ಸಾರಾಂಶ
ಪರಿಶಿಷ್ಟ ಪಂಗಡ ಜನಾಂಗ ಹೆಚ್ಚಾಗಿರುವ ಜಿಲ್ಲೆಯ ಆಯ್ದ 87 ಗ್ರಾಮಗಳನ್ನು ಪ್ರಧಾನಮಂತ್ರಿ ಜನ ಜಾತಿಯ ಉನ್ನತ ಗ್ರಾಮ ಅಭಿಯಾನದಡಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿದ್ದು, ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ
ಚಿತ್ರದುರ್ಗ : ಪರಿಶಿಷ್ಟ ಪಂಗಡ ಜನಾಂಗ ಹೆಚ್ಚಾಗಿರುವ ಜಿಲ್ಲೆಯ ಆಯ್ದ 87 ಗ್ರಾಮಗಳನ್ನು ಪ್ರಧಾನಮಂತ್ರಿ ಜನ ಜಾತಿಯ ಉನ್ನತ ಗ್ರಾಮ ಅಭಿಯಾನದಡಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿದ್ದು, ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀಸಲಿರಿಸಿದ ₹79,156 ಕೋಟಿಗಳಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ದೇಶದ 63,000 ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೇಂದ್ರ ಬುಡಕಟ್ಟು ಮಂತ್ರಾಲಯ ಈ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ಧಾರಿ ಹೊತ್ತಿದೆ. ದೇಶದ 5 ಕೋಟಿ ಜನರಿಗೆ ಯೋಜನೆಯಿಂದ ಅನುಕೂಲವಾಗಲಿದೆ. 2024-25 ರಿಂದ 2028-29ನೇ ಸಾಲಿನ ವರೆಗೆ 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
2024-25 ರಿಂದ 2025-26ನೇ ಸಾಲಿಗೆ ಮೊದಲ ಹಂತದಲ್ಲಿ ₹4000 ಕೋಟಿ ಅನುದಾನವನ್ನು ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ ನಿಗದಿ ಮಾಡಲಾಗಿದೆ ಎಂದರು.
ಈ ಅಭಿಯಾನದಡಿ ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದ ಜನಾಂಗದವರು ಹೆಚ್ಚಾಗಿರುವ 87 ಗ್ರಾಮಗಳನ್ನು ಆಯ್ಕೆ ಮಾಡಿ ಭೌತಿಕ ಗುರಿ ನಿಗದಿ ಪಡಿಸಲಾಗಿದ್ದು, 17 ವಿವಿಧ ಇಲಾಖೆಗಳು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿವೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪಕ್ಕಾ ಮನೆ, ಸಂಪರ್ಕ ರಸ್ತೆಗಳು, ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ನೀರು ಸರಬರಾಜು , ವಿದ್ಯುತ್ ಇಲಾಖೆಯಿಂದ ಮನೆಗಳ ವಿದ್ಯುದೀಕರಣ ಒದಗಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಆಫ್-ಗ್ರಿಡ್ ಸೌರ, ಹೊಸ ಸೌರ ವಿದ್ಯುತ್ ಯೋಜನೆ, ಆರೋಗ್ಯ ಇಲಾಖೆಯಿಂದ ಸಂಚಾರಿ ವೈದ್ಯಕೀಯ ಘಟಕಗಳು, ರಾಷ್ಟ್ರೀಯ ಆರೋಗ್ಯ ಮಿಷನ್, ಆಯುಷ್ಮಾನ್ ಕಾರ್ಡ್, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯಿಂದ ಎಲ್‍ಪಿಜಿ ಪಿಎಂ ಉಜ್ವಲ ಯೋಜನೆಯಡಿ ಸಂಪರ್ಕಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ಪೋಷಣ್ ಅಭಿಯಾನ್, ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಆಯುಷ್ ಇಲಾಖೆಯಿಂದ ಪೋಷಣ್ ವಾಟಿಕಾಸ್, ಟೆಲಿಕಾಂ ಇಲಾಖೆಯಿಂದ ಯುನಿವರ್ಸಲ್ ಸೇವೆ, ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಸ್ಕಿಲ್ ಇಂಡಿಯಾ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಇಲಾಖೆಯಿಂದ ಡಿಜಿಟಲ್ ಇನಿಶಿಯೇಟಿವ್ಸ್, ಕೃಷಿ ಇಲಾಖೆಯಿಂದ ಸುಸ್ಥಿರ ಕೃಷಿ ಉತ್ತೇಜನ, ಮೀನುಗಾರಿಕೆ ಇಲಾಖೆಯಿಂದ ಮೀನು ಸಂಸ್ಕೃತಿಗೆ ಬೆಂಬಲ, ಪಶುಸಂಗೋಪನೆ ಇಲಾಖೆಯಿಂದ ಜಾನುವಾರು ಪಾಲನೆ, ಪಂ. ರಾಜ್ ಇಲಾಖೆಯಿಂದ ಸಾಮರ್ಥ್ಯ ಕಟ್ಟಡ, ಪ್ರವಾಸೋದ್ಯಮ ಇಲಾಖೆಯಿಂದ ಟ್ರೈಬಲ್ ಹೋಂ ಸ್ಟೇಸ್, ಸ್ವದೇಶ್ ದರ್ಶನ, ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ ಅನುಷ್ಠಾನಗೊಳ್ಳಲಿವೆ ಎಂದು ತಿಳಿಸಿದರು.
ಅಭಿಯಾನದಡಿ ಜಿಲ್ಲೆಯಲ್ಲಿ 100 ಬುಡಕಟ್ಟು ಬಹು ಉಪಯೋಗಿ ಮಾರ್ಕೆಟಿಂಗ್ ಕೇಂದ್ರಗಳು, ಆಶ್ರಮ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ಸರ್ಕಾರಿ ಅಥವಾ ರಾಜ್ಯ ಬುಡಕಟ್ಟು ವಸತಿ ಶಾಲೆಗಳ ಸೌಕರ್ಯ ಸುಧಾರಿಸುವುದು, ಕೌನ್ಸೆಲಿಂಗ್ ಬೆಂಬಲ, ಅರಣ್ಯ ಹಕ್ಕು ಕಾಯ್ದೆ- 2006 ಮತ್ತು ಸಮುದಾಯ ಅರಣ್ಯ ಹಕ್ಕು ನಿರ್ವಹಣೆ ಮಧ್ಯಸ್ಥಿಕೆಗಳಿಗೆ ಬೆಂಬಲ, ಯೋಜನಾ ನಿರ್ವಹಣಾ ನಿಧಿಗಳು ಉತ್ಪನ್ನ ಪ್ರದರ್ಶನ ನೀಡುವ ಬುಡಕಟ್ಟು ಜಿಲ್ಲೆಗಳಿಗೆ ಪ್ರೋತ್ಸಾಹ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.