ಕನಕಪುರ ಕ್ಷೇತ್ರದಲ್ಲಿ ಶೇ 84.73 ಮತದಾನ

| Published : Apr 28 2024, 01:18 AM IST

ಸಾರಾಂಶ

ಕನಕಪುರ: ರಾಜ್ಯದಲ್ಲೇ ಹೈ ವೋಲ್ಟೇಜ್ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿದೆ.

ಕನಕಪುರ: ರಾಜ್ಯದಲ್ಲೇ ಹೈ ವೋಲ್ಟೇಜ್ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿದೆ.

ತಾಲೂಕಿನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಮತದಾನ ಚುರುಕುಗೊಂಡಿತ್ತು. ಮತದಾರರು ಹುರುಪಿನಿಂದ ಮತ ಚಲಾಯಿಸಲು ಮತಗಟ್ಟೆಗಳತ್ತ ಬಂದು ಮತ ಚಲಾಯಿಸಿದರು.

ಮಧ್ಯಾಹ್ನ ಬಿರುಬಿಸಿಲಿನಿಂದ ಮತದಾನ ಮಂದಗತಿಯಲ್ಲಿ ಸಾಗಿತ್ತು. ಬಿಸಿಲಿನ ತಾಪಕ್ಕೆ ಜನ ಮತಗಟ್ಟೆಗಳತ್ತ ಬರದೆ, ಮನೆಯಲ್ಲೇ ಉಳಿದಿದ್ದರು. ಮತ್ತೆ 3 ಗಂಟೆ ಬಳಿಕ ಚುರುಕುಗೋಂಡು ಸಂಜೆ 6 ಗಂಟೆಯವರೆಗೂ ಬಿರುಸಿನ ಮತದಾನ ನಡೆಯಿತು. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಶೇ. 84.73 ಮತದಾನ ನಡೆದಿದೆ.

ತಾಲೂಕಾದ್ಯಂತ ಶಾಂತಿಯುತ ಮತದಾನ ನಡೆದಿದೆ. ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರವೆಂದ ಹೆಸರಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳಿಗೂ ಅವಕಾಶ ಕೊಡದೆ ಶಾಂತಿಯುತ ಮತದಾನ ನಡೆಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿತ್ತು. ತಾಲೂಕಿನ 297 ಮತಗಟ್ಟೆಗಳಲ್ಲೂ ಸಿಸಿಟಿವಿ ಅಳವಡಿಸಿ ಮತಗಟ್ಟೆಗಳಲ್ಲಿ ಒಬ್ಬರು ಹೋಂ ಗಾರ್ಡ್, ಪೊಲೀಸ್ ಸಿಬ್ಬಂದಿ, ಹಾಗೂ ಅರಸೇನಾಪಡೆ ಸಿಬ್ಬಂದಿ ನಿಯೋಜಿಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿತ್ತು.

ತಾಲೂಕಿನ 297 ಮತಗಟ್ಟೆಗಳ ಪೈಕಿ ಬೆಳಗ್ಗೆ 9 ಮತಗಟ್ಟೆಗಳಲ್ಲಿ ವಿವಿ ಪ್ಯಾಟ್ ಗಳಲ್ಲಿ ದೋಷ ಕಂಡು ಬಂದಿತ್ತು. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಸರಿಪಡಿಸಿದರು. ತಾಲೂಕಿನ ಹನುಮನಹಳ್ಳಿ ಮತಗಟ್ಟೆಯಲ್ಲಿ ಕೊನೆ ಕ್ಷಣದಲ್ಲಿ ಇವಿಎಂ ಯಂತ್ರದಲ್ಲಿ ದೋಷ ಕಂಡು ಬಂದು, ಕೂಡಲೇ ಬದಲಿಸಿದರೂ, ಮತಗಟ್ಟೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ವಿಳಂಬವಾದರೂ ಮತದಾರರು ತಾಳ್ಮೆಯಿಂದ ಕಾದು ಸರದಿಯಲ್ಲಿ ನಿಂತು ಮತದಾನ ಮಾಡಿದರು.

ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಚೇತನರು ವಯೋವೃದ್ಧರಿಗೆ ಮತದಾನ ಮಾಡಲು ವೀಲ್ ಚೇರ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಉದ್ಯೋಗ ಅರಸಿ ಬೆಂಗಳೂರು, ಮೈಸೂರು ಮಹಾನಗರಗಳಿಗೆ ವಲಸೆ ಹೋಗಿದ್ದ ಮತದಾರರು ಸ್ವಗ್ರಾಮಕ್ಕೆ ಬಂದು ಮತದಾನ ಮಾಡಿದರು. ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿದ್ದರೂ ಸ್ವಂತ ವಾಹನಗಳಲ್ಲೇ ಗ್ರಾಮ ಗಳಿಗೆ ಬಂದು ಮತದಾನದ ಹಕ್ಕು ಚಲಾಯಿಸಿದರು.

ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಎಲ್ಲೆಡೆ ಶಾಂತಿಯುತ ಮತದಾನ ನಡೆದಿದ್ದು ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆ ಸೇರಿದೆ. ಮತಗಟ್ಟೆ ಅಧಿಕಾರಿಗಳು ವಿದ್ಯುನ್ಮಾನ ಮತ ಯಂತ್ರ ಗಳನ್ನು ಸೀಲ್ ಮಾಡಿ ಸೂಕ್ತ ಭದ್ರತೆಯೊಂದಿಗೆ ರೂರಲ್ ಕಾಲೇಜು ಆವರಣದಲ್ಲಿರುವ ಕಂಟ್ರೋಲ್ ರೂಂಗೆ ತಂದು ಅಲ್ಲಿಂದ ಜಿಲ್ಲಾ ಕೇಂದ್ರದ ಕಂಟ್ರೋಲ್ ರೂಂಗೆ ಕೊಂಡೊಯ್ಯಲಾಗಿದೆ. ಜೂನ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದ್ದು ವಿಜಯ ಮಾಲೆ ಯಾರ ಕೊರಳಿಗೆ ಧರಿಸಲಿದೆಯೋ ಕಾದು ನೋಡಬೇಕಿದೆ.ಬಾಕ್ಸ್‌ ವಿತ್‌ ಫೋಟೋ........

ಪಟ್ಟು ಹಿಡಿದು ಮತ ಚಲಾಯಿಸಿದ ಶತಾಯಿಷಿ

ಮತದಾನ ಮಾಡಲು ನಿರಾಸಕ್ತಿ, ಮತ್ತಿನ್ನೇನೋ ನೆಪ ಹೇಳುವವರನ್ನು ನಾಚಿಸುವಂತೆ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಗುಡ್ಡೆ ವೀರನಹೊಸಹಳ್ಳಿಯ ಶತಾಯುಷಿ ವೆಂಕಟಮ್ಮ ರಾಮನಗರ ವಿಧಾನಸಭಾ ಕ್ಷೇತ್ರದ ಮರಳವಾಡಿ ಗ್ರಾಮದಲ್ಲಿ ನೆಲೆಸಿರುವ ಈಕೆ, ಮಗನ ಕುಟುಂಬದೊಂದಿಗೆ ಮತದಾನ ಮಾಡಲೇಬೇಕೆಂದು ಪಟ್ಟು ಹಿಡಿದು ಬಾಡಿಗೆ ಕಾರು ಮಾಡಿ ಕೊಂಡು ಸ್ವಗ್ರಾಮ ಗುಡ್ಡೆ ವೀರನಹೊಸಹಳ್ಳಿಗೆ ತಮ್ಮ ಮೊಮ್ಮಗ ರಾಜಾಚಾರಿ ಜೊತೆಯಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಿ ಇಂದಿನ ಯುವಜನತೆಗೆ ಮಾದರಿಯಾದರು.ಕೆ ಕೆ ಪಿ ಸುದ್ದಿ 01:ಕನಕಪುರ ತಾಲೂಕಿನ ಗುಡ್ಡೆ ವೀರನಹೊಸಹಳ್ಳಿಯಲ್ಲಿ ಶತಾಯುಷಿ ವೆಂಕಟಮ್ಮ 40 ಕಿಲೋ ಮೀಟರದ ರಾಮನಗರ ತಾಲೂಕಿನ ಮರಳವಾಡಿ ಗ್ರಾಮದಿಂದ ಬಂದು ಮತ ಚಲಾಯಿಸಿದರು.