ಸಾರಾಂಶ
ಮಂಜುನಾಥ ಕೆ.ಎಂ.ಕನ್ನಡಪ್ರಭವಾರ್ತೆ ಮಂಡ್ಯ88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿನಾಡು ಬಳ್ಳಾರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ 68 ವರ್ಷಗಳ ಬಳಿಕ ಗಣಿನಾಡಿಗೆ ನುಡಿತೇರು ಎಳೆಯುವ ಅವಕಾಶ ಸಿಕ್ಕಂತಾಗಿದೆ.ನಗರದಲ್ಲಿ ಶನಿವಾರ ರಾತ್ರಿ ಖಾಸಗಿ ಹೋಟೆಲ್ ನಲ್ಲಿ ಜರುಗಿದ ಎಲ್ಲ ಜಿಲ್ಲೆಗಳ ಕಸಾಪ ಪ್ರತಿನಿಧಿಗಳ ಸಭೆಯಲ್ಲಿ ಗಡಿನಾಡು ಬಳ್ಳಾರಿಯಲ್ಲಿ ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು. ಬಳ್ಳಾರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಅವಕಾಶ ಕೋರಿ ಕಳೆದ ಒಂದು ದಶಕದಿಂದಲೂ ಪ್ರಯತ್ನ ನಡೆದಿತ್ತು. ಆದರೆ, ರಾಜಕೀಯ ಪ್ರಭಾವ ಮತ್ತಿತರ ಕಾರಣಗಳಿಂದ ಸಮ್ಮೇಳನ ಬೇರೆ ಜಿಲ್ಲೆಗಳ ಪಾಲಾಗುತ್ತಿತ್ತು. ಕಳೆದ ಬಾರಿ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ 87ನೇ ಸಮ್ಮೇಳನ ಬಳ್ಳಾರಿಗೆ ನೀಡಬೇಕು ಎಂಬ ತೀವ್ರ ಒತ್ತಾಯ ಕೇಳಿಬಂತು. ಆದರೆ ಕೊನೆ ಗಳಿಗೆಯಲ್ಲಿ ಮಂಡ್ಯದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು. ಇದರಿಂದ ಬಳ್ಳಾರಿ ಜನರಿಗೆ ತೀವ್ರ ನಿರಾಸೆಯಾಗಿತ್ತು. ಈ ಬಾರಿ ಚಿಕ್ಕಮಗಳೂರು, ಬಳ್ಳಾರಿ ಅಥವಾ ದೆಹಲಿಯಲ್ಲಿ ಸಮ್ಮೇಳನ ನಡೆಸುವ ಕುರಿತು ಚರ್ಚೆಗಳು ಸಾಗಿದ್ದವು. ಆದರೆ ಅಂತಿಮವಾಗಿ ಮುಂದಿನ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಸಲು ತೀರ್ಮಾನಿಸಿರುವುದು ಬಿಸಿಲೂರು ಜನರಲ್ಲಿ ಸಂತಸ ತಂದಿದೆ.1926 ಹಾಗೂ 1938ರಲ್ಲಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆದಿತ್ತು. ಸ್ವಾತಂತ್ರ್ಯಾನಂತರ 1958 ರಲ್ಲಿ ವಿ.ಕೃ.ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ನಡೆದಿತ್ತು. ಸುದೀರ್ಘ 66 ವರ್ಷಗಳ ಬಳಿಕ ಬಳ್ಳಾರಿಗೆ ಸಾಹಿತ್ಯ ಸಮ್ಮೇಳನದ ಅವಕಾಶ ದಕ್ಕಿದೆ.