಳು ಪೂರೈಕೆಯಾಗಿಲ್ಲ. ರೋಗಿಗಳಿಗೆ ಬೆಡ್‌ಶೀಟ್ ಖರೀದಿಸಿದಂತೆ ನಾಲ್ಕು ಪ್ರತ್ಯೇಕ ಕೋಟೇಷನ್ ನಿರ್ವಹಿಸಲಾಗಿದೆ. ಇದನ್ನು ಒಟ್ಟುಗೂಡಿಸಿ ಟೆಂಡರ್ ನಡೆಸುವ ಅವಕಾಶವನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ಖರೀದಿ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.
ಆಸ್ಪತ್ರೆ ಒಳರೋಗಿಗಳಿಗೆ ಊಟ ಪೂರೈಸುವ ಏಜೆನ್ಸಿಯವರು ಅತ್ಯಂತ ಕಳಪೆ ಗುಣಮಟ್ಟದ ಊಟ ನೀಡುತ್ತಿದ್ದರೂ ಕೂಡ ದುಬಾರಿ ದರ ನೀಡಲಾಗುತ್ತಿದೆ. ಸ್ವತಃ ಜಿಲ್ಲಾಧಿಕಾರಿಗಳೇ ಈ ಕುರಿತು ವರದಿ ನೀಡುವಂತೆ ಆದೇಶಿಸಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದರು.ಟೆಂಡರ್ ನಡೆಸಿ ಎರಡು ವರ್ಷವಾದರೂ ಈವರೆಗೂ ಹೊಸದಾಗಿ ಟೆಂಡರ್ ಸಹ ನಡೆಸಿಲ್ಲ. ಇದಲ್ಲದೆ ನಿಯಮಬಾಹಿರವಾಗಿ ಈ ಏಜೆನ್ಸಿಗೆ ಜಿಎಸ್‌ಟಿ ಹಣ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಈ ಹಣವನ್ನು ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ವೆಂಕಟೇಶ್ ಅವರ ವೇತನದಿಂದಲೇ ಕಟಾಯಿಸುವಂತೆ ಆಗ್ರಹಿಸಿದರು.
ಆಸ್ಪತ್ರೆಯಲ್ಲಿ ಈಗ ಕೀಲು ಮತ್ತು ಮೂಳೆ ತಜ್ಞವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ವೆಂಕಟೇಶ್ ಬ್ರಹ್ಮಾಂಡ ಭಷ್ಟಾಚಾರ ಎಸಗಿರುವ ಹಿನ್ನೆಲೆಯಲ್ಲಿ ಅವರನ್ನು ಈ ಕೂಡಲೇ ಅಮಾನತ್ತುಗೊಳಿಸಬೇಕು. ಈ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಇಲಾಖಾ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.