ಕನ್ನಡಪ್ರಭ ವಾರ್ತೆ ಮಂಡ್ಯ
ರಾಷ್ಟ್ರದಲ್ಲಿ ಸುಮಾರು ೩೭ ಕೋಟಿ ಮಂದಿ ಮಾದಕ ವ್ಯಸನಿಗಳಿದ್ದಾರೆ. ವಾರ್ಷಿಕ ಸುಮಾರು ೯ ಕೋಟಿ ಮಂದಿ ಮಾದಕ ವ್ಯಸನಿಗಳು ಸಾವನ್ನಪ್ಪುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ. ಹನುಮಂತು ಆತಂಕ ವ್ಯಕ್ತಪಡಿಸಿದರು.ಕೃಷಿಕ್ ಅಲಯನ್ಸ್ ಸಂಸ್ಥೆ, ಮಾಂಡವ್ಯ ಅಲಯನ್ಸ್ ಸಂಸ್ಥೆ, ದ್ವಾರಕ ಅಲಯನ್ಸ್ ಸಂಸ್ಥೆ, ಜಿಲ್ಲಾ ಆರೋಗ್ಯ ಇಲಾಖೆ, ಮಾಜಿ ಪುರಸಭೆ, ಸರ್ಕಾರಿ ಪದವಿಪೂರ್ವ ಕಾಲೇಜು ಇವರ ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ವಿಶ್ವ ಮಾದಕ ವಸ್ತು ಸಮಸ್ಯೆ ಮುಂದುವರಿದ ಸಮಸ್ಯೆಗಳು ನವೀನ ಪ್ರಕ್ರಿಯೆಗಳು ಎಂಬ ಘೋಷವಾಕ್ಯದೊಂದಿಗೆ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ, ಜಾಗೃತಿ ಜಾಥಾ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದಲ್ಲಿ ೨.೫ ಲಕ್ಷ ಕೋಟಿ ರು. ಮಾದಕ ವಸ್ತುಗಳ ವ್ಯವಹಾರ ನಡೆಯುತ್ತಿದೆ. ಕರ್ನಾಟಕದ ಬಜೆಟ್ ೩ ಲಕ್ಷ ಕೋಟಿ ರು.ಗಳಾಗಿದ್ದು, ದೇಶದಲ್ಲಿ ಮಾದಕ ವಸ್ತುಗಳ ಮಾರಾಟ ವ್ಯವಹಾರ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ವಿಷಾದಿಸಿದರು.ರಾಜ್ಯದಲ್ಲಿ ಸುಮಾರು ೧೫ಸಾವಿರ ಕೋಟಿ ರು. ನಷ್ಟು ಮಾದಕ ವಸ್ತುಗಳ ವ್ಯವಹಾರ ನಡೆಯುತ್ತಿದೆ. ಡ್ರಗ್ಸ್, ಗಾಂಜಾ, ಅಫೀಮು, ಮತ್ತು ಬರುವಂತಹ ವಸ್ತುಗಳು, ದ್ರವ್ಯಗಳು, ಎಗ್ಗಿಲ್ಲದೆ ನಡೆಯುತ್ತದೆ. ಇದು ಅಪಾಯಕಾರಿ ಬೆಳೆವಣಿಗೆ. ಮಂಡ್ಯ ಜಿಲ್ಲೆಯಲ್ಲೂ ಗಾಂಜಾ, ಮಾದಕವಸ್ತುಗಳ ಮಾರಾಟ ಜಾಲವಿದೆ ಎಂದರು.
ಮಾದಕ ವಸ್ತುಗಳ ಬಳಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು. ಅವರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯ, ಒಂದು ಬಾರಿ ಮಾದಕ ವಸ್ತುಗಳ ಸೇವನೆಗೆ ದಾಸರಾದರೆ ಮುಗಿಯಿತು, ಸದಾ ಅದನ್ನೇ ಬೇಡುತ್ತದೆ, ಯುವಕರನ್ನೇ ಹೆಚ್ಚು ಟಾರ್ಗೆಟ್ ಮಾಡಿ ಉಚಿತವಾಗಿ ನೀಡಿ ನಂತರ ಹಣ ಪಡೆದು ಕೊಂಡುಕೊಳ್ಳುವಂತೆ ಮಾಡುತ್ತಾರೆ. ಈ ಬಗ್ಗೆ ಯುವಕರು ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಆಶಾಲತಾ ಮಾತನಾಡಿ, ಬೀಡಿ, ಸಿಗರೇಟ್, ಮಾದಕವಸ್ತುಗಳ ಸೇವನೆ ಬಳಕೆಯಿಂದ ಚಿಕ್ಕ ವಯಸ್ಸಿಗೆ ಹೃದಯಾಘಾತ, ಕ್ಷಯ ರೋಗ ಹೆಚ್ಚಾಗುತ್ತಿದೆ, ೧ವಾರ ಜ್ವರವಿದ್ದರೆ, ೨ವಾರ ಕೆಮ್ಮಿದ್ದರೆ ಕ್ಷಯ ರೋಗಗಳ ಲಕ್ಷಣವಾಗಿರ ಬಹುದು. ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದರು.
ಈ ವೇಳೆ ನಗರಸಭೆ ಆವರಣದಲ್ಲಿ ಸೇರಿದ ಸಂಘಟಕರು ಮತ್ತು ವಿದ್ಯಾರ್ಥಿಗಳು, ಮಾದಕ ವಸ್ತುಗಳ ಬಳಕೆ ವಿರುದ್ದ ಘೋಷಣೆ ಕೂಗಿ ಮೈಸೂರು ಬೆಂಗಳೂರು ಹೆದ್ದಾರಿಯ ಬದಿಯಲ್ಲಿ ಜಾಥಾ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಿದರು. ಗಾಯಕರು ಗೀತೆಗಳನ್ನು ಹಾಡಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಸನ್ನಕುಮಾರ್, ಪ್ರಾಂಶುಪಾಲ ಗುರುಲಿಂಗೇಗೌಡ, ತಂಬಾಕು ಕೋಶಾಧಿಕಾರಿ ತಿಮ್ಮರಾಜು, ಮಾಂಡವ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಶಿವಕುಮಾರ್, ದ್ವಾರಕ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಪ್ರವಿತಾನಾಗರಾಜ್, ಜಿಲ್ಲಾ ಖಜಾಂಚಿ ಧರಸಗುಪ್ಪೆ ಧನಂಜಯ್, ಪ್ರೊ.ಡೇವಿಡ್ ಸೇರಿದಂತೆ ಹಲವರಿದ್ದರು.