ಶಕ್ತಿ ಯೋಜನೆಯಡಿ ಗದಗ ಜಿಲ್ಲೆಯಲ್ಲಿ 9.33 ಕೋಟಿ ಮಹಿಳೆಯರ ಉಚಿತ ಪ್ರಯಾಣ

| Published : May 18 2025, 01:28 AM IST

ಶಕ್ತಿ ಯೋಜನೆಯಡಿ ಗದಗ ಜಿಲ್ಲೆಯಲ್ಲಿ 9.33 ಕೋಟಿ ಮಹಿಳೆಯರ ಉಚಿತ ಪ್ರಯಾಣ
Share this Article
  • FB
  • TW
  • Linkdin
  • Email

ಸಾರಾಂಶ

ಸ್ತ್ರೀಯರಲ್ಲಿ ಆತ್ಮವಿಶ್ವಾಸ ಬೆಳೆಸಿ, ಆರ್ಥಿಕ ಸ್ವಾವಲಂಬನೆಗೆ ಹಾದಿ ಹಾಕುವಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಕ್ರಾಂತಿಕಾರಿ ಹೆಜ್ಜೆಯಾಗಿದೆ.

ಶಿವಕುಮಾರ ಕುಷ್ಟಗಿ

ಗದಗ:ಸ್ತ್ರೀಯರಲ್ಲಿ ಆತ್ಮವಿಶ್ವಾಸ ಬೆಳೆಸಿ, ಆರ್ಥಿಕ ಸ್ವಾವಲಂಬನೆಗೆ ಹಾದಿ ಹಾಕುವಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಕ್ರಾಂತಿಕಾರಿ ಹೆಜ್ಜೆಯಾಗಿದೆ.

ಮಹಿಳಾ ಸಬಲೀಕರಣದ ನವದಿಗಂತವನ್ನು ಪರಿಚಯಿಸುತ್ತಿರುವ ಈ ಯೋಜನೆ, ನಾಡಿನ ಮಹಿಳೆಯರ ಜೀವನ ವಿಧಾನದಲ್ಲಿ ಸ್ಥಿರ ಬದಲಾವಣೆಗೆ ಕಾರಣವಾಗುತ್ತಿದೆ. ಶಕ್ತಿ ಯೋಜನೆಯಡಿ, ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ, ಸಾಮಾನ್ಯ, ವೇಗದೂತ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುತ್ತಿದ್ದು, ಈ ಯೋಜನೆಯಡಿ ಗದಗ ಜಿಲ್ಲೆಯಲ್ಲಿ ಮಾರ್ಚ್‌ 2025ರ ಅಂತ್ಯದವರೆಗೆ 9.33 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದಾರೆ.

ಶಕ್ತಿ ಯೋಜನೆಯು 11-6-2023 ಜಿಲ್ಲೆಯಲ್ಲಿ ಜಾರಿಯಾದ ನಂತರ ಗದಗ ಜಿಲ್ಲೆಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ಉಚಿತ ಪ್ರಯಾಣದ ಒಟ್ಟು ರು. 296.70 ಕೋಟಿ ಮೊತ್ತದ ಉಚಿತ ಟಿಕೆಟ್‌ಗಳನ್ನು ವಿತರಣೆ ಮಾಡಲಾಗಿದ್ದು, ಈ ಮೊತ್ತವು ರಸ್ತೆ ಸಾರಿಗೆ ಸಂಸ್ಥೆಗೆ ಪ್ರಮುಖ ಆದಾಯವಾಗಿದೆ ಎಂದರೆ ತಪ್ಪಾಗಲಾರದು.

ಗದಗ ತಾಲೂಕಿನಲ್ಲಿ 2,72,76281 ಮಹಿಳೆಯರು ಉಚಿತ ಪ್ರಯಾಣಿಸಿದ್ದು, ₹ 87,31,94,608 ಗಳ ಶೂನ್ಯ ಮೊತ್ತದ ಟಿಕೆಟ್ ವಿತರಣೆ ಮಾಡಲಾಗಿದೆ. ಇದೇ ತರಹ ರೋಣದಲ್ಲಿ 1,41,10,356 ಮಹಿಳೆಯರು, ₹ 43,26,92,225 ಗಳ‌ ಮೊತ್ತದ ಶೂನ್ಯ ಟಿಕೆಟ್ ವಿತರಣೆಯಾಗಿದೆ. ಲಕ್ಷ್ಮೇಶ್ವರದಲ್ಲಿ 1,29,37,071 ಮಹಿಳೆಯರು, ₹36,16,07,713 ಗಳ ಮೊತ್ತದ ಶೂನ್ಯ ಟಿಕೆಟ್ ವಿತರಣೆಯಾಗಿದೆ. ನರಗುಂದ ತಾಲೂಕಿನಲ್ಲಿ 1,25,37,379 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ₹ 42,89,47,797 ಗಳ ಟಿಕೆಟ್ ವಿತರಿಸಲಾಗಿದೆ. ಮುಂಡರಗಿ ತಾಲೂಕಿನಲ್ಲಿ 1,20,63,703 ಮಹಿಳಾ ಪ್ರಯಾಣಿಕರು ಈವರೆಗೆ ಪ್ರಯಾಣ ಬೆಳೆಸಿದ್ದು, ₹ 3,76,59,861 ಶೂನ್ಯ ಟಿಕೆಟ್ ವಿತರಿಸಿದೆ. ಗಜೇಂದ್ರಗಡ ತಾಲೂಕಿನಲ್ಲಿ 1,02,21,190 ಪ್ರಯಾಣಿಕರು ಪ್ರಯಾಣಿಸಿದ್ದು, ₹ 37,98,94,207 ಮೊತ್ತದ ಶೂನ್ಯ ಟಿಕೆಟ್ ವಿತರಣೆಯಾಗಿದೆ. ಶಿರಹಟ್ಟಿ ತಾಲೂಕಿನಲ್ಲಿ 41,29,247 ಪ್ರಯಾಣಿಸಿದ್ದು, ₹ 11,40,48,862 ಮೊತ್ತದ ಶೂನ್ಯ ಟಿಕೆಟ್ ವಿತರಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟಾರೆ 9,32,75,327 ಮಹಿಳಾ ಪ್ರಯಾಣಿಕರು ಮಾರ್ಚ್ ಅಂತ್ಯದವರೆಗೆ ಪ್ರಯಾಣ ಮಾಡುವ ಮೂಲಕ ₹ 296,69,84,274 ಗಳ‌ ಮೊತ್ತದ ಶೂನ್ಯ ಟಿಕೆಟ್ ಪಡೆದು ಪ್ರಯಾಣಿಸುವ ಮೂಲಕ ಗದಗ ಜಿಲ್ಲೆಯಲ್ಲಿ ಮಹಿಳೆಯರು ದಾಖಲೆಯ ಪ್ರಯಾಣ ಮಾಡಿದ್ದಾರೆ.

