ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಹಾಸ್ಟೆಲ್‌ನಲ್ಲಿ ರಾತ್ರಿ ಊಟ ಸೇವಿಸಿ 9 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಭಾನುವಾರ ನಡೆದಿದೆ.ಭಾನುವಾರ ರಾತ್ರಿ ಹಾಸ್ಟೆಲ್‌ನಲ್ಲಿ ಚಿತ್ರಾನ್ನ ಸೇವಿಸಿದ ಬಳಿಕ 9 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ 5 ವಿದ್ಯಾರ್ಥಿನಿಯರನ್ನು ಪಟ್ಟಣದ ಮಳಖೇಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯಾವುದೇ ವಿದ್ಯಾರ್ಥಿನಿಯರಿಗೆ ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ಶಾಸಕ ರಾಜುಗೌಡ ಭೇಟಿ:ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಸುದ್ದಿ ತಿಳಿದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. ಆರೋಗ್ಯದ ಕುರಿತು ವೈದ್ಯರ ಜೊತೆ ಸಮಾಲೋಚನೆ ನಡೆಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು, ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲ್ ಅಧಿಕಾರಿಗಳ ಜೊತೆ ಚರ್ಚಿಸಿ, ಘಟನೆಗೆ ಕಳಪೆ ಆಹಾರ ಪೂರೈಕೆ ಕಾರಣವಾಗಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ಆರೋಗ್ಯ ಹಾಗೂ ಶಿಕ್ಷಣಕ್ಕೆ ತೊಂದರೆ ಆಗದ ರೀತಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.ಪಟ್ಟಣದಲ್ಲಿರುವ ಎಲ್ಲಾ ವಸತಿ ನಿಲಯಗಳನ್ನು ಹೊಸ ಕಟ್ಟಡಗಳಿಗೆ ಸ್ಥಳಾಂತರ ಮಾಡಲಾಗಿದೆ. ಇದು ಒಂದು ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿ ಹಲವು ವರ್ಷಗಳಿಂದ ನಡೆಸಲಾಗುತ್ತಿದೆ. ನಾನು ಶಾಸಕನಾದ ಮೇಲೆ ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಸುಮಾರು ₹6.5 ಕೋಟಿ ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿ, ಸುಸಜ್ಜಿತ ಕಟ್ಟಡ ಪೂರ್ಣಗೊಳಿಸಲಾಗಿದೆ. ಈ ಹಾಸ್ಟೆಲ್ ನೂತನ ಕಟ್ಟಡಕ್ಕೆ ಶೀಘ್ರದಲ್ಲಿ ಶಿಫ್ಟ್ ಮಾಡಲಾಗುವುದು ಎಂದು ಹೇಳಿದರು.
ಇದೇ ವೇಳೆ ತಹಸೀಲ್ದಾರ್ ಪ್ರಕಾಶ ಸಿಂದಗಿ, ಜಿಲ್ಲಾ ಉಪ ನಿರ್ದೇಶಕ ಮಹೇಶ ಪೋತದಾರ, ಸಿಂದಗಿ ಸಹಾಯಕ ನಿರ್ದೇಶಕ ಭವಾನಿ ಪಾಟೀಲ, ಪಪಂ ಸದಸ್ಯ ಶಾಂತಯ್ಯ ಜಡಿಮಠ, ಮುಖಂಡರಾದ ಎಂ.ಡಿ.ಮುಲ್ಲಾ, ಮಹಾಂತೇಶ ವಂದಾಲ, ಡಿಎಸ್ಎಸ್ ತಾಲೂಕು ಘಟಕದ ಸಂಚಾಲಕ ರಾಜಕುಮಾರ ಸಿಂದಗೇರಿ, ಬಸವರಾಜ ಇಂಗಳಗಿ, ಸಾಯಬಣ್ಣ ದಳಪತಿ, ಪ್ರಶಾಂತ ಭೂತಾಳೆ, ಯಮನೂರಿ ಹರಿಜನ, ಮಾಂತೇಶ ಚಲವಾದಿ, ವಾರ್ಡನ್ ನಫೀಸಾ ಬೇಗಂ, ಸರ್ವೇಶ ಆಲಮೇಲ ಸೇರಿದಂತೆ ಅಧಿಕಾರಿಗಳು, ಪಾಲಕರು ಹಾಗೂ ಮುಖಂಡರು ಇದ್ದರು.ಕಳಪೆ ಆಹಾರ ಪೂರೈಕೆಯೇ ಕಾರಣ: ಗುಡಿಮನಿ ಆರೋಪ
ಹಾಸ್ಟೆಲ್‌ಗೆ ಸರಬರಾಜು ಮಾಡುವ ಏಜೆನ್ಸಿಗಳು ಕಳಪೆ ಮಟ್ಟದ ಆಹಾರಗಳನ್ನು ವಿತರಣೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿನಿಯರು ಊಟದ ನಂತರ ಅಸ್ವಸ್ಥಗೊಂಡಿದ್ದಾರೆ. ಅಧಿಕಾರಿಗಳು ಕೂಡಲೇ ಕಳಪೆ ಆಹಾರ ಪೂರೈಸಿದ ಏಜೆನ್ಸಿಯವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿಎಸ್ಎಸ್ ಸಂಘಟನೆ ಜಿಲ್ಲಾ ಸಂಚಾಲಕ ಪ್ರಕಾಶ ಗುಡಿಮನಿ ಆಗ್ರಹಿಸಿದ್ದಾರೆ. ಸಂಘಟನೆ ಮುಖಂಡರೊಂದಿಗೆ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ಡಿ.ಬಿ.ಭೋವಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.;Resize=(128,128))
;Resize=(128,128))
;Resize=(128,128))