ಶಕ್ತಿ ಯೋಜನೆಯಿಂದ ನಾಡಿನ ಮಹಿಳೆಯರಿಗೆ ದೂರದ ಪ್ರದೇಶಗಳಿಗೆ ತೆರಳುವ, ಪ್ರವಾಸ ಮಾಡುವ ಕನಸುಗಳು ನನಸಾಗಿವೆ. ಶಕ್ತಿ ಯೋಜನೆ ಪ್ರವಾಸಕ್ಕೆ ಅವಕಾಶ‌ ಲಭ್ಯವಾಗಿದೆ. ಇದರಿಂದ ರಾಜ್ಯದ ಪ್ರವಾಸೋದ್ಯಮಕ್ಕೂ ಸಹ ಅಪಾರ ಪ್ರಮಾಣದಲ್ಲಿ ಸಹಕಾರಿಯಾಗಿದೆ.ಶಕ್ತಿ ಯೋಜನೆ ಕರ್ನಾಟಕದ ಮಹಿಳೆಯರಿಗೆ ಕೇವಲ ಆರ್ಥಿಕ ನೆರವನ್ನಷ್ಟೇ ನೀಡದೆ, ಜೀವನವನ್ನು ರೂಪಿಸಿಕೊಳ್ಳುವ ಶಕ್ತಿ, ಆತ್ಮವಿಶ್ವಾಸ ಮತ್ತು ಅವಕಾಶಗಳ ದಾರಿ ಒದಗಿಸುತ್ತಿದೆ. ಈ ಯೋಜನೆಯ ಪರಿಣಾಮವಾಗಿ ಸಾವಿರಾರು ಮಹಿಳೆಯರು ತಮ್ಮ ಕುಟುಂಬಗಳನ್ನೂ, ಸಮಾಜವನ್ನೂ ಬದಲಾಯಿಸುವ ಶಕ್ತಿ ಕೇಂದ್ರಗಳಾಗಿ ರೂಪುಗೊಳ್ಳುತ್ತಿದ್ದಾರೆ.ಶಕ್ತಿ ಯೋಜನೆ ಜಾರಿಯಿಂದಾಗಿ ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಕುಟುಂಬ ಸಮೇತರಾಗಿ ಪ್ರಯಾಣಿಸಲು ತುಂಬಾ ಅನುಕೂಲವಾಗಿದೆ. ಅನೇಕ ವರ್ಷಗಳಿಂದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಆಸೆ ಇತ್ತು. ಆದರೆ ಹಣಕಾಸಿನ ತೊಂದರೆಯಿಂದ ಇದು ಸಾಧ್ಯವಾಗುತ್ತಿರಲಿಲ್ಲ. ಇದೀಗ ಶಕ್ತಿ ಯೋಜನೆ ಜಾರಿಯಿಂದಾಗಿ ವಿವಿಧ ಸ್ಥಳಗಳಿಗೆ ಕುಟುಂಬ ಸಮೇತ ಭೇಟಿ ಕೊಡಲು ಅನುಕೂಲವಾಗಿದೆ ಮುಂಡರಗಿಯ ನೀಲವ್ವ ಭಾವಿಮನಿ ಹೇಳಿದರು.

ಅನೇಕ ವರ್ಷಗಳಿಂದ ರಾಜ್ಯದ ವಿವಿಧ ಪ್ರವಾಸಿ ತಾಣ, ಕ್ಷೇತ್ರಗಳಿಗೆ ಭೇಟಿ ನೀಡುವ ಆಸೆಯಿತ್ತು. ಶಕ್ತಿ ಯೋಜನೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ರಾಜ್ಯದಾದ್ಯಂತ ಸಂಚರಿಸಿದ್ದಾರೆ. ಜೊತೆಗೆ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಲು ತುಂಬಾ ಅನುಕೂಲವಾಗಿದೆ ಗದುಗಿನ ಲಕ್ಷ್ಮೀ ಬೆಟಗೇರಿ ಹೇಳಿದರು.